Monday, June 24, 2024
Homeಅಂತಾರಾಷ್ಟ್ರೀಯಅಮೆರಿಕಾದಲ್ಲೂ ಜೋರಾಗಿದೆ ಭಾರತದ ಲೋಕಸಭೆ ಚುನಾವಣೆಯ ಚರ್ಚೆ

ಅಮೆರಿಕಾದಲ್ಲೂ ಜೋರಾಗಿದೆ ಭಾರತದ ಲೋಕಸಭೆ ಚುನಾವಣೆಯ ಚರ್ಚೆ

ನವದೆಹಲಿ,ಮೇ23– ಒಂದು ಕಾಲದಲ್ಲಿ ಭಾರತದ ಚುನಾವಣೆಗಳನ್ನೇ ಗಂಭೀರವಾಗಿ ಪರಿಗಣಿಸದೆ ತಾತ್ಸಾರ ಮನೋಭಾವನೆಯಲ್ಲಿ ನೋಡುತ್ತಿದ್ದ ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲೂ ಲೋಕಸಭೆ ಚುನಾವಣೆಯ ಚರ್ಚೆ ಕಾವೇರಿದೆ. ದೇಶದಲ್ಲಿ 5 ಹಂತದ ಮತದಾನ ಮುಗಿದು 6ನೇ ಹಂತದ ಮತದಾನಕ್ಕೆ ಎರಡೇ ದಿನಗಳು ಬಾಕಿ ಇರುವಾಗ ಇಲ್ಲಿನ ಲೋಕಸಭೆ ಚುನಾವಣೆಯ ಕಾವು ಅಮೆರಿಕಾದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಅಮೆರಿಕದ ಬಹುತೇಕ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ಚುನಾವಣಾ ನಿಪುಣರು, ರಾಯಭಾರಿ ಅಧಿಕಾರಿಗಳು, ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಸೇರಿದಂತೆ ಅನೇಕರು ಲೋಕಸಭೆ ಚುನಾವಣೆ ಬಗ್ಗೆಯೇ ಎಲ್ಲೆಡೆ ಬಿಸಿಬಿಸಿ ಚರ್ಚೆ ಆರಂಭಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನಗಳನ್ನು ಗಳಿಸಲಿದೆ? ಪ್ರಧಾನಿ ನರೇಂದ್ರಮೋದಿ ಅವರು ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದ್ದಾರೆಯೇ? ಬಿಜೆಪಿ ಅಂದುಕೊಂಡಂತೆ 400 ಸ್ಥಾನಗಳನ್ನು ಪಡೆಯಲಿದೆಯೇ? ಇಲ್ಲವೇ 300 ಸ್ಥಾನಗಳನ್ನು ಗೆಲ್ಲಲಿದೆಯೇ? ಇಲ್ಲವೇ ಸರಳ ಬಹುಮತ ಪಡೆದು ಅಂದರೆ ಎನ್‌ಡಿಎ ಮಿತ್ರಪಕ್ಷಗಳ ಮೂಲಕ ಸರ್ಕಾರ ರಚನೆ ಮಾಡಲಿದೆಯೇ? ಹೀಗೆ ತರಹೇವಾರಿ ಚರ್ಚೆ ಆರಂಭವಾಗಿದೆ.

ಐಟಿಬಿಟಿ ಕಂಪನಿಗಳು, ಮಾಲ್‌ಗಳು, ಕ್ರೀಡಾಂಗಣ ಸೇರಿದಂತೆ ಹಲವು ಕಡೆಯೇ ಭಾರತದ ಲೋಕಸಭಾ ಚುನಾವಣೆಯ ಸ್ಥಿತಿಗತಿ ಕುರಿತಂತೆ ಚರ್ಚೆ ನಡೆಯುತ್ತಿರುವುದು ಎಷ್ಟು ಮಹತ್ವ ಪಡೆದುಕೊಂಡಿದೆ ಎಂಬುದನ್ನು ಸಾರಿ ಹೇಳುತ್ತದೆ. ಸತತ ಎರಡು ಬಾರಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌‍ ಈ ಬಾರಿಯಾದರೂ ಅಧಿಕಾರಕ್ಕೆ ಬರಲಿದ್ದಾರೆಯೇ? 2014 ಮತ್ತು 2019ರಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಬೇಕಾದ ಸ್ಥಾನ ಪಡೆಯಲು ವಿಫಲವಾಗಿದ್ದ ಕೈ ಪಕ್ಷ ಈ ಬಾರಿ ಎಷ್ಟು ಸ್ಥಾನ ಗೆಲ್ಲಲಿದೆ ಎಂಬುದು ಚರ್ಚೆಯ ವಿಷಯವಾಗಿದೆ.

ವಿಶ್ವದ ಯಾವುದೇ ರಾಷ್ಟ್ರದ ಚುನಾವಣೆಯನ್ನು ನಿಖರವಾಗಿ ಊಹೆ ಮಾಡಿ ಅಂಕಿಅಂಶಗಳು ಅಲ್ಲಿನ ಭೌತಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಇಷ್ಟೇ ಸ್ಥಾನಗಳನ್ನು ಗೆಲ್ಲಬಹುದೆಂದು ಊಹೆ ಮಾಡುವ ರಾಜಕೀಯ ತಜ್ಞರು ಕೂಡ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಕೇಂದ್ರದಲ್ಲಿ ಎರಡು ಬಾರಿ ಅಧಿಕಾರ ನಡೆಸಿರುವ ನರೇಂದ್ರಮೋದಿ ಅವರು ಬಹುತೇಕ ಮತ್ತೊಮೆ ಅಧಿಕಾರಕ್ಕೆ ಬರುವ ಸಂಭವವಿದ್ದು, ಬಿಜೆಪಿ ಒಂದೇ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಸ್ವಂತ ಬಲದ ಮೇಲೆ 3ನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಅನೇಕರು ಭವಿಷ್ಯ ನುಡಿಯುತ್ತಿದ್ದಾರೆ.

ಇನ್ನು ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಈ ಬಾರಿ ನರೇಂದ್ರಮೋದಿ ಅವರೇ ಪ್ರಧಾನಿಯಾಗಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಆಶಾಭಾವನೆಯನ್ನು ಹೊಂದಿದ್ದಾರೆ. ಹೀಗೆ ಇದೇ ಮೊದಲ ಬಾರಿಗೆ ಅಮೆರಿಕಾದಂತಹ ದೈತ್ಯ ರಾಷ್ಟ್ರದಲ್ಲೂ ಭಾರತದ ಚುನಾವಣೆ ಬಗ್ಗೆ ಗಲ್ಲಿ ಗಲ್ಲಿಯಲ್ಲೂ ಚರ್ಚೆ ಆರಂಭವಾಗಿರುವುದು ವಿಶೇಷ ಎನಿಸಿದೆ.

ಅಂತಿಮವಾಗಿ ಎಷ್ಟೇ ರಾಜಕೀಯ ನಿಪುಣರು, ನುರಿತ ತಜ್ಞರು ಏನೇ ಹೇಳಿದರೂ ಮತದಾರನ ನಾಡಿಮಿಡಿತ ಏನೆಂಬುದನ್ನು ತಿಳಿಯಲು ಜೂ.4ರ ಫಲಿತಾಂಶದವರೆಗೂ ಕಾಯಲೇಬೇಕು.

RELATED ARTICLES

Latest News