Thursday, May 2, 2024
Homeರಾಜಕೀಯಯಡಿಯೂರಪ್ಪ ಎದುರಲ್ಲಿ ಮಾತ್ರ ಒಗ್ಗಟ್ಟು, ಆಮೇಲೆ ಆಗುತ್ತಿರುವುದೆಲ್ಲಾ ಎಡವಟ್ಟು..!

ಯಡಿಯೂರಪ್ಪ ಎದುರಲ್ಲಿ ಮಾತ್ರ ಒಗ್ಗಟ್ಟು, ಆಮೇಲೆ ಆಗುತ್ತಿರುವುದೆಲ್ಲಾ ಎಡವಟ್ಟು..!

ಬೆಂಗಳೂರು,ಏ.11- ಕರ್ನಾಟಕದಲ್ಲಿ ಚುನಾವಣೆಯ ಕಾವು ಏರುತ್ತಿದ್ದರೂ ಕೆಲವೊಂದು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಕಮ್ಮಿಯಾಗುತ್ತಿಲ್ಲ. ಅದರಲ್ಲೂ ಐದು ಕ್ಷೇತ್ರಗಳಲ್ಲಿ ಆಂತರಿಕ ಪೆಟ್ಟು ಚುನಾವಣಾ ಫಲಿತಾಂಶದ ಮೇಲೆ ಬೀಳುವ ಭಯ ಬಿಜೆಪಿ ನಾಯಕರಿಗೆ ಎದುರಾಗಿದೆ.

ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ, ಮುನಿಸಿಕೊಂಡಿರುವ ನಾಯಕರ (ಶಿವಮೊಗ್ಗ ಹೊರತು ಪಡಿಸಿ) ಮನವೊಲಿಸುವಲ್ಲಿ ಯಶಸ್ವಿಯಾದರು ಎಂದೇ ಗ್ರಹಿಸಲಾಗಿತ್ತು. ಆದರೆ, ಯಡಿಯೂರಪ್ಪನವರ ಎದುರು ಒಪ್ಪಿಕೊಂಡು ಹೋಗುವ ನಾಯಕರುಗಳು ಕ್ಷೇತ್ರಕ್ಕೆ ಹೋದ ಮೇಲೆ ಮತ್ತದೇ ಭಿನ್ನಮತ ಮುಂದುವರಿಸಿದ್ದಾರೆ.

ಈ ಕ್ಷೇತ್ರಗಳ ಅಭ್ಯರ್ಥಿಗಳ ಸ್ಥಳೀಯ ಮುಖಂಡರು ಅಥವಾ ಟಿಕೆಟ್ ಆಕಾಂಕ್ಷಿಗಳಾಗಿದ್ದವರ ಅಸಹಕಾರದ ಬಗ್ಗೆ ರಾಜ್ಯದ ನಾಯಕರಿಗೆ ದೂರು ಸಲ್ಲಿಸಿದ್ದಾರೆ. ಕೆಲವೊಂದು ಮಾಹಿತಿಗಳು ಕೇಂದ್ರದ ಬಿಜೆಪಿ ವರಿಷ್ಠರ ಬಳಿಯೂ ಹೋಗಿವೆ. ಯಶವಂತಪುರದ ಬಿಜೆಪಿ ಶಾಸಕರು ಬಹಿರಂಗವಾಗಿಯೇ ಕಾಂಗ್ರೆಸ್ ಬೆಂಬಲಿಸಿದ್ದಾರೆ.

ದಾವಣಗರೆ :
ಕರ್ನಾಟಕದ ಮ್ಯಾಂಚೆಸ್ಟರ್‍ಎಂದು ಕರೆಸಿಕೊಳ್ಳುವ ದಾವಣಗೆರೆಯಲ್ಲಿ ಭಿನ್ನಮತ ಇನ್ನೂ ಕಮ್ಮಿಯಾಗಿಲ್ಲ. ಯಡಿಯೂರಪ್ಪನವರ ಆಪ್ತರಾದ ರೇಣುಕಾಚಾರ್ಯ ಅವರು ಇಲ್ಲಿನ ಟಿಕೆಟ್‍ಗಾಗಿ ಪ್ರಯತ್ನಿಸಿದ್ದು, ಅದಾದ ನಂತರ ಬಂಡಾಯ ಎದ್ದಿದ್ದು ಎಲ್ಲಾ ಗೊತ್ತಿರುವ ವಿಚಾರ. ಇವರಿಗೆ, ಸ್ಥಳೀಯ ಮುಖಂಡ ರವೀಂದ್ರನಾಥ್ ಕೂಡಾ ಸಾಥ್ ನೀಡಿದ್ದರು.

ಎಲ್ಲರ ಜೊತೆ ಮಾತುಕತೆ ನಡೆಸಿ ಯಡಿಯೂರಪ್ಪ ಭಿನ್ನಮತವನ್ನು ಸರಿದಾರಿಗೆ ತಂದರು ಎಂದು ಗ್ರಹಿಸಲಾಗಿತ್ತು. ಆದರೆ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರವಾಗಿ ಎಲ್ಲರ ಬೆಂಬಲ ಸಿಗುತ್ತಿಲ್ಲ. ಇಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಎಲ್ಲಾ ಸರಿದಾರಿಗೆ ತರುವ ವಿಶ್ವಾಸವನ್ನು ರಾಜ್ಯ ನಾಯಕರು ಹೊಂದಿದ್ದಾರೆ.

ಹಾಸನ :
ಹಾಸನದಲ್ಲಿ ವಿಶೇಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸ್ಥಳೀಯ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಹಾಸನದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ವಿರೋ ಎಂದೇ ಗುರುತಿಸಿಕೊಂಡಿರುವ ಪ್ರೀತಂ ಗೌಡ ಅವರನ್ನು ವಿಜಯೇಂದ್ರ ಸಮಾಧಾನ ಪಡಿಸಿದ್ದರು. ಪ್ರೀತಂ ಗೌಡ ಮತ್ತು ಎ.ಟಿ.ರಾಮಸ್ವಾಮಿಯವರು ವಿಜಯೇಂದ್ರ ಎದುರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಲು ಒಪ್ಪಿಕೊಂಡರೂ, ಅದು ಆಗುತ್ತಿಲ್ಲ. ಒಂದು ದಿನದ ಹಿಂದೆ ಪ್ರಜ್ವಲ್ , ಬಿಜೆಪಿ ಮತ್ತು ಸಂಘ ಪರಿವಾರದ ಕ್ಷಮೆಯನ್ನೂ ಕೇಳಿದ್ದರು. ಸಮಾಧಾನಕರ ವಿಷಯ ಎಂದರೆ, ಪ್ರೀತಂಗೌಡ ಬುಧವಾರದಿಂದ ಹಾಸನ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಆರಂಭಿಸಿದ್ದಾರೆ.

ತುಮಕೂರು :
ತುಮಕೂರಿನಲ್ಲಿ ಬಹಿರಂಗವಾಗಿಯೇ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಟೀಕಿಸುತ್ತಿರುವ ಜೆ.ಸಿ.ಮಾಧುಸ್ವಾಮಿ, ಪ್ರಚಾರಕ್ಕೆ ಸಹಕರಿಸುತ್ತಿಲ್ಲ. ಇವರನ್ನು ಕೂಡಾ ಯಡಿಯೂರಪ್ಪ ಸಮಾಧಾನ ಪಡಿಸಿದ್ದರು. ಒಂದು ದಿನದ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಅವರು ಮಾಧುಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ್ದರು.

ಚಿಕ್ಕಬಳ್ಳಾಪುರ :
ಟಿಕೆಟ್‍ಗಾಗಿ ಭಾರೀ ಪೈಪೋಟಿಯ ನಡುವೆ ಡಾ.ಸುಧಾಕರ್ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಆದರೆ ಇಲ್ಲಿನ ಪ್ರಮುಖ ಸಮಸ್ಯೆ ಇವರ ಮತ್ತು ಯಲಹಂಕದ ಶಾಸಕ ಎಸ್.ಆರ್.ವಿಶ್ವನಾಥ್ ನಡುವೆ ಒಮ್ಮತ ಮೂಡುತ್ತಿಲ್ಲ. ಅಮಿತ್ ಶಾ ಆದೇಶದ ಮೇರೆಗೆ ವಿಶ್ವನಾಥ್ ಅವರ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿತ್ತು. ಆದರೂ, ಇಬ್ಬರ ನಡುವೆ ಬಹಿರಂಗ ಹೇಳಿಕೆ ಮುಂದುವರಿಯುತ್ತಲೇ ಇದೆ.

ಉತ್ತರ ಕನ್ನಡ :
ಹಾಲಿ ಸಂಸದ ಅನಂತ್ ಕುಮಾರ್ ಹೆಗ್ಡೆ ತಮಗೆ ಟಿಕೆಟ್ ಸಿಗದ ನಂತರ, ಬಿಜೆಪಿ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ನನಗೆ ಅನಂತ್ ಕುಮಾರ್ ಅವರ ಬೆಂಬಲ ಬೇಕು ಎಂದು ಬಹಿರಂಗವಾಗಿಯೇ ಹೇಳಿದ ಮೇಲೂಇವರ ಸಹಕಾರ ಸಿಗುತ್ತಿಲ್ಲ.

RELATED ARTICLES

Latest News