ಬೆಂಗಳೂರು,ಮೇ 6- ಇಂತಹ ಪೊಳ್ಳು ಬೆದರಿಕೆಗೆ ನಾನು ಹೆದರುವುದಿಲ್ಲ, ಕಾನೂನು ಮೂಲಕ ಹೋರಾಟಕ್ಕೂ ಸಿದ್ಧ ಎಂದು ಸಾ.ರಾ ಗೋವಿಂದು ತಿರುಗೇಟು ನೀಡಿದ್ದಾರೆ. ನಾನು ಎಂದಿಗೂ ರಾಜಿ ಆಗಿಲ್ಲ. ಕಳೆದ 48 ವರ್ಷಗಳ ನನ್ನ ಜೀವನದಲ್ಲಿ ಕನ್ನಡ ನಾಡು, ನುಡಿ, ಜಲದ ಬಗ್ಗೆ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಅದಕ್ಕೆ ಶಕ್ತಿ ಮತ್ತು ಸ್ಫೂರ್ತಿ ಡಾ. ರಾಜ್ಕುಮಾರ್ ಎಂದು ಸಾ.ರಾ ಗೊವಿಂದು ಹೇಳಿದ್ದಾರೆ.
ನಟ ಚೇತನ್ ಅಹಿಂಸಾ ಆರೋಪಗಳಿಗೆ ಸಾ.ರಾ ಗೋವಿಂದು ತಿರುಗೇಟು ನೀಡಿದ್ದಾರೆ. ಡಾ.ರಾಜ್ಕುಮಾರ್ ಅವರ ಕೊಡುಗೆ ನಾಡಿನ ಜನರಿಗೆ ಗೊತ್ತು. ಅವರ ಬಗ್ಗೆ ಮಾತನಾಡುವ ಯೋಗ್ಯತೆ ಆತನಿಗಿಲ್ಲ ಎಂದು ಕಿಡಿಕಾರಿದ್ದಾರೆ.
ತಮ ವಿರುದ್ಧ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿದ್ದಾರೆ . ನಾನೇನು ಅವನ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದೀನಾ? ಸುಳ್ಳು ಆರೋಪ ಮಾಡಿ ದೂರು ಕೊಟ್ಟಿದ್ದಾನೆ ಎಂದು ಟೀಕಿಸಿದರು. ಹೈಕೋರ್ಟ್ನಲ್ಲಿ ಈಗಾಗಲೇ ಯಾವುದೇ ಪ್ರತಿಭಟನೆ ಮೆರವಣಿಗೆ ಮಾಡಬಾರದು ಎಂದು ಹೇಳಿದ್ದಾರೆ. ಅದೇ ರೂಲ್ಸ್ ಫಾಲೋ ಮಾಡುತ್ತಿದ್ದೇವೆ. ಆದರೆ ಚೇತನ್ ಮಾಡುತ್ತಿರುವ ಕುಚೋದ್ಯದ ವಿರುದ್ಧ ಕನ್ನಡ ಸಂಘಟನೆಗಳು ಜೊತೆಗೂಡಿ ದೂರು ನೀಡುತ್ತೇವೆ. ನಾವೇನೂ ಸತ್ತಿಲ್ಲ, ಬದುಕಿದ್ದೇವೆ. ನ್ಯಾಯಕ್ಕಾಗಿ ಎಲ್ಲರೂ ಕೈ ಜೋಡಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಚೇತನ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಾ.ರಾ.ಗೋವಿಂದು ದೂರು
ವರನಟ ಡಾ.ರಾಜ್ಕುಮಾರ್ ಅವರ ಸಾರಕ ಕುರಿತಂತೆ ಹಗುರವಾದ ಹೇಳಿಕೆ ನೀಡಿ ವಿವಾದ ಸೃಷ್ಟಿಸಿ, ಅಶಾಂತಿ ವಾತಾವರಣ ನಿರ್ಮಿಸಲು ಯತ್ನಿಸುತ್ತಿರುವ ಅಹಿಂಸಾ ಚೇತನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ, ಕನ್ನಡ ಪರ ಹೋರಾಟಗಾರರಾದ ಸಾ.ರಾ.ಗೋವಿಂದು ಅವರು ಶೇಷಾದ್ರಿಪುರಂ ಪೊಲೀಸ್ಠಾಣೆಗೆ ದೂರು ನೀಡಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 192 ಅಡಿ ಪ್ರಕರಣ ದಾಖಲಾಗಿದೆ. ದೂರು ನೀಡಿರುವ ಸಾ.ರಾ. ಗೋವಿಂದು ಅವರು, ಅಹಿಂಸಾ ಚೇತನ್ ಎಂಬ ವ್ಯಕ್ತಿ ತಾನು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡು ಡಾ.ರಾಜ್ಕುಮಾರ್ ಸಾರಕಕ್ಕಾಗಿ ರಾಜ್ಯ ಸರ್ಕಾರ 2006ರಲ್ಲಿ ನೀಡಿದ್ದ ಎರಡೂವರೆ ಎಕರೆಯ ಭೂಮಿಯ ಬಗ್ಗೆ ಪ್ರಚೋದನಕಾರಿ ಮಾತುಗಳನ್ನಾಡುತ್ತಿದ್ದಾರೆ.
ಈತನ ಹೇಳಿಕೆ ನಾಡಿನ ಪ್ರಖ್ಯಾತ ನಟರ ಅಭಿಮಾನಿಗಳ ನಡುವೆ ದ್ವೇಷ ಮತ್ತು ಉದ್ವಿಗ್ನತೆ ನಿರ್ಮಾಣ ಮಾಡುತ್ತಿದೆ. ಹೀಗಾಗಿ ಅಹಿಂಸಾ ಚೇತನ್ ವಿರುದ್ಧ ಕಠಿಣಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ತಾವು ಮತ್ತು ಕನ್ನಡಪರ ಸಂಘಟನೆಗಳ ಮುಖಂಡರು ಅಹಿಂಸಾ ಚೇತನ್ ಅವರ ಮನೆಯ ಬಳಿಗೆ ಹೋಗಿದ್ದು, ವಿವಾದಿತ ಹೇಳಿಕೆ ಕುರಿತು ಪ್ರಶ್ನೆ ಕೇಳುವ ಸಲುವಾಗಿ ಮಾತ್ರ. ಅಲ್ಲಿ ಗಲಾಟೆ ಮಾಡುವ ಅಥವಾ ಅವರ ಮನೆಗೆ ನುಗ್ಗುವ ಯಾವ ಉದ್ದೇಶಗಳೂ ತಮಗೆ ಇರಲಿಲ್ಲ ಎಂದು ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿವಾದದ ಕೇಂದ್ರ ಬಿಂದು:
ಏಪ್ರಿಲ್ 24 ರಂದು ಅಹಿಂಸಾ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ರಾಜ್ಕುಮಾರ್ ಸಾರಕಕ್ಕೆ ಜಾಗ ನೀಡಿರುವುದನ್ನು ಪ್ರಶ್ನಿಸಿದ್ದರು. ಇದು ನಾಡಿನ ಸಾಂಸ್ಕೃತಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜ್ಕುಮಾರ್ ನಾಡಿನ ಅಸಿತೆಯಾಗಿದ್ದು, ಅವರ ವಿರುದ್ಧ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿ ಬಂದಿದ್ದವು. ಕನ್ನಡಪರ ಹೋರಾಟಗಾರರೊಂದಿಗೆ ಸಾ.ರಾ. ಗೋವಿಂದು ಅವರು ಅಹಿಂಸಾ ಚೇತನ್ ಅವರ ಮನೆ ಬಳಿ ಹೋಗಿ ಪ್ರಶ್ನಿಸುವ ಪ್ರಯತ್ನ ಮಾಡಿದ್ದರು. ತಮ ಮನೆ ಬಳಿ ಬಂದು ದಾಂಧಲೆ ಮಾಡಿ, ಬೆದರಿಸುವ ಪ್ರಯತ್ನಗಳಾಗಿವೆ ಎಂದು ಚೇತನ್ ದೂರು ನೀಡಿದ್ದರು.
ರಾಜ್ಕುಮಾರ್ ಅವರ ಸಾರಕದ ಬಗ್ಗೆ ಮಾತನಾಡಿರುವ ಅಹಿಂಸಾ ಚೇತನ್ ಕುರಿತಂತೆ ನಾಡಿನ ಜನರಲ್ಲಿ ಭಾರೀ ಪ್ರಮಾಣದ ಅಸಮಾಧಾನಗಳಿವೆ. ಅಮೆರಿಕಾದ ಪ್ರಜೆಯಾಗಿರುವ ಅಹಿಂಸಾ ಚೇತನ್ ಸಾಗರೋತ್ತರ ಭಾರತೀಯ ನಾಗರಿಕತ್ವ (ಒಸಿಐ) ಕಾರ್ಡ್ ಪಡೆದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಆದರೆ ಇತ್ತೀಚೆಗೆ ಅವರ ಹೇಳಿಕೆಗಳು ನಾನಾ ರೀತಿಯ ವಿವಾದಗಳನ್ನು ಸೃಷ್ಟಿಸುತ್ತಿವೆ, ಶಾಂತಿ ಭಂಗಕ್ಕೂ ಕಾರಣವಾಗಿವೆ. ಕೂಡಲೇ ಅವರನ್ನು ಗಡೀಪಾರು ಮಾಡಬೇಕೆಂದು ನಿನ್ನೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಬಳಿಕ ಸಾ.ರಾ. ಗೋವಿಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
