Homeರಾಜ್ಯ"ಡಿಎಂಕೆ ಬೆನ್ನಿಗೆ ಚೂರಿ ಹಾಕಿ ಗೆದ್ದೆತ್ತಿನ ಬಾಲ ಹಿಡಿದ ಕಾಂಗ್ರೆಸ್‌‍"

“ಡಿಎಂಕೆ ಬೆನ್ನಿಗೆ ಚೂರಿ ಹಾಕಿ ಗೆದ್ದೆತ್ತಿನ ಬಾಲ ಹಿಡಿದ ಕಾಂಗ್ರೆಸ್‌‍”

Congress stabs DMK : R Ashok

ಬೆಂಗಳೂರು, ಮೇ 6- ತತ್ವ, ಸಿದ್ದಾಂತ ಯಾವುದೂ ಇಲ್ಲದ ಕಾಂಗ್ರೆಸ್‌‍ ನಿಜ ಬಣ್ಣ ತಮಿಳು ನಾಡಿನಲ್ಲಿ ಬಟಾಬಯಲು ಆಗಿದೆ. ಗೆದ್ದೆತ್ತಿನ ಬಾಲ ಹಿಡಿಯುವ ಸಂಸ್ಕೃತಿ ಇರುವ ಈ ಪಕ್ಷವನ್ನು ಬೆಂಬಲಿಸುವವರು ಯೋಚಿಸಿ ತೀರ್ಮಾನ ಮಾಡಬೇಕಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಡಿಎಂಕೆ ಬೆನ್ನಿಗೆ ಚೂರಿ ಹಾಕಿರುವ ಕಾಂಗ್ರೆಸ್‌‍ ಎಂದಿಗೂ ನಂಬಿಕೆಗೆ ಅರ್ಹವಲ್ಲದ ರಾಜಕೀಯ ಪಕ್ಷ ಎಂಬುದು ಮತ್ತೆಮತ್ತೆ ಸಾಬೀತಾಗುತ್ತದೆ. ಜನ ಅದಕ್ಕಾಗಿಯೇ ಈ ಪಕ್ಷವನ್ನು ದೇಶದಿಂದಲೇ ತಿರಸ್ಕರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಡಿಎಂಕೆಗೆ ಕೈ ಕೊಟ್ಟು ಅಧಿಕಾರದ ಆಸೆಗಾಗಿ ತತ್ವ ಸಿದ್ದಾಂತಗಳಿಗೆ ತಿಲಾಂಜಲಿ ಹಾಡಿ ಟಿವಿಕೆಗೆ ಬೆಂಬಲ ಕೊಡಲು ಮುಂದಾಗಿದೆ. ಇವರನ್ನು ನಂಬಿಕೊಂಡು ಬಿಜೆಪಿಗೆ ಹಾದಿಬೀದಿಯಲ್ಲಿ ಟೀಕೆ ಮಾಡುತ್ತಿದ್ದ ಡಿಎಂಕೆ ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಗೆದ್ದೆತ್ತಿನ ಬಾಲ ಹಿಡಿಯುವುದು ಕಾಂಗ್ರೆಸ್‌‍ನ ಜಾಯಮಾನ. ಅಧಿಕಾರ ಇದ್ದ ಕಡೆ ಮತ್ತು ಅಧಿಕಾರಕ್ಕೆ ಬರುವವರ ಜೊತೆ ಓಡಿಹೋಗುವುದು ಆ ಪಕ್ಷಕ್ಕೆ ಅಂಟಿದ ರೋಗ. ಇಂಡಿ ಕೂಟದವರು ಇದನ್ನು ಅರ್ಥ ಮಾಡಿಕೊಂಡು ಯೋಚಿಸಿ ನಿರ್ಧರಿಸಬೇಕು. ಇಲ್ಲದಿದ್ದರೆ ಇವರನ್ನು ನಂಬಿದವರು ಬೀದಿಗೆ ಬರುತ್ತಾರೆ ಎಂದು ಎಚ್ಚರಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧೆ ಮಾಡಿದವರು ಡಿಎಂಕೆ ಸೋಲುತ್ತಿದ್ದಂತೆ ಟಿವಿಕೆಗೆ ಬೆಂಬಲ ಕೊಡುತ್ತಿದ್ದಾರೆ. ಯಾರು ಇವರನ್ನು ನಂಬಿದ್ದರೋ ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ. ಯಾವ ರೀತಿ ನಂಬಿದವರಿಗೆ ಕೈ ಕೊಡುತ್ತದೆ ಎಂಬುದಕ್ಕೆ ಈ ನಿದರ್ಶನವೇ ಸ್ಪಷ್ಟ ಸಾಕ್ಷಿ. ಹೀಗಾಗಿ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ಪ್ರವೇಶ ಮಾಡಿದ ನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಫುಲ್‌ ಸೈಲಂಟ್‌ ಆಗಿದ್ದಾರೆ. ಅವರ ಕಂಡ ಕನಸು ಭಗ್ನವಾಗುತ್ತದೆ ಎಂದು ವ್ಯಂಗ್ಯವಾಡಿದರು.

ಕನಕಪುರದ ಬಂಡೆ ವಿಧಾನಸೌಧಕ್ಕೆ ಮೆಟ್ಟಿಲು ಆಗುತ್ತೇನೆ ಎಂದಿದ್ದರು. ಜೊತೆಗೆ ಕಡಿದರೆ ಶಿಲ್ಪಿಯೂ ಆಗುತ್ತೇನೆ ಎಂದಿದ್ದರು. ಈಗ ಡಿಕೆಶಿ ಕಡಿಯುತ್ತಲೇ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಈಗ ಸಿಎಂ ಸಿದ್ದರಾಮಯ್ಯನವರಿಗೆ ಮೆಟ್ಟಿಲೂ ಆಗಿದ್ದಾರೆ. ಮುಂದೆ ಖರ್ಗೆಗೂ ಮೆಟ್ಟಿಲು ಆಗಬಹುದು. ಅವರ ಕೈಯಲ್ಲಿ ಶಿಲೆ ಕೆತ್ತಲು ಆಗುವುದಿಲ್ಲ. ಕೊನೆಗೆ ಡಿಕೆಶಿ ಮೆಟ್ಟಿಲು ಆಗುವುದು ಗ್ಯಾರೆಂಟಿ ಎಂದು ಲೇವಡಿ ಮಾಡಿದರು.

ವೋಟ್‌ ಡಕಾಯಿತಿ ಯಾರು ಮಾಡಿದ್ದಾರೆ, ವೋಟ್‌ ಚೋರಿ ಯಾರು ಮಾಡಿದ್ದಾರೆ ಎಂಬುದು ಎಲ್ಲವೂ ಸ್ಪಷ್ಟವಾಗಿದೆ. ಸೋತರೆ ಇವಿಎಂ ಸಮಸ್ಯೆ, ಗೆದ್ದರೆ ಇವಿಎಂ ಸರಿ ಇದೆ ಎಂದು ಹೇಳುವುದು ಕಾಂಗ್ರೆಸ್‌‍ ಜಾಯಮಾನ.

ಸೋತಾಗ ಚುನಾವಣಾ ಆಯೋಗವು ಸರಿ ಇಲ್ಲ. ಗೆದ್ದಾಗ ಎಲ್ಲವೂ ಸರಿ ಇದೆ ಎಂದು ಹೇಳುವುದು ಕಾಂಗ್ರೆಸ್‌‍ನ ಹಳೇ ಚಾಳಿ. ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ಗಾಂಧಿಯವರಿಗೆ ಮೊದಲು ಸುಳ್ಳು ಪತ್ತೆಗೆ ಒಳಪಡಿಸಬೇಕು. ಕೇರಳದಲ್ಲಿ ಇವಿಎಂ ಸರಿ ಇದೆ ಎಂದು ಹೇಳುವ ಅವರು ಬಂಗಾಳದಲ್ಲಿ ಸರಿ ಇಲ್ಲ ಎನ್ನುತ್ತಾರೆ ಎಂದು ಅಶೋಕ್‌ ಲೇವಡಿ ಮಾಡಿದರು.

RELATED ARTICLES

Latest News