ಮೊಗಾದಿಶು, ಆ.21- ಅಂತರರಾಷ್ಟ್ರೀಯ ಜಲಸಂಚಾರದಲ್ಲಿ ಕಡಲ್ಗಳ್ಳರ ಹಾವಳಿ ಮತ್ತೊಮೆ ಹೆಚ್ಚಾಗುತ್ತಿರುವುದಕ್ಕೆ ಸಾಕ್ಷಿಯೆಂಬಂತೆ, ಸೊಮಾಲಿಯಾದ ಪಂಟ್ಲ್ಯಾಂಡ್ ಕರಾವಳಿ ಭಾಗದಲ್ಲಿ ಟರ್ಕಿಶ್ ಶಸ್ತ್ರಾಸ್ತ್ರಗಳು ಹಾಗೂ ಸಂವಹನ ಉಪಕರಣಗಳನ್ನು ಸಾಗಿಸುತ್ತಿದ್ದ ಕ್ಯಾಮರೂನ್ ಧ್ವಜವೊಳಗೊಂಡ ವಾಣಿಜ್ಯ ಹಡಗನ್ನು ಕಡಲ್ಗಳ್ಳರು ಹೈಜಾಕ್ ಮಾಡಿದ್ದಾರೆ.
ಈ ಹಡಗಿನಲ್ಲಿ 6 ಜನ ಭಾರತೀಯ ನಾವಿಕರು ಸೇರಿದಂತೆ ಒಟ್ಟು 10 ಮಂದಿ ಸಿಬ್ಬಂದಿ ಇದ್ದು, ಎಲ್ಲರನ್ನೂ ಕಡಲ್ಗಳ್ಳರು ಅಪಹರಿಸಿದ್ದಾರೆ.ಸೊಮಾಲಿಯಾದ ಪಂಟ್ಲ್ಯಾಂಡ್ನ ಇಲ್ ಜಿಲ್ಲೆಯ ಮರ್ರಾಯದಿಂದ ಸುಮಾರು 3.5 ನಾಟಿಕಲ್ ಮೈಲು ದೂರದಲ್ಲಿ ಈ ಕೃತ್ಯ ನಡೆದಿದೆ. ಬಳಿಕ ಹಡಗನ್ನು ನುಗಾಲ್ ಕರಾವಳಿಯ ಗರ್ಮಾಲ್ ಪ್ರದೇಶದ ಕಡೆಗೆ ಕೊಂಡೊಯ್ಯಲಾಗಿದೆ.
ಈ ಹಡಗು ಮೊಗಾದಿಶುವಿನಲ್ಲಿರುವ ಟರ್ಕಿಶ್ ಮಿಲಿಟರಿ ತರಬೇತಿ ಕೇಂದ್ರಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರಗಳು, ಉಪಗ್ರಹ ಹಾಗೂ ಸಂವಹನ ಉಪಕರಣಗಳನ್ನು ಹೊತ್ತೊಯ್ಯುತ್ತಿತ್ತು. ಹಡಗಿನಲ್ಲಿದ್ದ 10 ಸಿಬ್ಬಂದಿಗಳಲ್ಲಿ 6 ಜನ ಭಾರತೀಯರು, 1 ಟರ್ಕಿಶ್ ಪ್ರಜೆ, 1 ಜಾರ್ಜಿಯನ್ ಪ್ರಜೆ ಹಾಗೂ 2 ಸರ್ಬಿಯನ್ ಭದ್ರತಾ ಸಿಬ್ಬಂದಿ ಸೇರಿದ್ದಾರೆ.ಹೈಜಾಕ್ ಹಿಂದೆ ಎಂಟು ಮಂದಿ ಕಡಲ್ಗಳ್ಳರ ಕೈವಾಡವಿದೆ ಎನ್ನಲಾಗಿದ್ದು, ಇವರು ಕಳೆದ ಏಪ್ರಿಲ್ 26 ರಂದು M/Vಸ್ವಾರ್ಡ್ ಹಡಗಿನ ಅಪಹರಣದಲ್ಲೂ ಭಾಗಿಯಾಗಿದ್ದ ಗುಂಪಿಗೆ ಸೇರಿದವರೆಂದು ಶಂಕಿಸಲಾಗಿದೆ.
ಹಡಗು ಅಪಹರಣಕ್ಕೀಡಾದ ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಟರ್ಕಿ ಪಡೆಗಳು, ಹೆಲಿಕಾಪ್ಟರ್ ಹಾಗೂ ಡ್ರೋನ್ಗಳ ಮೂಲಕ ಆ ಪ್ರದೇಶದ ಮೇಲೆ ಹದ್ದಿನ ಕಣ್ಣಿಟ್ಟಿವೆ. ಅಲ್ಲದೆ, ಟರ್ಕಿಗೆ ಸೇರಿದ ಎರಡು ಹಡಗುಗಳು ಆ ಪ್ರದೇಶಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ. ಹಡಗಿನ ಸಮೀಪಕ್ಕೆ ಎರಡು ವ್ಯಕ್ತಿಗಳಿದ್ದ ಸಣ್ಣ ದೋಣಿಯೊಂದು ತೆರಳಿ ಮಾದಕದ್ರವ್ಯ ತಲುಪಿಸಿ ಹಿಂತಿರುಗಿದ ಬಳಿಕ, ಆ ಪ್ರದೇಶದಲ್ಲಿ ಸಂಭವಿಸಿದ ವಾಯುದಾಳಿಯಲ್ಲಿ ನಾಲ್ವರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಬಗ್ಗೆಯೂ ವರದಿಯಾಗಿದೆ.
ಆದರೂ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.ಘಟನೆ ನಡೆದು ದಿನಗಳೇ ಕಳೆದಿದ್ದರೂ, ಟರ್ಕಿ ಸರ್ಕಾರವಾಗಲಿ ಅಥವಾ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದಾಗಲಿ ಅಪಹರಣಕ್ಕೊಳಗಾದ ಸಿಬ್ಬಂದಿಯ ನಿಖರ ಗುರುತು ಹಾಗೂ ಪ್ರಸ್ತುತ ಸ್ಥಿತಿಗತಿಗಳ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಏಡನ್ ಕೊಲ್ಲಿ ಮತ್ತು ಸೊಮಾಲಿಯಾ ಸಮುದ್ರ ತೀರದಲ್ಲಿ ಕಡಲ್ಗಗಳ್ಳರ ಚಟುವಟಿಕೆಗಳು ಮರುಕಳಿಸುತ್ತಿರುವುದು ನಾವಿಕರ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಅಪಹರಣಕ್ಕೊಳಗಾಗಿರುವ ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಲು ಕೇಂದ್ರ ಸರ್ಕಾರವು ರಾಜತಾಂತ್ರಿಕ ಮಾರ್ಗದ ಮೂಲಕ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತರ ಕುಟುಂಬ ವರ್ಗ ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.ಈ ಕುರಿತು ಭಾರತ ಸರ್ಕಾರದ ವಿದೇಶಾಂಗ ಇಲಾಖೆಯಿಂದ ಅಥವಾ ಹಡಗು ಒಡೆತನದ ಪೋಲಾರ್ ಮೂವ್ಮೆಂಟ್ ಶಿಪ್ಪಿಂಗ್ ಸಂಸ್ಥೆಯಿಂದ ಹೆಚ್ಚಿನ ಅಧಿಕೃತ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
