ಗದಗ,ಜ.20- ಲಕ್ಕುಂಡಿ ಶಿಲ್ಪಕಲೆಗಳ, ದೇವಾಲಯಗಳ ಸ್ವರ್ಗ, ಇಲ್ಲಿ ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನ ಕಾರ್ಯ ಆರಂಭ ವಾಗಿದೆ. ಕೋಟೆ ಗೋಡೆಯಲ್ಲಿ ಹುದುಗಿ ಹೋಗಿರುವ ರಾಶಿ ರಾಶಿ ಶಿಲ್ಪಕಲೆಗಳು ಪತ್ತೆಯಾಗಿವೆ. ಉತ್ಖನನ ನಡೆಯುತ್ತಿರುವ ಜಾಗದಲ್ಲಿ ಇಂದು ಕೂಡ ಪುರಾತನ ಶಿಲೆಗಳು ಪತ್ತೆಯಾಗಿವೆ. ಪುರಾತನ ಕಾಲದ ಕೊಡಲಿ, ಗಂಟೆ, ನಾಗರ ಮೂರ್ತಿ, ಶಿವಲಿಂಗದ ಪಾಣಿ ಪೀಠ ಸೇರಿದಂತೆ ಹಲವು ಅವಶೇಷಗಳು ಪತ್ತೆಯಾಗಿದ್ದು, ತೀವ್ರ ಕುತೂಹಲ ಮೂಡಿಸುತ್ತಿದೆ. ಇನ್ನು ಈ ವೇಳೆ ಖಾವಿಧಾರಿಯೊಬ್ಬ ಉತ್ಖನನ ಜಾಗಕ್ಕೆ ಎಂಟ್ರಿ ಕೊಟ್ಟು ವಿಚಿತ್ರವಾಗಿ ವರ್ತಿಸಿದ್ದಾರೆ.
ಇಂದು ಸಿಕ್ಕಿದ್ದೇನು? : ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನ ಕಾರ್ಯ ಆರಂಭವಾಗಿದೆ. ಇಂದು 4 ನೇ ದಿನದ ಉತ್ಖನನ ಕಾರ್ಯ ನಡೆದಿದೆ. ಐತಿಹಾಸಿಕ ದೇವಾಲಯಗಳಿಗೆ ಬಳಸಿದ ಕಲಾಕೃತಿ ಹೊಂದಿರುವ ಶಿಲೆಗಳು ಪತ್ತೆಯಾಗಿದೆ. ಕಲೆಗಳ ಶ್ರೀಮಂತ ನಾಡು ಲಕ್ಕುಂಡಿ ರಾಜ್ಯದ ಜನರ ಕುತೂಹಲ ಹೆಚ್ಚಿಸುತ್ತಿದೆ. ಚಿನ್ನದಲ್ಲಿ ಮಾತ್ರ ಶ್ರೀಮಂತಿಕೆ ಅಲ್ಲ. ಕಲೆಗಳಲ್ಲೂ ಶ್ರೀಮಂತಿಕೆ ಹೊಂದಿದ ನಾಡು ಲಕ್ಕುಂಡಿ ಅನ್ನೋದು ಶಿಲ್ಪಕಲೆಗಳು ಸಾರಿ ಸಾರಿ ಹೇಳುತ್ತಿವೆ.
4ನೇ ದಿನದ ಉತ್ಖನನ ಜಾಗದಲ್ಲಿ ಆಯುಧ ಮಾದರಿಯ ಕಲ್ಲು ಪತ್ತೆಯಾಗಿದೆ. ಇದು ಶಿಲಾಯುಗದಲ್ಲಿ ಬಳಕೆಯಾಗುತ್ತಿದ್ದ ಕೊಡಲಿ ಆಕಾರದ ಶಿಲೆ ಅಂಡಾಕಾರದಲ್ಲಿದ್ದು, ಮುಂದಿನ ಒಂದು ಭಾಗ ಮೊನಚಾಗಿದೆ. ಐತಿಹಾಸಿಕ ದೇವಸ್ಥಾನದ ಸ್ತಂಭದ ಮತ್ತು ವಿತಾನದ (ಛತ್ತು) ಮಧ್ಯದಲ್ಲಿರುವ ಬೋದಿಗೆ ಭಾಗದ ಅವಶೇಷ ಪತ್ತೆ ಆಗಿದೆ. ಇದೇ ವೇಳೆ ಲೋಹದ ಗಂಟೆಯೊಂದು ಪತ್ತೆಯಾಗಿದೆ.
ಪುರಾತತ್ವ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಶಿಲೆಯು ಮೂರು ಅಡಿ ಆಳದಲ್ಲಿ ದೊರಕಿದೆ. ಈ ಹಿಂದೆ ಉತ್ಖನನದಲ್ಲಿ ಶಿವಲಿಂಗ ಪಾಣಿಪೀಠ ಮತ್ತು ಶಿವಲಿಂಗ ಹಾಗೂ ನಾಗರ ಚಿತ್ರವಿರುವ ಅವಶೇಷಗಳು ಪತ್ತೆಯಾಗಿದ್ದವು.
ಅರ್ಧ ನಾರೀಶ್ವರ ದೇವಾಲಯ ಪತ್ತೆ
ತಾಲೂಕಿನ ಲಕ್ಕುಂಡಿ ಗ್ರಾಮದ ಬಗೆದಷ್ಟೂ ಪುರಾತನ ವಸ್ತುಗಳು ಪತ್ತೆಯಾಗುತ್ತಲೇ ಇವೆ. ಇದೀಗ ಚೌಕಿಮಠ ಕುಟುಂಬದ ವಾಸದ ಮನೆಯೊಳಗೆ ಅಪರೂಪದ ಐತಿಹಾಸಿಕ ಅರ್ಧನಾರೀಶ್ವರ ದೇವಸ್ಥಾನ ಪತ್ತೆಯಾಗಿದ್ದು, ಪುರಾತತ್ವ ವಲಯದಲ್ಲಿ ಸಂಚಲನ ಮೂಡಿಸಿದೆ.
ಶಿವಯ್ಯ ಹಾಗೂ ಶೇಖರಯ್ಯ ಚೌಕಿಮಠ ಎಂಬವರ ಕುಟುಂಬ ದೇವಸ್ಥಾನದೊಳಗೆ ಮನೆ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದೆ. ಈ ಮನೆಯಲ್ಲಿ ಸುಮಾರು 5-6 ಮಂದಿ ವಾಸ ಮಾಡುತ್ತಿದ್ದಾರೆ. ದೇವಸ್ಥಾನದ ಹೊರಭಾಗದಲ್ಲಿ ಮನೆಯಿದೆ ಎನ್ನಲಾಗಿದೆ.
ಮೇಲ್ನೋಟಕ್ಕೆ ಸಾಮಾನ್ಯ ಮನೆ ಎನಿಸಿದರೂ, ಒಳಗೆ ಪ್ರವೇಶಿಸಿದರೆ ಸುಮಾರು ಹತ್ತು ಅಡಿ ಮಣ್ಣಿನಡಿಯಲ್ಲಿ ಹುದುಗಿದ್ದ ಚಾಲುಕ್ಯರ ಕಾಲದ ಪುರಾತನ ದೇವಾಲಯ ಪತ್ತೆಯಾಗಿದ್ದು ಇದು ನಾಲ್ಕನೇ ಶತಮಾನದ ಶಿವನ ಮೂರ್ತಿಯಾಗಿದೆ.
ಇತಿಹಾಸಕಾರರ ಪ್ರಕಾರ, ಇದು 10-11ನೇ ಶತಮಾನದ ಚಾಲುಕ್ಯರ ಕಾಲದ ಈಶ್ವರ ದೇವಸ್ಥಾನವಾಗಿದ್ದು, ವಾಸ್ತುಶಿಲ್ಪ ಹಾಗೂ ಶಿಲ್ಪಕಲೆ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ದೇವಸ್ಥಾನದ ಗರ್ಭಗುಡಿ, ಶಿಲ್ಪ ಕೆತ್ತನೆಗಳು ಹಾಗೂ ವಾಸ್ತು ವಿನ್ಯಾಸಗಳು ಪ್ರಾಚೀನ ಪರಂಪರೆಯನ್ನು ಪ್ರತಿಬಿಂಬಿಸುತ್ತಿವೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಪುರಾತತ್ವ ಇಲಾಖೆ ದೇವಸ್ಥಾನವನ್ನು ವಶಕ್ಕೆ ಪಡೆದು ಜೀರ್ಣೋದ್ಧಾರ ಮಾಡುವ ಯೋಜನೆ ರೂಪಿಸುತ್ತಿದೆ. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಶೀಘ್ರದಲ್ಲೇ ಸಂರಕ್ಷಣಾ ಕಾರ್ಯ ಆರಂಭಿಸುವ ಭರವಸೆ ನೀಡಿದ್ದಾರೆ.
ಆದರೆ, ಚೌಕಿಮಠ ಕುಟುಂಬದ ಶರಣಯ್ಯ ಹಾಗೂ ಶೇಖರಯ್ಯ ಚೌಕಿಮಠ ಅವರು ಸ್ಪಷ್ಟಪಡಿಸಿರುವಂತೆ ಇಲ್ಲಿ ವಾಸಿಸುವವರೆಲ್ಲರೂ ಬಡ ಕುಟುಂಬಗಳು. ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಮಾತ್ರ ಮನೆ ಬಿಟ್ಟು ಕೊಡಲು ಸಿದ್ಧ ಎಂದಿದ್ದಾರೆ. ಪ್ರಸ್ತುತ ಈ ಆವರಣದಲ್ಲಿ ಶರಣಯ್ಯ ಚೌಕಿಮಠ, ಶೇಖರಯ್ಯ ಚೌಕಿಮಠ, ಬಸವ್ವ ಈರಯ್ಯ ಚೌಕಿಮಠ, ಕೊಟ್ರಯ್ಯ ಚೌಕಿಮಠ ಹಾಗೂ ಈರಮ ಶಂಕ್ರಯ್ಯ ಚೌಕಿಮಠ ಕುಟುಂಬಗಳು ವಾಸಿಸುತ್ತಿವೆ.
ಇತಿಹಾಸ ಮತ್ತು ಜನಜೀವನದ ನಡುವಿನ ಈ ಮಹತ್ವದ ಪ್ರಕರಣದಲ್ಲಿ ಮುಂದಿನ ನಿರ್ಧಾರ ಸರ್ಕಾರದ ಕೈಯಲ್ಲಿದ್ದು, ಲಕ್ಕುಂಡಿ ಗ್ರಾಮ ಮತ್ತೊಮೆ ಐತಿಹಾಸಿಕ ಕೇಂದ್ರಬಿಂದುವಾಗಿ ಹೊರಹೊಮುವ ಸಾಧ್ಯತೆ ದಟ್ಟವಾಗಿದೆ.
