Tuesday, July 16, 2024
Homeಇದೀಗ ಬಂದ ಸುದ್ದಿಇಡಿ ದಾಳಿ ಬಗ್ಗೆ ನನಗೆ ಮಾಹಿತಿ ಇಲ್ಲ : ಗೃಹಸಚಿವ ಪರಮೇಶ್ವರ್‌

ಇಡಿ ದಾಳಿ ಬಗ್ಗೆ ನನಗೆ ಮಾಹಿತಿ ಇಲ್ಲ : ಗೃಹಸಚಿವ ಪರಮೇಶ್ವರ್‌

ಬೆಂಗಳೂರು,ಜು.10- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌‍ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಇಂದು ಮತ್ತೆ ವಿಚಾರಣೆ ಮುಂದುವರೆದಿದೆ. ಈ ನಡುವೆ ಇಡಿ ದಾಳಿ ನಡೆದಿರುವುದು ತಮಗೆ ಮಾಹಿತಿ ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ರಾಜ್ಯಸರ್ಕಾರಕ್ಕೆ ಯಾವುದೇ ಮಾಹಿತಿ ನೀಡುವುದಿಲ್ಲ. ಸ್ವತಂತ್ರವಾಗಿ ತನಿಖೆ ನಡೆಸುತ್ತಾರೆ. ದಾಳಿ ನಡೆಸುವಾಗಲೂ ಯಾವುದೇ ಮಾಹಿತಿ ನೀಡುವುದಿಲ್ಲ. ಇಂದು ಯಾವ ಹಿನ್ನೆಲೆಗೆ ದಾಳಿ ನಡೆದಿರುವುದು ಎಂದು ತಮಗೆ ಗೊತ್ತಿಲ್ಲ ಎಂದರು.

ಮಾಜಿ ಸಚಿವ ನಾಗೇಂದ್ರ ಮತ್ತು ಶಾಸಕ ದದ್ದಲ್‌ ಅವರ ಆಪ್ತ ಸಹಾಯಕರ ಹೇಳಿಕೆಗಳನ್ನು ಆಧರಿಸಿ ಎಸ್‌‍ಐಟಿ ಅಧಿಕಾರಿಗಳು ಇಬ್ಬರನ್ನು ತನಿಖೆಗೆ ಕರೆದಿದ್ದಾರೆ. ರಾಜ್ಯಸರ್ಕಾರ ಇಡೀ ಪ್ರಕರಣವನ್ನು ಎಸ್‌‍ಐಟಿ ತನಿಖೆಗೆ ವಹಿಸಿದೆ. ಮತ್ತೊಂದೆಡೆ ಬ್ಯಾಂಕಿನ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆ ನಡೆಯುತ್ತಿದೆ ಎಂದರು.

ಸಾರ್ವಜನಿಕವಾಗಿ ಚರ್ಚೆಯಾಗುವ ವಿಚಾರಗಳ ಬಗ್ಗೆ ಮಾಹಿತಿ ಇಲ್ಲದೆ ನಾವು ಹೇಳಿಕೆ ನೀಡಲು ಸಾಧ್ಯವಿಲ್ಲ. ಎಸ್‌‍ಐಟಿ ಮತ್ತು ಸಿಬಿಐ ಅಧಿಕಾರಿಗಳು ಅದನ್ನು ಗಮನಿಸುತ್ತಾರೆ. ತನಿಖೆ ನಡೆಯುವ ಹಂತದಲ್ಲಿ ನಾವು ಯಾವುದೇ ಹೇಳಿಕೆಗಳನ್ನೂ ಕೊಡುವಂತಿಲ್ಲ, ಕೊಡಲೂಬಾರದು ಎಂದು ಹೇಳಿದರು.

ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಹಗರಣವಾಗಿಲ್ಲ ಎಂದು ಯಾರೂ ಹೇಳಿಲ್ಲ. ಅಕ್ರಮವಾಗಿದೆ ಎಂಬ ಕಾರಣಕ್ಕಾಗಿಯೇ ಎಸ್‌‍ಐಟಿ ರಚಿಸಿ ತನಿಖೆ ಮಾಡಲಾಗುತ್ತಿದೆ. ಇಲ್ಲಿ ಯಾರನ್ನೂ ರಕ್ಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹುಬ್ಬಳ್ಳಿಯ ನೇಹಾ ಹಿರೇಮಠ್‌ ಪ್ರಕರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ತನಿಖೆಯಲ್ಲಿ ಯಾವ ಮಾಹಿತಿ ತಿಳಿದುಬಂದಿದೆ. ಲಭ್ಯವಿರುವ ಸಾಕ್ಷಿಗಳ ಆಧಾರದ ಮೇಲೆ ವರದಿ ನೀಡಿರುತ್ತಾರೆ.

ಬಿಜೆಪಿಯವರು ಹೇಳಿದಂತೆ ಲವ್‌ ಜಿಹಾದ್‌ ಅಂಶವನ್ನೂ ಪರಿಶೀಲಿಸಲಾಗಿರುತ್ತದೆ. ಅವರು ಹೇಳಿದಾಕ್ಷಣ ದೋಷಾರೋಪಣ ಪಟ್ಟಿಯಲ್ಲಿ ಅಂತಹ ಅಂಶಗಳನ್ನು ಸೇರ್ಪಡೆ ಮಾಡಲು ಸಾಧ್ಯವಿಲ್ಲ ಎಂದರು.

ಗ್ರೇಟರ್‌ ಬೆಂಗಳೂರು ಪ್ರಸ್ತಾವನೆ :
ಏಷ್ಯಾದಲ್ಲೇ ಬೆಂಗಳೂರು ಅತೀ ವೇಗವಾಗಿ ಬೆಳೆಯುತ್ತಿರುವ ನಗರ. ಇದಕ್ಕೆ ತಕ್ಕ ಹಾಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡುವ ಬಗ್ಗೆ ಪ್ರತಿಕ್ರಿಯಿಸಿದರು.

ಬೆಂಗಳೂರಿನ ಬೆಳವಣಿಗೆ ಅಗತ್ಯವಿದೆ. ಇದರಿಂದ ಉದ್ಯೋಗವಕಾಶಗಳು ಹೆಚ್ಚಾಗುತ್ತಿವೆ. ತುಮಕೂರನ್ನು ಗ್ರೇಟರ್‌ ಬೆಂಗಳೂರು ಮಾಡುವ ಆಲೋಚನೆಯಿದೆ. ಈ ಕುರಿತಂತೆಯೂ ನಾವು ಪ್ರಸ್ತಾವನೆ ಸಲ್ಲಿಸಲು ತಯಾರಾಗಿದ್ದೇವೆ. ತುಮಕೂರಿಗೆ ಮೆಟ್ರೊ ಮಾರ್ಗ ಕಲ್ಪಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಅಂತಾರಾಷ್ಟ್ರೀಯ ಎರಡನೇ ವಿಮಾನ ನಿಲ್ದಾಣವನ್ನು ತುಮಕೂರು ಸುತ್ತಮುತ್ತ ನಿರ್ಮಿಸುವ ಬಗ್ಗೆ ಈ ಹಿಂದೆ ಸಚಿವರಾಗಿದ್ದ ಮುರುಗೇಶ್‌ ನಿರಾಣಿ ಪ್ರಸ್ತಾಪಿಸಿದ್ದರು ಎಂದು ಹೇಳಿದರು.

ಗ್ರೇಟರ್‌ ಬೆಂಗಳೂರು ಎಂದು ಏಕಾಏಕಿ ಈಗಲೇ ಪ್ರಸ್ತಾವನೆ ಸಲ್ಲಿಸುವುದಿಲ್ಲ. ಅದಕ್ಕೆ ಅಗತ್ಯವಾಗಿರುವ ಮಾನದಂಡಗಳನ್ನು ಪೂರೈಸಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ ಕಡಿಮೆ ಸ್ಥಾನ ಗೆಲ್ಲಲು ಕಾರಣವಾಗಿರುವ ಅಂಶಗಳ ಬಗ್ಗೆ ಸತ್ಯಶೋಧನಾ ಸಮಿತಿ ಪರಿಶೀಲನೆ ನಡೆಸಲಾಗುತ್ತಿದೆ. ಹಿರಿಯ ಕಾಂಗ್ರೆಸ್‌‍ ನಾಯಕ ಬಿ.ಕೆ.ಹರಿಪ್ರಸಾದ್‌ ಕಾರ್ಯಕರ್ತರನ್ನು ಕಡೆಗಣಿಸಿದ್ದರಿಂದ ಚುನಾವಣೆಯಲ್ಲಿ ಹಿನ್ನಡೆಯಾಗಿದೆ ಎಂದು ನೀಡಿರುವ ಹೇಳಿಕೆ ಬಗ್ಗೆಯೂ ಸಮಿತಿ ಪರಿಶೀಲನೆ ನಡೆಸಬಹುದು ಎಂದು ಹೇಳಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲಾದ ನಿವೇಶನಗಳ ಮೌಲ್ಯವನ್ನು ಮುಖ್ಯಮಂತ್ರಿಯವರು ಕಡಿಮೆ ನೀಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಪರಮೇಶ್ವರ್‌ ಅವರು, ಜನ ಕಾಂಗ್ರೆಸ್‌‍ಗೆ ಮತ ಹಾಕಿ ಅಧಿಕಾರ ನೀಡಿದ್ದಾರೆ. ಬಿಜೆಪಿ ಹೇಳಿದಂತೆಲ್ಲಾ ಕೇಳಲಾಗುವುದಿಲ್ಲ.

ಈ ಮೊದಲು ನಾಲ್ಕು ವರ್ಷ ಯಾವ ರೀತಿ ಆಡಳಿತ ನಡೆಸಿದ್ದಾರೆ ಎಂದು ಗೊತ್ತಿದೆ. ಈಗ ಹಾಗಿರಬೇಕು, ಹೀಗಿರಬೇಕು ಎಂದೆಲ್ಲಾ ಹೇಳುತ್ತಿದ್ದಾರೆ. ಇವರನ್ನೇ ಕೇಳಿಕೊಂಡು ನಾವು ಆಡಳಿತ ನಡೆಸಲಾಗುವುದಿಲ್ಲ. ಜನ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದರು.

RELATED ARTICLES

Latest News