ಬೆಂಗಳೂರು, ಫೆ.14- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಮುಂದೆ ನಾಡಿನ ಮುಖಂಡರಾಗಲಿರುವ ನಾಯಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕರೊಬ್ಬರು ಸಂಬೋಧಿಸುವ ಮೂಲಕ ಪ್ರಸಕ್ತ ರಾಜಕೀಯ ಬೆಳವಣಿಗೆಯಲ್ಲಿ ಕುತೂಹಲ ಕೆರಳಿಸಿದ್ದಾರೆ. ಅದರಲ್ಲೂ ಸರ್ಕಾರಿ ಸಮಾವೇಶದ ವೇದಿಕೆಯಲ್ಲೇ ಈ ರೀತಿ ಹೇಳಿಕೆ ನೀಡಿರುವುದು ನಾನಾರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಪ್ರಸ್ತುತ ರಾಜಕೀಯ ಬೆಳವಣಿಗೆಗಳಲ್ಲಿ ಪ್ರತಿಯೊಂದು ಮಾತುಗಳು ಬೇರೆ ಬೇರೆ ರೀತಿಯ ಅರ್ಥ-ಅನರ್ಥಗಳಿಗೆ ಕಾರಣವಾಗುತ್ತಿವೆ.
ಜನಪ್ರತಿನಿಧಿಗಳಾಗಿರುವವರು ಅಳೆದು ತೂಗಿ ಮಾತನಾಡಬೇಕಿದೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು, ಸಚಿವರು ಮತ್ತು ಪ್ರಭಾವಿ ನಾಯಕರ ಮಾತುಗಳು ವ್ಯಾಪಕ ಪರಿಣಾಮ ಬೀರುತ್ತವೆ. ರಾಜ್ಯ ಸರ್ಕಾರಕ್ಕೆ ಸಾವಿರ ದಿನಗಳು ತುಂಬಿದ ಸಂದರ್ಭದಲ್ಲಿ ಹಾವೇರಿಯಲ್ಲಿ ಇಂದು ರಾಜ್ಯ ಸರ್ಕಾರದ ವತಿಯಿಂದ ಭೂ ಸಮರ್ಪಣಾ ಗ್ಯಾರಂಟಿ ಸಮಾವೇಶ ಹಾಗೂ ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ, ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಪ್ರಾರಂಭ ಕಾರ್ಯಕ್ರಮ 12 ಗಂಟೆಯಾದರೂ ಶುರುವಾಗಿರಲಿಲ್ಲ. ಆರಂಭದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿದರು. ಈಹಂತದಲ್ಲಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ಸಚಿವರು ಹಾಜರಿರಲಿಲ್ಲ.
ಗೃಹ ಸಚಿವ ಪರಮೇಶ್ವರ್ ಎಲ್ಲರಿಗಿಂತ ಮೊದಲು ಬಂದಿದ್ದರು. ಔಪಚಾರಿಕವಾಗಿ ಸ್ವಾಗತ ಕೋರುವಾಗ ರಾಘವೇಂದ್ರ ಹಿಟ್ನಾಳ್ ಅವರು ಪರಮೇಶ್ವರ್ ಅವರನ್ನು ಕುರಿತು ಹಿರಿಯ ಸಚಿವರು ಮಾರ್ಗದರ್ಶಕರು ಹಾಗೂ ಮುಂದೆ ನಾಡಿನ ಮುಖಂಡರಾಗಲಿರುವ ಡಾ.ಜಿ.ಪರಮೇಶ್ವರ್ ಅವರಿಗೆ ಸ್ವಾಗತ ಎಂದು ಸಂಬೋಧಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಅವರ ಬೆಂಬಲಿಗರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ನಾನಾ ರೀತಿಯ ತಂತ್ರಗಾರಿಕೆಗಳನ್ನು ರೂಪಿಸುತ್ತಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅವರ ಬದಲಾವಣೆಯಾದರೆ ದಲಿತ ಸಮುದಾಯಕ್ಕೆ ಸೇರಿದ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಪರ್ಯಾಯ ತಂತ್ರಗಾರಿಕೆಯನ್ನು ಮುಂದಿಟ್ಟಿದೆ. ದಲಿತ ಸಮುದಾಯದ ನಾಯಕರಲ್ಲಿ ಪರಮೇಶ್ವರ್ ಮುಂಚೂಣಿಯಲ್ಲಿದ್ದಾರೆ. ಇದು ಡಿಕೆ ಶಿವಕುಮಾರ್ ಅವರ ಬಣಕ್ಕೆ ಮಾಸ್ಟರ್ ಸ್ಟ್ರೋಕ್ ನೀಡಿದಂತಾಗಿದೆ.
ರಾಘವೇಂದ್ರ ಹಿಟ್ನಾಳ್ ಅವರು ಸಿದ್ದರಾಮಯ್ಯ ಪರಮಾಪ್ತ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಬಾಕಿ ಇರುವ ಅವಧಿಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂಬುದು ಪ್ರತಿತಂತ್ರದ ಪ್ರಮುಖ ಬೇಡಿಕೆಯಾಗಿದೆ. ಖುದ್ದು ರಾಘವೇಂದ್ರ ಹಿಟ್ನಾಳ್ ಅವರೇ ಪರಮೇಶ್ವರ್ ಅವರನ್ನು ಮುಂದಿನ ನಾಯಕರಾಗುವವರು ಎಂದು ಹೇಳುವ ಮೂಲಕ ಹೊಸ ಆಯಾಮ ನೀಡಿದ್ದಾರೆ.
ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಒಂದು ಕಾಲದಲ್ಲಿ ಪರಮಾಪ್ತ ಸ್ನೇಹಿತರಾಗಿದ್ದರು. ಆದರೆ ಪರಮೇಶ್ವರ್ ಉಪಮುಖ್ಯಮಂತ್ರಿಯಾಗಲು ಡಿ.ಕೆ.ಶಿವಕುಮಾರ್ ಅಡ್ಡಿ ಪಡಿಸಿದ್ದಾರೆ ಎಂಬ ವದಂತಿಗಳಿವೆ. ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ಸಿದ್ದರಾಮಯ್ಯ ಗುಂಪಿಗೆ ನೆಗೆದಿದ್ದರು.
ಪರಮೇಶ್ವರ್ ಕೂಡ ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಅವರ ನೇತೃತ್ವದಲ್ಲಿ 2013ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆದರೆ ಆ ಸಂದರ್ಭದಲ್ಲಿ ಪರಮೇಶ್ವರ್ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದರಿಂದ ಮುಖ್ಯಮಂತ್ರಿ ಹುದ್ದೆಯ ಹೈಪೋಟಿಯಿಂದ ಹೊರಗುಳಿದಿದ್ದರು.
ನಂತರದಲ್ಲಿ ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾದರು. ನಾನಾ ರೀತಿಯ ಸಂಘಟನಾತಕ ಚಟುವಟಿಕೆಗಳ ಮೂಲಕ ಕಾಂಗ್ರೆಸ್ ಅನ್ನು ಮರಳಿ ಅಧಿಕಾರ ಹಿಡಿಯುವಂತೆ ಮಾಡುವಲ್ಲಿ ಪ್ರಮುಖರಾಗಿದ್ದಾರೆ. ಅದೇ ಹಕ್ಕಿನ ಪ್ರತಿಪಾದನೆಯನ್ನು ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡಲು ಸಿದ್ಧರಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಈ ಜಿದ್ದಾಜಿದ್ದಿನ ನಡುವೆ ಪರಮೇಶ್ವರ್ ಹೆಸರು ನುಸುಳಿ ಬರುತ್ತಿದೆ.
