ನವದೆಹಲಿ,ಮೇ24- ಚಲಿಸುತ್ತಿದ್ದ ರೈಲಿನಲ್ಲಿ ಆತಾಹುತಿ ಬಾಂಬ್ ಸ್ಫೋಟಗೊಂಡ ಪರಿಣಾಮ 24 ಮಂದಿ ಸಾವನ್ನಪ್ಪಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಕ್ವೆಟ್ಟಾ ಪ್ರಾಂತ್ಯದಲ್ಲಿ ನಡೆದಿದೆ. ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದ ಚಮನ್ ಫಾಟಕ್ ರೈಲ್ವೆ ನಿಲ್ದಾಣದ ಬಳಿ ಇಂದು ಸಂಭವಿಸಿದ ಪ್ರಬಲ ಸ್ಫೋಟದಿಂದಾಗಿ ಒಂದು ರೈಲು ಭಾಗಶಃ ಹಾನಿಗೊಳಗಾಗಿದೆ. ಸಮೀಪದಲ್ಲಿ ನಿಲ್ಲಿಸಲಾಗಿದ್ದ ಸುಮಾರು 10 ವಾಹನಗಳು ಸಹ ಹಾನಿಗೀಡಾಗಿವೆ.
ನಗರದಾದ್ಯಂತ ಭದ್ರತಾ ಸಂಸ್ಥೆಗಳನ್ನು ಸಹ ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. ರಕ್ಷಣಾ ಮತ್ತು ತುರ್ತು ತಂಡಗಳು ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡಲು ಸಾಧ್ಯವಾಗುವಂತೆ ಸ್ಫೋಟದ ಪ್ರದೇಶದ ಬಳಿ ಜನರು ಸೇರದಂತೆ ಗೃಹ ಸಚಿವರ ವಕ್ತಾರ ಬಾಬರ್ ಯೂಸಫ್‌ಜೈ ಮನವಿ ಮಾಡಿದ್ದಾರೆ. ಸ್ಫೋಟದ ಬಳಿಕ ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ಪಾಕಿಸ್ತಾನ ಮಿಲಿಟರಿ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ಇದಾಗಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ ಹೇಳಿದೆ.
ಸ್ಫೋಟದ ಬಲವು ಎಷ್ಟು ಪ್ರಬಲವಾಗಿತ್ತೆಂದರೆ ಹತ್ತಿರದ ಕಟ್ಟಡಗಳ ಕಿಟಕಿಗಳು ಮತ್ತು ಗಾಜಿನ ಫಲಕಗಳು ಪುಡಿಪುಡಿಯಾಗಿವೆ. ರಕ್ಷಣಾ ಕಾರ್ಯಾಚರಣೆಗಳು ಪ್ರಾರಂಭವಾದ ತಕ್ಷಣ ಹಲವಾರು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಸುರಕ್ಷತಾ ಕ್ರಮವಾಗಿ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್‌್ಸಪ್ರೆಸ್ ಅನ್ನು ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಕಂಟೋನೆಂಟ್‌ನಿಂದ ತೆರಳುತ್ತಿದ್ದ ವೇಳೆ ಬಲೂಚಿಸ್ತಾನ ಪ್ರದೇಶದ ಕ್ವೆಟ್ಟಾದ ಚೆಮನ್ ಫಾಟಕ್ ಬಳಿ ಆತಾಹುತಿ ಬಾಂಬ್ ಸ್ಫೋಟಗೊಂಡಿದೆ. ಬಾಂಬ್ ಸ್ಫೋಟದ ಪರಿಣಾಮ ರೈಲಿನ ಹಲವು ಬೋಗಿಗಳು ಹಳಿತಪ್ಪಿದ್ದು, ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ರೈಲ್ವೆ, ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದ್ದು, ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
