Sunday, November 10, 2024
Homeರಾಜ್ಯರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆಗೆ ನಾಳೆ ಅಧಿಸೂಚನೆ

ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆಗೆ ನಾಳೆ ಅಧಿಸೂಚನೆ

ಬೆಂಗಳೂರು,ಏ.11- ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಮತಬೇಟೆ ರಂಗೇರಿರುವ ಬೆನ್ನಲ್ಲೇ ಉಳಿದ 14 ಕ್ಷೇತ್ರಗಳಿಗೆ ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ. ಬಹುತೇಕ ರಾಜ್ಯದ ಮದ್ಯಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಇದೇ ತಿಂಗಳ 19 ಕಡೆಯ ದಿನವಾಗಿದ್ದು, 20 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, 22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 7 ರಂದು ಮತದಾನ ನಡೆಯಲಿದೆ. ಇದೇ ವೇಳೆ ಯಾದಗಿರಿ ಜಿಲ್ಲೆ ಸುರಪುರ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯಲಿದ್ದು, ಆಯೋಗ ಅಧಿಸೂಚನೆಯನ್ನು ಹೊರಡಿಸಲಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಲೋಕಸಭಾ ಚುನಾವಣೆಗೆ ನಿಗದಿಪಡಿಸಿರುವ ದಿನಾಂಕಗಳೇ ಅನ್ವಯವಾಗಲಿದೆ. 2ನೇ ಹಂತದಲ್ಲಿ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್, ವಿಜಾಪುರ, ಕಲಬುರಗಿ, ಹಾವೇರಿ, ಧಾರವಾಡ, ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಜೂನ್ 7 ರಂದು ಮತದಾನ ನಡೆಯಲಿದೆ.

2 ನೇ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 2,88,08,182 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಇದರಲ್ಲಿ ಪುರುಷರು 1,44,17,530, ಮಹಿಳೆಯರು 1,43,87,585, ತೃತೀಯ ಲಿಂಗಿಗಳು 3067, ಸೇವಾ ಮತದಾರರು 11,160, ಯುವ ಮತದಾರರು 599,444, ದಿವ್ಯಾಂಗ ಮತದಾರರು 2,76,042, 85 ವರ್ಷ ಮೇಲ್ಪಟ್ಟವರು 3,40,856, 2,849 ಸಾಗರೋತ್ತರ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ.

ಮೇ 7 ರಂದು ನಡೆಯಲಿರುವ ಚುನಾವಣೆಗೆ ಈ ಬಾರಿ ಸ್ಪರ್ಧಾ ಕಣದಲ್ಲಿ ಘಟಾನುಘಟಿ ನಾಯಕರು ಇದ್ದಾರೆ.ರಾಜ್ಯದ ಗಮನ ಸೆಳೆದಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಬಿ.ವೈ.ವಿಜಯೇಂದ್ರ, ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಪತ್ನಿ ಗೀತಾ ಶಿವರಾಜ್‍ಕುಮಾರ್ ಕಣದಲ್ಲಿದ್ದಾರೆ.

ದಾವಣಗೆರೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಗಾಯತ್ರಿ ಸಿದ್ದೇಶ್ವರ್, ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮಲು, ಹಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬೀದರ್‍ನಲ್ಲಿ ಕೇಂದ್ರ ಸಚಿವ ಭಗವಂತ್ ಕೂಬಾ ಕಣದಲ್ಲಿರುವ ಪ್ರಮುಖರು.

ಇನ್ನು ಕಾಂಗ್ರೆಸ್‍ನಿಂದ ಪ್ರಮುಖವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರ ಅಳಿಯ ರಾಧಾಕೃಷ್ಣನ್ ಕಲಬುರಗಿಯಿಂದ, ಸಚಿವರಾದ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಚಿಕ್ಕೋಡಿಯಿಂದ, ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಪ್ರಹ್ಲಾದ್ ಜೋಷಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ, ರಾಮಲು ವಿರುದ್ಧ ಶಾಸಕ ತುಕಾರಾಂ, ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಬೀದರ್‍ನಿಂದ ಹೀಗೆ ಘಟಾನುಘಟಿ ನಾಯಕರು ತಮ್ಮ ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ.ಅಂತಿಮವಾಗಿ ಮತದಾರರ ಕೃಪೆ ಯಾರಿಗೆ ಎಂಬುದು ಜೂನ್ 4 ರ ಫಲಿತಾಂಶದವರೆಗೆ ಕಾಯಲೇಬೇಕು.

RELATED ARTICLES

Latest News