ಬೆಂಗಳೂರು,ನ.3- ನಗರದ ಪಟ್ಟಂದೂರು ಅಗ್ರಹಾರದ ನಿವಾಸಿ ವಕೀಲ ಮಂಜುನಾಥ್ ಅವರನ್ನು ಕೊಲೆ ಮಾಡಿ ಪರಾರಿಯಾಗಿರುವ ಬಿಹಾರದ ಇಬ್ಬರು ಫುಡ್ ಡೆಲಿವರಿ ಬಾಯ್‌ಗಳಿಗಾಗಿ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ದೇಶದಾದ್ಯಂತ ವ್ಯಾಪಕ ಶೋಧ ನಡೆಸುತ್ತಿದ್ದಾರೆ.
ಕೊಲೆ ಆರೋಪಿಗಳನ್ನು ಬಂಧಿಸಲು ರಚಿಸಲಾಗಿರುವ ವೈಟ್‌ಫೀಲ್‌್ಡ ವಿಭಾಗದ 8 ವಿಶೇಷ ತಂಡಗಳು ಬಿಹಾರ, ದೆಹಲಿ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಹುಡುಕಾಟ ನಡೆಸುತ್ತಿವೆ.
ಮಂಜುನಾಥ್ ಅವರನ್ನು ಕೊಲೆ ಮಾಡಿದ ಆರೋಪಿಗಳಲ್ಲಿ ಒಬ್ಬ ನಗರದಿಂದ ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸಿ ನಂತರ ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ. ಇನ್ನೊಬ್ಬ ಆರೋಪಿ ಫುಡ್ ಡೆಲಿವರಿ ಮಾಡುವ ಬೈಕ್‌ನಲ್ಲಿ ಹೈದ್ರಾಬಾದ್‌ಗೆ ತೆರಳಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂಬುದು ತಂಡಗಳ ತನಿಖೆಯಿಂದ ಗೊತ್ತಾಗಿದೆ.
ಒಂದು ತಂಡ ಅವರೂರಾದ ಬಿಹಾರಕ್ಕೂ ತೆರಳಿ ಅವರ ಮನೆಗಳಲ್ಲಿ ಶೋಧ ಮಾಡಿದೆ. ಆರೋಪಿಗಳು ಕೊಲೆ ಮಾಡಿದ ನಂತರ ಅವರುಗಳ ಊರಿಗೆ ಹೋಗಿಲ್ಲ ಎಂಬುದು ಸಹ ತಿಳಿದುಬಂದಿದೆ.ಬಿಹಾರಕ್ಕೆ ಹೋಗುವ ಎಲ್ಲಾ ರೈಲು, ಬಸ್ಸುಗಳನ್ನೂ ಸಹ ಪೊಲೀಸರ ತಂಡಗಳು ಪರಿಶೀಲನೆ ನಡೆಸುತ್ತಿದ್ದರೂ ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ.ಆ ಇಬ್ಬರು ಫುಡ್ ಡೆಲಿವರಿ ಬಾಯ್‌ಗಳು ಬಾಡಿಗೆ ಹಣ ಕೊಡುವ ನೆಪದಲ್ಲಿ ವಕೀಲ ಮಂಜುನಾಥ್ ಅವರನ್ನು ಮನೆಯಿಂದ ಹೊರಗೆ ಕರೆಸಿ ಅವರ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
