ಮುಂಬೈ,ಅ.8- ಹಿರಿಯ ನಟ, ಪದಶ್ರೀ ಪುರಸ್ಕೃತ ನಾನಾ ಪಾಟೇಕರ್ ಅವರು ಗುರುವಾರ ಬೆಳಗಿನ ಜಾವ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.75 ವರ್ಷದ ನಟನ ನಿಧನದ ಸುದ್ದಿ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದ್ದು, ಸಾವಿಗೂ ನಾಲ್ಕು ದಿನಗಳ ಮುನ್ನ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಆಡಿದ್ದ ಮಾತುಗಳು ಇದೀಗ ಗಮನ ಸೆಳೆಯುತ್ತಿವೆ.
ಅಕ್ಟೋಬರ್ 4ರಂದು ಗೋವಾದ ಡೋನಾ ಪೌಲಾದ ತಾಜ್ ಸಿಡೇಡ್ ಡಿ ಗೋವಾದಲ್ಲಿ ನಡೆದ ಸಾಮ್ರಾಟ್ ಕ್ಲಬ್ ಇಂಟರ್‌ನ್ಯಾಷನಲ್‌ನ ಸ್ಥಾಪನಾ ಸಮಾರಂಭದಲ್ಲಿ ನಾನಾ ಪಾಟೇಕರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು ಜೀವನ ಮತ್ತು ಸಾವಿನ ಕುರಿತು ತಮದೇ ಆದ ರೀತಿಯಲ್ಲಿ ಚಿಂತನೆ ಹಂಚಿಕೊಂಡಿದ್ದರು.
ನಾವೆಲ್ಲರೂ ಒಂದು ದಿನ ಹೋಗಲೇಬೇಕು. ನಾಳೆ ನಾನು ಇಲ್ಲಿ ಇರುತ್ತೇನೋ ಇಲ್ಲವೋ ಎಂದು ನನಗೆ ತಿಳಿದಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ಜೀವನವು ಅಂತಿಮವಾಗಿ ಆ ಹಂತವನ್ನು ತಲುಪುತ್ತದೆ. ಆದರೆ ಅದು ಸಂಭವಿಸುವ ಮೊದಲು, ನಾನು ಮಾಡಬೇಕೆಂದು ಬಯಸುವುದನ್ನು ಮಾಡಲು ನನಗೆ ಸಾಧ್ಯವಾಗುತ್ತದೆಯೇ ಎಂದು ನನ್ನನ್ನೇ ಕೇಳಿಕೊಳ್ಳಬೇಕು ಎಂದು ಅವರು ಮರಾಠಿಯಲ್ಲಿ ಹೇಳಿದ್ದರು.
ಆ ಸಂದರ್ಭದಲ್ಲಿ ನಾನಾ ಪಾಟೇಕ್ಕರ್ ಅವರು ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರನ್ನು ಸರಿಸಿ, ಅವರ ಕಾರ್ಯಶೈಲಿಯನ್ನು ಪ್ರಶಂಸಿಸಿದ್ದರು. ಬಿಳಿ ಕುರ್ತಾ ಹಾಗೂ ಬಿಳಿ ಸ್ಕಾರ್ಫ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರ ಈ ಕೊನೆಯ ಸಾರ್ವಜನಿಕ ಭಾಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ಸಾವಿಗೂ ಮುನ್ನವೇ ತಮ್ಮ ಅಂತ್ಯಕ್ರಿಯೆ ಬಗ್ಗೆ ಮಾತನಾಡಿದ್ದ ನಾನಾ
ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ಅವರು ತಮ ಅಂತ್ಯಕ್ರಿಯೆಗೆ ಬೇಕಾದ ಸಿದ್ಧತೆಯನ್ನು ಈಗಾಗಲೇ ಮಾಡಿ ಕೊಂಡಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಸೆಪ್ಟೆಂಬರ್ 2023ರಲ್ಲಿ ದಿ ವ್ಯಾಕ್ಸಿನ್ ವಾರ್ ಚಿತ್ರದ ಪ್ರಚಾರದ ಸಂದರ್ಭದಲ್ಲಿ ನಡೆದ ಸಂದರ್ಶನವೊಂದರಲ್ಲಿ, ಅವರು ಜೀವನದ ಬಗ್ಗೆ ಮಾತನಾಡುತ್ತಿದ್ದಂತೆಯೇ ಸಾವಿನ ಬಗ್ಗೆಯೂ ಮುಚ್ಚುಮರೆಯಿಲ್ಲದೆ ಮಾತನಾಡಿದರು ಮತ್ತು ತಮ ಅಂತ್ಯಕ್ರಿಯೆಗೆ ಬೇಕಾದ ಸಿದ್ಧತೆಯನ್ನು ಈಗಾಗಲೇ ಮಾಡಿಕೊಂಡಿರುವುದಾಗಿ ಬಹಿರಂಗಪಡಿಸಿದರು.
2023ರ ಸೆ.15ರ ಮಾಧ್ಯಮವೊಂದರ ಸಂದರ್ಶನದಲ್ಲಿ ನಾನಾ ತಾವು ಸಾವನ್ನು ನಂಬುವುದಾಗಿಯೂ ಮತ್ತು ಒಂದು ದಿನ ತಾವು ಈ ಲೋಕವನ್ನು ಬಿಟ್ಟು ಹೋಗಲೇಬೇಕು ಎಂಬ ಅರಿವು ತಮಗಿದೆ. ನನಗೆ 12 ಮಣ ಕಟ್ಟಿಗೆ ಬೇಕಾಗುತ್ತದೆ. ಅದೇ ನನ್ನ ಅಂತಿಮ ಆಸ್ತಿ. ಅದರೊಂದಿಗೇ ನಾನು ಹೋಗಲು ಬಯಸುತ್ತೇನೆ. ತಮ ಅಂತ್ಯಕ್ರಿಯೆಗಾಗಿ ಆ ಕಟ್ಟಿಗೆಯನ್ನು ಈಗಾಗಲೇ ಎತ್ತಿಟ್ಟಿದ್ದಾಗಿ ಹೇಳಿದ್ದರು.
ಆದರೆ ತಮದೇ ಅಂತ್ಯಕ್ರಿಯೆಯ ಬಗ್ಗೆ ಮಾತನಾಡುತ್ತಿದ್ದಾಗಲೂ, ತಮದೇ ಆದ ಶೈಲಿಯಲ್ಲಿ ಸಾವಿನ ಕುರಿತಾದ ಆ ಸಂಭಾಷಣೆಯನ್ನು ಅನಿರೀಕ್ಷಿತವಾಗಿ ಹಾಸ್ಯಮಯಗೊಳಿಸಿದ್ದರು. ತಮ ಅಂತ್ಯಕ್ರಿಯೆಯ ಸಮಯದಲ್ಲಿ ಒಣ ಕಟ್ಟಿಗೆಯನ್ನೇ ಬಳಸಬೇಕೆಂದು ಅವರು ನಿರ್ದಿಷ್ಟವಾಗಿ ಕೋರಿದರು. ನಾನು 12 ಮಣ ಕಟ್ಟಿಗೆಯನ್ನು ಎತ್ತಿಟ್ಟಿದ್ದೇನೆ. ಅವು ಒಣಗಿವೆ.
ಅವುಗಳಲ್ಲೇ ನನ್ನನ್ನು ದಹನ ಮಾಡಿ. ಹಸಿ ಕಟ್ಟಿಗೆಯನ್ನು ಬಳಸಬೇಡಿ ಎಂದಿದ್ದರು. ಅದಕ್ಕೆ ಅವರು ನೀಡಿದ ಕಾರಣ ಇನ್ನೂ ಕುತೂಹಲಕಾರಿಯಾಗಿತ್ತು. ಹಸಿ ಕಟ್ಟಿಗೆಯಿಂದ ಹೊಗೆ ಬರುತ್ತದೆ, ಇದರಿಂದ ಅಂತ್ಯಕ್ರಿಯೆಗೆ ಸೇರಿದ ಸ್ನೇಹಿತರು ಮತ್ತು ಇತರರ ಕಣ್ಣುಗಳಲ್ಲಿ ನೀರು ಬರುತ್ತದೆ . ಮತ್ತು ಹಾಗಾದರೆ, ಅದು ತಪ್ಪು ತಿಳುವಳಿಕೆಗೆ ಕಾರಣವಾಗಬಹುದು ಎಂದು ನಾನಾ ತಮಾಷೆಯಾಗಿ ಹೇಳಿದ್ದರು.
