ಬೆಂಗಳೂರು,ಸೆ.12 ರಾಜ್ಯದ ನಾಗರಿಕರಿಗೆ ವಿವಿಧ ಸರ್ಕಾರಿ ಇಲಾಖೆಗಳ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಒದಗಿಸುವ ಉದ್ದೇಶದಿಂದ ರೂಪಿಸಲಾಗುತ್ತಿರುವ ಸೇವಾ ಒನ್ ಯೋಜನೆ ಮಹತ್ವದ ಹಂತ ತಲುಪಿದೆ. ರಾಜ್ಯದಲ್ಲಿರುವ ಒಟ್ಟು ಸುಮಾರು 2,456 ಸರ್ಕಾರಿ ಸೇವೆಗಳ ಪೈಕಿ 2,300 ಸೇವೆಗಳನ್ನು ಒಂದೇ ವೇದಿಕೆಯಡಿ ತರಲು ಸರ್ಕಾರ ಉದ್ದೇಶಿಸಿದೆ.
ನಾಗರಿಕರು ವಿವಿಧ ಇಲಾಖೆಗಳ ಕಚೇರಿಗಳಿಗೆ ಅಲೆದಾಡುವುದು, ಪ್ರತ್ಯೇಕ ಪೋರ್ಟಲ್‌ಗಳಲ್ಲಿ ನೋಂದಣಿ ಮಾಡಿಕೊಳ್ಳುವುದು ಹಾಗೂ ಒಂದೇ ದಾಖಲೆಗಳನ್ನು ಮತ್ತೆ ಮತ್ತೆ, ಇದೇ ಹೆಸರಿನಲ್ಲಿ ಸಲ್ಲಿಸುವಖಾಸಗಿ ಆನ್‌ಲೈನ್ ಪೋರ್ಟಲ್ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಸಮಸ್ಯೆಯನ್ನು ಕಡಿಮೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಆದರೆ ಇದೇ ಹೆಸರಿನಲ್ಲಿ ಖಾಸಗಿ ಆನ್‌ಲೈನ್ ಪೋರ್ಟಲ್ ಈಗಾಗಲೇ ಕಾರ್ಯನಿರ್ವಹಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸೇವಾ ಒನ್ ಎಂಬ ಹೆಸರನ್ನೇ ಮುಂದುವರಿಸಬೇಕೇ ಎಂಬ ಬಗ್ಗೆ ಮರುಚಿಂತನೆ ಆರಂಭವಾಗಿದೆ. ಸರ್ಕಾರಿ ಮತ್ತು ಖಾಸಗಿ ವೇದಿಕೆಗಳ ನಡುವೆ ನಾಗರಿಕರಿಗೆ ಗೊಂದಲ ಉಂಟಾಗಬಾರದು ಹಾಗೂ ಸರ್ಕಾರಿ ಸೇವೆ ಪಡೆಯಲು ಮುಂದಾಗುವವರು ತಪ್ಪಾಗಿ ಖಾಸಗಿ ಪೋರ್ಟಲ್‌ಗೆ ತೆರಳಬಾರದು ಎಂಬ ಕಾರಣಕ್ಕೆ ಪರ್ಯಾಯ ಹೆಸರಿನ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ನಮ ಸೇವೆ ಸೇರಿದಂತೆ ಕೆಲವು ಹೆಸರುಗಳು ಪರಿಗಣನೆಯಲ್ಲಿವೆ ಎನ್ನಲಾಗಿದೆ. ಅಂತಿಮ ನಿರ್ಧಾರ ಇನ್ನೂ ಕೈಗೊಳ್ಳಲಾಗಿಲ್ಲ.
ಕೃತಕ ಬುದ್ಧಿಮತ್ತೆ ನೆರವು: ಹೊಸ ವೇದಿಕೆಯ ವಿಶೇಷತೆಯಾಗಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಹಾಯಕ ವ್ಯವಸ್ಥೆ ರೂಪಿಸಲಾಗುತ್ತಿದೆ. ನಾಗರಿಕರು ತಮಗೆ ಬೇಕಾದ ಸೇವೆಯನ್ನು ಗುರುತಿಸುವುದು, ಯಾವ ದಾಖಲೆಗಳು ಅಗತ್ಯ, ಯಾವ ಇಲಾಖೆಯಿಂದ ಅನುಮತಿ ಪಡೆಯಬೇಕು ಮತ್ತು ಯಾವ ವರ್ಗದಲ್ಲಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ಎಐ ಮೂಲಕ ತಿಳಿದುಕೊಳ್ಳಲು ಸಾಧ್ಯವಾಗಲಿದೆ.
ಇನ್ನೂ 156 ಸೇವೆಗಳು ಬಾಕಿ:
ಒಟ್ಟು 2,456 ಸರ್ಕಾರಿ ಸೇವೆಗಳ ಪೈಕಿ ಸುಮಾರು 156 ಸೇವೆಗಳನ್ನು ಇನ್ನೂ ಆನ್‌ಲೈನ್ ವ್ಯವಸ್ಥೆಗೆ ತರಬೇಕಿದೆ. ಈ ಸೇವೆಗಳನ್ನು ಡಿಜಿಟಲ್ ವೇದಿಕೆಗೆ ಸೇರಿಸುವ ಕುರಿತು ಸಂಬಂಧಿತ ಇಲಾಖೆಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಇದರ ಜೊತೆಗೆ ಮೋಟಾರು ವಾಹನಗಳಿಗೆ ಸಂಬಂಧಿಸಿದ ಕೆಲವು ಸೇವೆಗಳು ಸೇರಿದಂತೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಸೇವೆಗಳನ್ನು ವೇದಿಕೆಗೆ ಸೇರಿಸಲು ಅಗತ್ಯ ಅನುಮತಿಗಳನ್ನು ಪಡೆಯುವ ಪ್ರಯತ್ನವೂ ನಡೆಯಲಿದೆ.
ಡಿಜಿಲಾಕರ್ ಜೋಡಣೆ:
ಪ್ರಸ್ತುತ ಒಂದೇ ಲಾಗಿನ್ ವ್ಯವಸ್ಥೆಯಿದ್ದರೂ, ವಿವಿಧ ಇಲಾಖೆಗಳು ಕೇಳುವ ದಾಖಲೆಗಳನ್ನು ನಾಗರಿಕರು ಪ್ರತ್ಯೇಕವಾಗಿ ಸಲ್ಲಿಸಬೇಕಾದ ಪರಿಸ್ಥಿತಿ ಇದೆ. ಇದನ್ನು ಬದಲಿಸಲು ಮುಂದಿನ ಹಂತದಲ್ಲಿ ಡಿಜಿಲಾಕರ್ ವ್ಯವಸ್ಥೆಯೊಂದಿಗೆ ವೇದಿಕೆಯನ್ನು ಸಂಯೋಜಿಸುವ ಯೋಜನೆ ಇದೆ.
ಮೊಬೈಲ್ ಆ್ಯಪ್ ಬಿಡುಗಡೆ:
ಸೇವಾ ಒನ್‌ನ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಅ.2ರಂದು ಆ್ಯಪ್ ಬಿಡುಗಡೆ ಮಾಡುವ ಉದ್ದೇಶವಿದೆ.
ಗ್ರಾಮಗಳಿಗೂ ಕಿಯೋಸ್ಕ್ ವ್ಯವಸ್ಥೆ :
ಡಿಜಿಟಲ್ ಸೇವೆಗಳನ್ನು ಸ್ವತಃ ಬಳಸಲು ಸಾಧ್ಯವಾಗದ ನಾಗರಿಕರಿಗಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಫ್ರಾಂಚೈಸಿಗಳ ಮೂಲಕ ಸೇವಾ ಕಿಯೋಸ್ಕ್‌ಗಳನ್ನು ಸ್ಥಾಪಿಸುವ ಯೋಜನೆಯೂ ಇದೆ. ಈ ಕಿಯೋಸ್ಕ್‌ಗಳಲ್ಲಿ ನಾಗರಿಕರಿಗೆ ಖಾತೆ ತೆರೆಯುವುದು, ಸರ್ಕಾರಿ ಸೇವೆಗಳಿಗೆ ಅರ್ಜಿ ಸಲ್ಲಿಸುವುದು ಹಾಗೂ ಅರ್ಜಿಯ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ಪೂರ್ಣಗೊಳಿಸುವಲ್ಲಿ ನೆರವು ನೀಡಲಾಗುತ್ತದೆ. ಇದಕ್ಕಾಗಿ ಪ್ರತಿ ಅರ್ಜಿಗೆ ಸುಮಾರು 10-15 ರೂ. ನಾಮಮಾತ್ರ ಶುಲ್ಕ ವಿಧಿಸುವ ಸಾಧ್ಯತೆಯಿದ್ದು, ಮುದ್ರಣ ಅಥವಾ ಇತರೆ ಲೇಖನ ಸಾಮಗ್ರಿಗಳಿಗೆ ಹೆಚ್ಚುವರಿ ಶುಲ್ಕ ಇರಬಹುದು.
ಕರ್ನಾಟಕದಲ್ಲಿ ಸರ್ಕಾರಿ ಸೇವೆಗಳನ್ನು ಆನ್‌ಲೈನ್ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಹೊಸದಲ್ಲ. ವಿವಿಧ ಇಲಾಖೆಗಳು ವರ್ಷಗಳಿಂದ ಪ್ರತ್ಯೇಕ ಆನ್‌ಲೈನ್ ಪೋರ್ಟಲ್‌ಗಳು ಮತ್ತು ಸೇವಾ ವ್ಯವಸ್ಥೆಗಳನ್ನು ಬಳಸುತ್ತಿವೆ. ಆದರೆ ಇದರಿಂದ ಒಂದೇ ನಾಗರಿಕನು ವಿವಿಧ ಇಲಾಖೆಗಳಿಗಾಗಿ ಬೇರೆ ಬೇರೆ ವೆಬ್‌ಸೈಟ್‌ಗಳು, ಲಾಗಿನ್‌ಗಳು ಮತ್ತು ದಾಖಲೆ ಸಲ್ಲಿಕೆ ಪ್ರಕ್ರಿಯೆಗಳನ್ನು ಎದುರಿಸುವ ಪರಿಸ್ಥಿತಿ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ಸೇವಾ ಒನ್ ಮಾದರಿಯ ಏಕೀಕೃತ ವೇದಿಕೆಯ ಕಲ್ಪನೆ ಮಹತ್ವ ಪಡೆಯುತ್ತಿದೆ. ಇದರ ಯಶಸ್ಸು ಕೇವಲ ಹೆಚ್ಚಿನ ಸಂಖ್ಯೆಯ ಸೇವೆಗಳನ್ನು ಒಂದೇ ಪೋರ್ಟಲ್‌ಗೆ ಸೇರಿಸುವುದರಲ್ಲಿ ಮಾತ್ರವಲ್ಲ; ಸೇವೆಯನ್ನು ಹುಡುಕುವುದು, ಸರಿಯಾದ ದಾಖಲೆ ಗುರುತಿಸುವುದು, ಅರ್ಜಿ ಸಲ್ಲಿಸುವುದು, ಇಲಾಖೆಗಳ ನಡುವೆ ಮಾಹಿತಿ ಹಂಚಿಕೆ, ಅರ್ಜಿಯ ಸ್ಥಿತಿ ತಿಳಿದುಕೊಳ್ಳುವುದು ಮತ್ತು ಅಂತಿಮವಾಗಿ ಪ್ರಮಾಣಪತ್ರ/ಅನುಮೋದನೆ ಪಡೆಯುವವರೆಗಿನ ಪ್ರಕ್ರಿಯೆಯನ್ನು ಸರಳಗೊಳಿಸುವುದರಲ್ಲಿದೆ.
ಸೇವಾ ಒನ್ ಎಂಬ ಹೆಸರನ್ನು ಬದಲಿಸುವ ಬಗ್ಗೆ ಸರ್ಕಾರದ ಚಿಂತನೆ ನಡೆಯುತ್ತಿರುವುದು ಡಿಜಿಟಲ್ ಆಡಳಿತದಲ್ಲಿ ಬ್ರ್ಯಾಂಡ್ ಗುರುತು ಮತ್ತು ನಾಗರಿಕರ ವಿಶ್ವಾಸ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ. ಸರ್ಕಾರಿ ಪೋರ್ಟಲ್ ಮತ್ತು ಅದೇ ಹೆಸರಿನ ಖಾಸಗಿ ಸೇವೆ ಒಂದೇ ಸಮಯದಲ್ಲಿ ಅಸ್ತಿತ್ವದಲ್ಲಿದ್ದರೆ, ವಿಶೇಷವಾಗಿ ಮೊದಲ ಬಾರಿಗೆ ಆನ್‌ಲೈನ್ ಸೇವೆ ಬಳಸುವ ನಾಗರಿಕರಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಇದೆ.
ಹೀಗಾಗಿ ಅಂತಿಮ ಹೆಸರಿನ ಆಯ್ಕೆಯೊಂದಿಗೆ ಅಧಿಕೃತ ಸರ್ಕಾರಿ ಡೊಮೇನ್, ಮೊಬೈಲ್ ಆರ್ಯಪ್ ಅಧಿಕೃತ ಗುರುತು, ಡೇಟಾ ಸುರಕ್ಷತೆ, ಗೌಪ್ಯತೆ ಮತ್ತು ನಕಲಿ ಪೋರ್ಟಲ್‌ಗಳಿಂದ ನಾಗರಿಕರ ರಕ್ಷಣೆಗಳಿಗೂ ಸಮಾನ ಆದ್ಯತೆ ನೀಡಬೇಕಿದೆ.
