Friday, May 3, 2024
Homeರಾಜ್ಯಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧ : ಡಿಕೆಶಿ

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧ : ಡಿಕೆಶಿ

ಬೆಳಗಾವಿ,ಡಿ.14- ಮಂಡ್ಯ, ಮೈಸೂರು, ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರ ನಗರಗಳಿಗೆ ಕುಡಿಯುವ ನೀರು ಪೂರೈಸುವ ಮತ್ತು ವಿದ್ಯುತ್ ಉತ್ಪಾದನೆ ಮಾಡುವ ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ನಮ್ಮ ಸರ್ಕಾರ ಬದ್ಧವಿದೆ. ಇದಕ್ಕೆ ಕೇಂದ್ರ ಸರ್ಕಾರ ನಮ್ಮ ಜತೆ ಕೈ ಜೋಡಿಸಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ತಿನಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿ ಸದಸ್ಯ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ನೀರು, ನಮ್ಮ ಹಕ್ಕು. ನಿಮ್ಮ ನೀರು, ನಿಮ್ಮ ಹಕ್ಕು ಎಂಬ ತತ್ವದ ಮೇಲೆ ಹೋರಾಟ ಮಾಡೋಣ. ಯೋಜನೆ ಅನುಷ್ಠಾನವಾಗುವುದರಿಂದ ತಮಿಳುನಾಡಿಗೆ ನಮಗಿಂತಲೂ ಹೆಚ್ಚಿನ ಅನುಕೂಲವಾಗಲಿದೆ. ನಮಗೆ 400 ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ ಅವಕಾಶ ಸಿಕ್ಕರೆ, ಅವರಿಗೆ ಇನ್ನೂ ಹೆಚ್ಚಿನ ಕುಡಿಯುವ ನೀರಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯೋಜನೆಯನ್ನು ನಮ್ಮ ನೆಲದಲ್ಲೇ ಆರಂಭಿಸಿದರೂ ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಈ ಇಲಾಖೆಗಳ ಒಪ್ಪಿಗೆ ಇಲ್ಲದೆ, ಯೋಜನೆ ಪ್ರಾರಂಭಿಸಲಾಗುವುದು. ಈ ಯೋಜನೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ. ಇದರಿಂದಾಗಿ ಸಂಕಷ್ಟ ಪರಿಸ್ಥಿತಿಯೂ ನಿವಾರಣೆಯಾಗಲಿದೆ ಎಂದು ಅವರು ಹೇಳಿದರು.

ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ ಪ್ರಕರಣ, ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ

ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿದ್ದರೂ ರೈತರಿಗೆ ತೊಂದರೆಯಾಗದಂತೆ ಅವರ ಬೆಳೆಗಳನ್ನು ರಕ್ಷಣೆ ಮಾಡಿದ್ದೇವೆ. ಒಂದು ಕಡೆ ಸಿಡಬ್ಲ್ಯು ಆರ್ಸಿ ಮತ್ತು ಸಿಡಬ್ಲ್ಯು ಎಂಎ ನಿರ್ದೇಶನಗಳನ್ನು ಪಾಲನೆ ಮಾಡಿದ್ದೇವೆ. ಕೆಲವು ಸಂದರ್ಭಗಳಲ್ಲಿ ಅರ್ಕಾವತಿ ಮತ್ತು ಹಾರಂಗಿಯ ಹೆಚ್ಚುವರಿ ನೀರನ್ನು ಬಳಸಿಕೊಂಡು ಬಿಳಿಗುಂಡ್ಲುವಿಗೆ ಎಷ್ಟು ನೀರು ಬಿಡಬೇಕಿತ್ತೋ ಅಷ್ಟು ನೀರನ್ನು ಬಿಟ್ಟಿದ್ದೇವೆ. ಪ್ರತಿ ವರ್ಷ ತಮಿಳುನಾಡಿಗೆ 177 ಟಿಎಂಸಿ ಅಡಿ ನೀರು ಹರಿಸಬೇಕು. ಎಲ್ಲಿಯೂ ಕೂಡ ರೈತರ ಹಿತವನ್ನು ಕಡೆಗಣಿಸಿಲ್ಲ.

ಕುಡಿಯುವ ನೀರು, ರೈತರ ಬೆಳೆಗಳ ರಕ್ಷಣೆ ಮತ್ತು ಜಾನುವಾರುಗಳಿಗೆ ಮೇವು ಒದಗಿಸುವುದು ನಮ್ಮ ಆದ್ಯತೆಯಾಗಿತ್ತು. ಬರಗಾಲದ ಸಂದರ್ಭದಲ್ಲೂ ಪರಿಸ್ಥಿತಿಯನ್ನು ನಿಭಾಯಿಸಿದ್ದೇವೆ ಎಂದು ಸಮರ್ಥಿಸಿಕೊಂಡರು. ಮೇಕೆದಾಟು ಯೋಜನೆ ಸಂಬಂಧ ಕೆಳಹಂತದಲ್ಲೇ ಪರಿಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ ಪ್ರಧಾನಿ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಬಳಿಗೆ ನಮ್ಮ ರಾಜ್ಯದ ಎಲ್ಲಾ ಪಕ್ಷಗಳ ಸಂಸದರನ್ನೊಳಗೊಂಡ ನಿಯೋಗವನ್ನುಕರೆದೊಯ್ಯಲು ಸಿದ್ಧವಿದೆ. ಇದಕ್ಕೆ ನೀವು(ಬಿಜೆಪಿ) ಸಹಕಾರ ಕೊಡಿ ಎಂದು ಶಿವಕುಮಾರ್ ಅವರು ಮನವಿ ಮಾಡಿದರು.

RELATED ARTICLES

Latest News