Saturday, December 14, 2024
Homeರಾಜ್ಯಹಿಜಾಬ್ ವಿಚಾರದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಸಿಗುವಂತೆ ನಿರ್ಧಾರ : ಸಚಿವ ಮಧು ಬಂಗಾರಪ್ಪ

ಹಿಜಾಬ್ ವಿಚಾರದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಸಿಗುವಂತೆ ನಿರ್ಧಾರ : ಸಚಿವ ಮಧು ಬಂಗಾರಪ್ಪ

ಬೆಂಗಳೂರು,ಡಿ.23- ಹಿಜಾಬ್ ವಿಚಾರದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಸಿಗುವಂತೆ, ಯಾರಿಗೂ ತೊಂದರೆಯಾಗದಂತೆ ಕಾನೂನಿನ ಇತಿಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿಯವರಿಗೆ ಬರ ಮರೆತು ಹೋಗಿದೆ. ಈಗ ಹಿಜಾಬ್ ಹಿಂದೆ ಬಿದ್ದಿದ್ದಾರೆ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ರೀತಿಯ ಆಲೋಚನೆಗಳನ್ನು ಮಾಡಿಯೇ ಹೇಳಿಕೆ ನೀಡಿರುತ್ತಾರೆ. ನಾನು ಅವರೊಂದಿಗೆ ಚರ್ಚೆ ಮಾಡುತ್ತೇನೆ. ಮುಖ್ಯಮಂತ್ರಿಯವರ ಹೇಳಿಕೆ ಜೊತೆಯಲ್ಲೇ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾನು ಪಂಚೆ ಹಾಕುತ್ತೇನೆ. ಉಡುಗೆ-ತೊಡುಗೆಗಳು ಭಿನ್ನವಾಗಿರುತ್ತವೆ.

ಆಹಾರ ಪದ್ಧತಿಯಲ್ಲೂ ಅದೇ ರೀತಿಯ ವಿಭಿನ್ನತೆ ಇರುತ್ತವೆ. ಅದು ಅವರ ಸ್ವಾತಂತ್ರ್ಯ. ಅದಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ಮುಖ್ಯಮಂತ್ರಿಯವರೇ ಹೇಳಿದ್ದಾರೆ. ಅವರು ವಸ್ತ್ರ ಸಂಹಿತೆ ವಿಷಯವಾಗಿ ಸ್ಪಷ್ಟ ನಿಲುವು ಹೊಂದಿದ್ದರು. ಉಡುಗೆ ತೊಡುಗೆಗಳ ಬಗ್ಗೆ ಯಾವುದೇ ನಿರ್ಬಂಧಗಳಿರಬಾರದೆಂಬುದು ಸಿದ್ದರಾಮಯ್ಯನವರ ಹಾಗೂ ಕಾಂಗ್ರೆಸ್‍ನ ನಿಲುವು. ಚುನಾವಣೆ ಸಂದರ್ಭದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆವು. ಜನ ಅದಕ್ಕಾಗಿಯೇ ನಮಗೆ ಮತ ಹಾಕಿದ್ದಾರೆ. ಅವರ ತೀರ್ಪಿನಂತೆ ನಡೆದುಕೊಳ್ಳುತ್ತೇವೆ ಎಂದರು.

ಈ ಹಿಂದೆ ಬಿಜೆಪಿ ಸರ್ಕಾರ ತೆಗೆದುಕೊಂಡಿದ್ದಂತಹ ನಿರ್ಧಾರ ನ್ಯಾಯಾಲಯದಲ್ಲಿ ಚರ್ಚೆಗೊಳಗಾಗಿತ್ತು. ಹಲವು ನಿರ್ಧಾರಗಳು ಹೊರಬಂದಿವೆ. ಈಗ ಎಸ್‍ಡಿಎಂಸಿಯವರು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದಾರೆ. ನಿನ್ನೆ ಬಹಿರಂಗ ಸಮಾವೇಶದಲ್ಲಿ ಸಾರ್ವಜನಿಕರು ಕೇಳಿದ್ದಕ್ಕಾಗಿ ಹಿಜಾಬ್ ವಿಷಯ ಕುರಿತಂತೆ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ ಎಂದರು.

ಜ.6 ರಿಂದ ಅಯೋಧ್ಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯಾರಂಭ

ಇದು ಶಿಕ್ಷಣ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ. ನ್ಯಾಯಾಂಗ ಹಾಗೂ ಇತರ ವ್ಯವಸ್ಥೆಯಿಂದಲೂ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಹಾಗಾಗಿ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ನಂತರ ಪ್ರತಿಕ್ರಿಯಿಸುವುದಾಗಿ ಹೇಳಿದರು. ಸಿದ್ದರಾಮಯ್ಯ ಅವರು ವಕೀಲರಾಗಿದ್ದರು. ಬಹಳ ತಿಳುವಳಿಕೆ ಹೊಂದಿದ್ದಾರೆ. ಅದನ್ನು ನಾವು ಪ್ರಶ್ನೆ ಮಾಡುವಂತೆಯೇ ಇಲ್ಲ. ನ್ಯಾಯಾಂಗ ನಿಂದನೆ ಸೇರಿದಂತೆ ಎಲ್ಲಾ ದೃಷ್ಟಿಕೋನದಿಂದಲೂ ಪರಿಶೀಲನೆ ನಡೆಸಿರುತ್ತಾರೆ ಎಂದರು.

ಈ ಹಿಂದೆ ಹಿಜಾಬ್ ನಿಷೇಧ ಹೇರಿದ್ದ ಬಿಜೆಪಿಯನ್ನು ಜನ ಸೋಲಿಸಿದ್ದಾರೆ. ನಮ್ಮನ್ನು ಗೆಲ್ಲಿಸಿದ್ದಾರೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡುವುದು ನಮ್ಮ ಕರ್ತವ್ಯ. ಇದು ಸೂಕ್ಷ್ಮ ವಿಚಾರ ಆಗಿರುವುದರಿಂದ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು. ಬಿಜೆಪಿಯವರಿಗೆ ಕೆಟ್ಟ ಬುದ್ದಿ ಇದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು.

ಎಲ್ಲಾ ಧರ್ಮೀಯರಿಗೂ ಸಮಾನ ಅವಕಾಶ ನೀಡುವುದಾಗಿ ಹೇಳಲಾಗಿತ್ತು. ಒಂದು ವೇಳೆ ನಾವು ಅದನ್ನು ಪಾಲಿಸದೇ ಇದ್ದರೆ ಭರವಸೆಯನ್ನು ಈಡೇರಿಸಿಲ್ಲ ಎಂಬ ಟೀಕೆಗೆ ಗುರಿಯಾಗಬೇಕಾಗುತ್ತದೆ. ಶಾಂತಿಯ ತೋಟಕ್ಕೆ ರಾಜ್ಯದ ಜನ ಮತ ಹಾಕಿದ್ದಾರೆ. ದೇಶದಲ್ಲಿ ಕೋಮು ವಿಷಬೀಜ ಬಿತ್ತಿದ್ದು ಬಿಜೆಪಿಯವರು. ಅದಕ್ಕಾಗಿಯೇ ಅವರನ್ನು ಸೋಲಿಸಿ ವಿಷಬೀಜವನ್ನು ಕಿತ್ತೆಸೆಯುತ್ತಿದ್ದಾರೆ ಎಂದರು.

24 ಗಂಟೆಯಲ್ಲಿ 752 ಹೊಸ ಕೋವಿಡ್ ಪ್ರಕರಣಗಳು, 4 ಸಾವು

ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ. ಅದನ್ನು ಬಿಜೆಪಿಯವರು ತಾಲೂಕು ಮತ್ತು ಜಿಲ್ಲಾ ಮಟ್ಟಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದರು. ಆ ವರದಿಯನ್ನು ಯಾರಿಗೆ ನೀಡಿದ್ದಾರೆ. ಪ್ರಧಾನಮಂತ್ರಿಯವರು 6 ತಿಂಗಳ ಬಳಿಕ ಮುಖ್ಯಮಂತ್ರಿಯವರ ಭೇಟಿಗೆ ಸಮಯ ನೀಡಿದ್ದಾರೆ. ಕೇಂದ್ರದಿಂದ ಬರಬೇಕಾದ ಪಾಲು ನಮಗೆ ಈವರೆಗೂ ಬಿಡುಗಡೆಯಾಗಿಲ್ಲ. ಅದನ್ನೆಲ್ಲಾ ಮರೆತು ಬಿಜೆಪಿಯವರು ಉಡುಗೆ ತೊಡುಗೆಗಳ ಹಿಂದೆ ಬಿದ್ದಿದ್ದಾರೆ ಎಂದು ಲೇವಡಿ ಮಾಡಿದರು.

RELATED ARTICLES

Latest News