Thursday, May 2, 2024
Homeರಾಜ್ಯಸರ್ಕಾರೀ ವೆಬ್‍ಸೈಟ್ ಹ್ಯಾಕ್ : ಆರೋಪಿಯನ್ನು ಬಂಧಿಸಿದ ಎಸ್‍ಐಟಿ

ಸರ್ಕಾರೀ ವೆಬ್‍ಸೈಟ್ ಹ್ಯಾಕ್ : ಆರೋಪಿಯನ್ನು ಬಂಧಿಸಿದ ಎಸ್‍ಐಟಿ

ಬೆಂಗಳೂರು,ಅ.5- ಬಿಟ್‍ಕಾಯಿನ್ ಹಗರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ದಳ, ಕರ್ನಾಟಕ ಸರ್ಕಾರದ ಇ -ಪ್ರಕ್ಯೂರ್ಮೆಂಟ್ ವೆಬ್‍ಸೈಟ್ ಹ್ಯಾಕ್ ಮಾಡಿದ್ದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಸಾಧಿಸಿದ್ದು, ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪಿಯನ್ನು ಪಂಜಾಬ್‍ನ ಲೂದಿಯಾನದಲ್ಲಿ ಬಂಧಿಸಿದ್ದಾರೆ.

ಅಂತರಾಷ್ಟ್ರೀಯ ಕುಖ್ಯಾತಿಯ ಶ್ರೀಕಿ ನಡೆಸಿದ ಹ್ಯಾಕರ್ ಕೃತ್ಯದಿಂದ ಸಂಪಾದಿಸಿದ ಹಣವನ್ನು ಸುರಕ್ಷಿತ ಖಾತೆಗಳಿಗೆ ವರ್ಗಾವಣೆ ಮಾಡಿರುವ ಮೂಲಗಳ ಬೆನ್ನು ಬಿದ್ದಿರುವ ಎಸ್‍ಐಟಿ ತಂಡ ಲೂದಿಯಾನದಲ್ಲಿ ಆರೋಪಿ ಅರವಿಂದರ್ ಸಿಂಗ್‍ನನ್ನು ಬಂಧಿಸಿದೆ. ಸಂಕೀರ್ಣವಾದ ಈ ಪ್ರಕರಣದಲ್ಲಿ ಜಾಲದ ಜಾಡು ಹಿಡಿದು ಹೋದಂತೆ ಒಂದೊಂದೇ ಕೊಂಡಿಗಳು ತೆರೆದುಕೊಳ್ಳುತ್ತಿವೆ. ಅದರ ಭಾಗವಾಗಿ ಅರವಿಂದರ್ ಸಿಂಗ್ ಎಸ್‍ಐಟಿ ಬಲೆಗೆ ಬಿದ್ದಿದ್ದಾನೆ.

ಶ್ರೀಕಿ ಇ-ಪ್ರಕ್ಯೂರ್ಮೆಂಟ್ ವೆಬ್‍ಸೈಟ್ ಹ್ಯಾಕ್ ಮಾಡಿದ ವೇಳೆ 1.5 ಕೋಟಿ ರೂ.ಗಳನ್ನು ದೆಹಲಿಯ ವ್ಯಕ್ತಿಗಳಿಗೆ ಹಾಗೂ ಮತ್ತೊಂದು ಚಹಂತದಲ್ಲಿ ಮಹಾರಾಷ್ಟ್ರದ ನಾಗ್ಪುರದ ವ್ಯಕ್ತಿಗಳಿಗೆ 10.5 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿರುವುದು ತನಿಖೆಯ ವೇಳೆ ಬಹಿರಂಗವಾಗಿದೆ.

ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ಮಧ್ಯಪ್ರದೇಶ ಸರ್ಕಾರ

ಅಕ್ರಮವಾದ ಹ್ಯಾಕಿಂಗ್ ಮೂಲಕ ಶ್ರೀಕಿ ಹಣ ಸಂಪಾದಿಸುತ್ತಿದ್ದರೆ ಅದನ್ನು ಬೇರೆ ಬೇರೆಯಾದ ಸುರಕ್ಷಿತ ಖಾತೆಗಳಿಗೆ ವರ್ಗಾವಣೆ ಮಾಡಲು ದೊಡ್ಡ ಜಾಲವೇ ಕೆಲಸ ಮಾಡುತ್ತಿತ್ತು. ಹಣ ಆನ್‍ಲೈನ್ ನಲ್ಲಿ ವರ್ಗಾವಣೆಯಾಗಿರುವುದರಿಂದ ಸಿಕ್ಕಿಹಾಕಿಕೊಳ್ಳುವುದಿಲ್ಲ ಎಂಬ ಧೈರ್ಯದ ಮೇಲೆ ಬಹಳಷ್ಟು ಅಕ್ರಮಗಳು ನಡೆದಿವೆ ಎಂದು ಹೇಳಲಾಗಿದೆ.

ಮನಿಲ್ಯಾಂಡ್ರಿಂಗ್ ಕಾಯ್ದೆಯನ್ನು ಉಲ್ಲಂಘಿಸಿ ಕೋಟ್ಯಂತರ ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿರುವುದು ಪ್ರಕರಣದಲ್ಲಿ ಸ್ಪಷ್ಟವಾಗಿದೆ. ಬಿಟ್‍ಕಾಯಿನ್ ಮತ್ತು ಇ-ಪ್ರಕ್ಯೂರ್ಮೆಂಟ್ ಹಗರಣದಲ್ಲಿ ಹಣ ಯಾರಿಗೆಲ್ಲಾ ತಲುಪಿದೆ ಎಂಬುದು ಮೊದಲಿನಿಂದಲೂ ಕುತೂಹಲದ ಪ್ರಶ್ನೆಯಾಗಿತ್ತು. ಅದಕ್ಕೆ ಉತ್ತರ ಕಂಡುಕೊಳ್ಳಲು ಎಸ್‍ಐಟಿ ಮಹತ್ವದ ಹೆಜ್ಜೆ ಇಟ್ಟಿದೆ.

ಈ ಮೊದಲು ಬಂಧಿತರಾಗಿದ್ದ ಆರೋಪಿಗಳ ವಿಚಾರಣೆ ಹಾಗೂ ತಾಂತ್ರಿಕ ಮಾಹಿತಿಯನ್ನು ಆಧರಿಸಿ ಎಸ್‍ಐಟಿ ತಂಡದ ತನಿಖಾಕಾಧಿರಿಗಳು ಅತ್ಯಂತ ಚಾಣಾಕ್ಷತನ ಹಾಗೂ ಬುದ್ಧಿವಂತಿಕೆಯಿಂದ ಜಾಲದ ಸಿಕ್ಕುಗಳನ್ನು ಒಂದೊಂದಾಗಿ ಬಿಡಿಸಲಾರಂಭಿಸಿದ್ದಾರೆ. ದೆಹಲಿ ಮತ್ತು ನಾಗ್ಪುರದಲ್ಲಿ ಹಣ ಸ್ವೀಕರಿಸಿದ ವ್ಯಕ್ತಿಗಳು ಮತ್ತು ಅವರಿಂದ ಮುಂದುವರೆದು ಯಾರಿಗೆಲ್ಲಾ ನಗದು ರವಾನೆಯಾಗಿದೆ ಎಂಬುದರ ಕುರಿತು ವಿಚಾರಣೆ ಮುಂದುವರೆಯುವ ಸಾಧ್ಯತೆ ಇದೆ.

ಅಂತರಾಷ್ಟ್ರೀಯ ಕುಖ್ಯಾತಿಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ 2019 ರಲ್ಲಿ ಮಾದಕ ವ್ಯಸನ ಪ್ರಕರಣವೊಂದರಲ್ಲಿ ಸಿಲುಕಿದ್ದ. ವಿಚಾರಣೆ ವೇಳೆ ಆತ ರಾಜ್ಯಸರ್ಕಾರದ ಇ-ಪ್ರಕ್ಯೂರ್ಮೆಂಟ್ ಅನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂ.ಗಳನ್ನು ಲಪಟಾಯಿಸಿರುವುದಾಗಿ ಬಾಯ್ಬಿಟ್ಟಿದ್ದ. ಅದೇ ರೀತಿ ಪೋಕರ್ ಸೇರಿದಂತೆ ವಿವಿಧ ಆನ್‍ಲೈನ್ ಗೇಮ್‍ಗಳ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿರುವುದಾಗಿ ಹೇಳಿದ್ದ. ಅದು ಮುಂದುವರೆದು ಬಿಟ್‍ಕಾಯಿನ್ ಹಗರಣಕ್ಕೂ ಸಂಪರ್ಕಗೊಂಡಿತ್ತು.

ಅ.11ರಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ 3 ದಿನ ಜೆಡಿಎಸ್‍ನ ಕೋರ್ ಕಮಿಟಿ ಪ್ರವಾಸ

ಆರಂಭದಲ್ಲಿ ತನಿಖೆ ನಡೆಸಿದ್ದ ಸಿಸಿಬಿ ಪೋಲೀಸರು ಶ್ರೀಕಿ ಸೇರಿದಂತೆ 11 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು. ಆದರೆ ಹಣ ವರ್ಗಾವಣೆಯಾದ ಮೂಲಗಳ ಕುರಿತು ತನಿಖೆ ನಡೆಸಿರುವ ಸಾಧ್ಯತೆಗಳು ಕ್ಷೀಣವಾಗಿವೆ. ಹಗರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಆ ವೇಳೆ ವಿರೋಧಪಕ್ಷದಲ್ಲಿದ್ದ ಕಾಂಗ್ರೆಸ್ ಬಿಟ್‍ಕಾಯಿನ್ ಹಗರಣದಲ್ಲಿ ಪ್ರಭಾವಿಗಳ ಪಾತ್ರ ಇದೆ ಎಂಬ ಗಂಭೀರ ಆರೋಪ ಮಾಡಿತ್ತು.

ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಗರಣವನ್ನು ಮನೀಶ್ ಕರ್ಬಿಕರ್ ನೇತೃತ್ವದಲ್ಲಿ ಎಸ್‍ಐಟಿ ತನಿಖೆಗೆ ವಹಿಸಿದೆ. ತನಿಖೆ ನಡೆಸುತ್ತಿರುವ ತಂಡಕ್ಕೆ ಮಹತ್ವದ ಸುಳಿವುಗಳು ದೊರೆತಿದ್ದು, ವಿಚಾರಣೆ ಮುಂದುವರೆದಿದೆ.

RELATED ARTICLES

Latest News