ಬೆಂಗಳೂರು,ಏ.29- ಹಾಸನದ ಪೆನ್‌ಡ್ರೈವ್ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆ ತಮ್ಮ ದೂರಿನಲ್ಲಿ ಯಾರೆಲ್ಲಾ ಹೆಸರನ್ನು ಉಲ್ಲೇಖಿಸಿದ್ದಾರೋ ಅವರುಗಳ ವಿರುದ್ಧ ತನಿಖೆ ಮತ್ತು ಕ್ರಮವಾಗಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಹಿಳಾ ಆಯೋಗಕ್ಕೆ ಬಂದ ದೂರು ಆಧರಿಸಿ ರಾಜ್ಯಸರ್ಕಾರ ಬಿಕೆಸಿ ನೇತೃತ್ವದಲ್ಲಿ ಎಸ್ಪಿ ದರ್ಜೆಯ ಇಬ್ಬರು ಮಹಿಳಾ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ದಳ ರಚನೆ ಮಾಡಿದೆ. ಯಾವ ಪದ್ಧತಿಯನ್ನು ಅನುಸರಿಸಿ ಅಧಿಕಾರಿಗಳು ತನಿಖೆ ನಡೆಸುತ್ತಾರೋ ನನಗೆ ಗೊತ್ತಿಲ್ಲ, ಇದರಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದರು.
ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ 10 ರಿಂದ 15 ದಿನದೊಳಗೆ ತನಿಖೆ ಮುಗಿಸಿ ವರದಿ ನೀಡುವಂತೆ ಸೂಚಿಸಲಾಗುತ್ತದೆ. ಹಾಸನದ ಪ್ರಕರಣದಲ್ಲಿ ಆಂತರಿಕವಾಗಿ ಕಾಲಮಿತಿಯನ್ನು ತನಿಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಸಮಯದ ಮಿತಿ ಇಲ್ಲದೇ ಇದ್ದರೆ ವರ್ಷಗಟ್ಟಲೆ ತನಿಖೆ ನಡೆಯುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ನಿಯೋಜಿತ ತನಿಖಾ ದಳದ ಅಧಿಕಾರಿಗಳು ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಂಡು ಅವುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಿದೆ. ಪೆನ್‌ಡ್ರೈವ್ ವಿಡಿಯೋಗಳ ಪ್ರಮುಖ ಪಾತ್ರಧಾರಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಎಸ್‌ಐಟಿ ವಾಪಸ್ ಕರೆಸಲಿದೆ ಎಂದರು.
ತನಿಖೆ ನಡೆಸಿ ಎಸ್‌ಐಟಿ ವರದಿ ಸಲ್ಲಿಕೆಯಾದ ಬಳಿಕ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು. ಬಹಳಷ್ಟು ಪೆನ್‌ಡ್ರೈವ್‌ಗಳು ನಾಪತ್ತೆಯಾಗಿವೆ ಅಥವಾ ಅವುಗಳನ್ನು ಹೊರಗೆ ಬರಲು ಬಿಡದಂತೆ ತಡೆಹಿಡಿಯಲಾಗಿದೆ ಎಂಬುದರ ಕುರಿತು ಎಸ್‌ಐಟಿ ಅಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಸತ್ಯಾಸತ್ಯತೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಿದ್ದಾರೆ ಎಂದರು.
ದೂರುದಾರರು ಸಂದರ್ಭಾನುಸಾರ ಮಾಹಿತಿಯೊಂದಿಗೆ ಉಲ್ಲೇಖಿಸಲಾದ ವ್ಯಕ್ತಿಗಳ ವಿರುದ್ಧ ತನಿಖೆ ನಡೆಯಲಿದೆ. ಅದು ಎಚ್.ಡಿ.ರೇವಣ್ಣ ಇರಬಹುದು ಅಥವಾ ಬೇರೆ ಯಾರಾದರೂ ಸರಿ ತನಿಖೆಗೊಳಪಡಬೇಕಾಗುತ್ತದೆ ಎಂದು ಹೇಳಿದರು.
ದೂರುದಾರರು ಮತ್ತು ಸಂತ್ರಸ್ತರಿಗೆ ಅಗತ್ಯ ಬಿದ್ದರೆ ಭದ್ರತೆ ಒದಗಿಸಲು ಸರ್ಕಾರ ಸಿದ್ಧವಿದೆ. ಸಂತ್ರಸ್ತರಿಗೆ ಭಯದ ವಾತಾವರಣವಿದೆ ಎಂದು ಕಂಡುಬಂದರೆ ಯಾರಿಗೂ ತೊಂದರೆಯಾಗದಂತೆ ಭದ್ರತೆಯ ವ್ಯವಸ್ಥೆ ಮಾಡಿ ನ್ಯಾಯಯುತವಾಗಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್‌ರ ನಿಧನ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯಿಂದ ಸಮಾಜ ಬಡವಾಗಿದೆ. ಸುದೀರ್ಘ ರಾಜಕೀಯ ಅವಧಿಯಲ್ಲಿ ಶ್ರೀನಿವಾಸ್ ಪ್ರಸಾದ್‌ರವರು ಸೌಹಾರ್ದತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ಹೇಳಿದರು.