Homeಅಂತಾರಾಷ್ಟ್ರೀಯಅಕ್ಕ ಸಮಾವೇಶದಲ್ಲಿ ‘ಅಕ್ಕರೆ’ ಸಂಚಿಕೆ ಬಿಡುಗಡೆ : ಅಮೆರಿಕ ನೆಲದಲ್ಲಿ ಕನ್ನಡ ಸಂಭ್ರಮ

ಅಕ್ಕ ಸಮಾವೇಶದಲ್ಲಿ ‘ಅಕ್ಕರೆ’ ಸಂಚಿಕೆ ಬಿಡುಗಡೆ : ಅಮೆರಿಕ ನೆಲದಲ್ಲಿ ಕನ್ನಡ ಸಂಭ್ರಮ

ಫಿಲಡೆಲ್ಫಿಯಾ, ಸೆ.6- ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯುತ್ತಿರುವ ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮಾವೇಶವು ಕನ್ನಡದ ನಾಡು-ನುಡಿ, ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ವೈಭವವನ್ನು ವಿಶ್ವದ ಮುಂದೆ ಅನಾವರಣಗೊಳಿಸುತ್ತಿದೆ. ವಿದೇಶದ ನೆಲದಲ್ಲಿದ್ದರೂ ಕನ್ನಡದ ಮೇಲಿನ ಪ್ರೀತಿ, ಅಭಿಮಾನ ಮತ್ತು ಬದ್ಧತೆಯನ್ನು ವಿಶ್ವದ ಕನ್ನಡಿಗರು ಮತ್ತೊಮ್ಮೆ ಸಾರಿದ್ದಾರೆ.

ಸಮಾವೇಶದ ಅಂಗವಾಗಿ ‘ಅಕ್ಕರೆ’ ಸರಣಿ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಅಕ್ಕ ಸಂಸ್ಥೆಯ 25 ವರ್ಷಗಳ ಪಯಣ, ವಿಶ್ವದ ವಿವಿಧ ಭಾಗಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗಾಗಿ ನಡೆದಿರುವ ಪ್ರಯತ್ನಗಳು ಮತ್ತು ಕನ್ನಡಿಗರ ಸಾಧನೆಗಳನ್ನು ಈ ಸಂಚಿಕೆ ಒಳಗೊಂಡಿದೆ.

ಅದ್ಧೂರಿ ಕನ್ನಡದ ಮೆರವಣಿಗೆ

ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ಅದ್ಧೂರಿ ಕನ್ನಡದ ಮೆರವಣಿಗೆ ನಡೆಯಿತು. ಕನ್ನಡದ ಧ್ವಜಗಳು, ನಾಡಿನ ವಿವಿಧ ಭಾಗಗಳ ಸಾಂಸ್ಕೃತಿಕ ವೈವಿಧ್ಯ, ಜಾನಪದ ಕಲೆ, ವೇಷಭೂಷಣಗಳು ಹಾಗೂ ಕಲಾ ತಂಡಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ವಿವಿಧ ದೇಶಗಳು ಮತ್ತು ಅಮೆರಿಕದ ಹಲವು ಭಾಗಗಳಿಂದ ಆಗಮಿಸಿದ್ದ ಕನ್ನಡಿಗರು ಉತ್ಸಾಹದಿಂದ ಪಾಲ್ಗೊಂಡರು.

ವಿದೇಶದ ನೆಲದಲ್ಲಿದ್ದರೂ ಕನ್ನಡಿಗರ ಹೃದಯದಲ್ಲಿ ಕನ್ನಡದ ಮೇಲಿನ ಅಭಿಮಾನ ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಮೆರವಣಿಗೆ ಸಾಕ್ಷಿಯಾಯಿತು. ‘ಎಲ್ಲೇ ಇರಿ, ಹೇಗೆ ಇರಿ, ಕನ್ನಡವಾಗಿರಿ’ ಎಂಬ ಸಂದೇಶ ಸಾರುವಂತೆ ಮೆರವಣಿಗೆ ಗಮನ ಸೆಳೆಯಿತು.

ಕನ್ನಡಿಗರನ್ನು ಬೆಸೆಯಲಿ ಅಕ್ಕ ಸಮಾವೇಶ

ನಾಡು, ನುಡಿ ಮತ್ತು ವಿದೇಶದ ನೆಲದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ಕನ್ನಡಿಗರು ಕೇವಲ ಕನ್ನಡವನ್ನು ಉಳಿಸುತ್ತಿಲ್ಲ; ಒಂದು ಮಹಾನ್‌ ಸಂಸ್ಕೃತಿಯ ಜೀವಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿದ್ದಾರೆ ಎಂಬ ಅಭಿಪ್ರಾಯ ಸಮಾವೇಶದಲ್ಲಿ ವ್ಯಕ್ತವಾಯಿತು.

ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಬೇರುಗಳನ್ನು ಮರೆಯದೆ, ಪಡೆದ ಜ್ಞಾನ ಮತ್ತು ಅನುಭವವನ್ನು ಮಾತೃಭೂಮಿಯ ಉನ್ನತಿಗೆ ಅರ್ಪಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದೇ ನಮ್ಮ ಸಂಸ್ಕೃತಿಯ ನಿಜವಾದ ಶಕ್ತಿ ಹಾಗೂ ಅಕ್ಕ ಸಮಾವೇಶದ ಸಾರ್ಥಕತೆ ಎಂಬ ಸಂದೇಶ ನೀಡಲಾಯಿತು.

ಕನ್ನಡದ ಅಸ್ಮಿತೆಯಲ್ಲಿ ಎಲ್ಲರ ಕೊಡುಗೆ

ಕನ್ನಡಿಗರನ್ನು ಬೆಸೆಯುವ ಹಾಗೂ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಸಂಕಲ್ಪವಾಗಿ ಅಕ್ಕ ಸಮಾವೇಶ ರೂಪುಗೊಳ್ಳಬೇಕು. ಅಮೆರಿಕದ ನೆಲದಲ್ಲಿದ್ದರೂ ಕನ್ನಡಿಗರ ಹೃದಯದಲ್ಲಿ ಕನ್ನಡ ಜೀವಂತವಾಗಿರುವುದು ನಮ್ಮ ಭಾಷೆಯ ನಿಜವಾದ ವೈಭವ. ಅಕ್ಕ ಸಂಸ್ಥೆ ಕಳೆದ 25 ವರ್ಷಗಳಿಂದ ಈ ಆಶಯವನ್ನು ತನ್ನ ಕಾರ್ಯಚಟುವಟಿಕೆಗಳ ಮೂಲಕ ಸಾಕಾರಗೊಳಿಸುತ್ತಾ ಬಂದಿದೆ.

ಅಕ್ಕ ರಜತ ಮಹೋತ್ಸವವು ಕನ್ನಡಿಗರನ್ನು ಮತ್ತಷ್ಟು ಬೆಸೆಯುವ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಸಂಕಲ್ಪಕ್ಕೆ ವೇದಿಕೆಯಾಯಿತು.

ಕರ್ನಾಟಕದ ಅಭಿವೃದ್ಧಿ ಮತ್ತು ನಿರ್ಮಾಣದಲ್ಲಿ ರೈತರ ಪಾತ್ರವನ್ನೂ ಸಮಾವೇಶದಲ್ಲಿ ವಿಶೇಷವಾಗಿ ಉಲ್ಲೇಖಿಸಲಾಯಿತು. ರೈತರು ಅನ್ನವನ್ನು ಬೆಳೆಯುತ್ತಾರೆ, ಕಾರ್ಮಿಕರು ನಗರಗಳನ್ನು ಕಟ್ಟುತ್ತಾರೆ, ಶಿಕ್ಷಕರು ಮುಂದಿನ ಪೀಳಿಗೆಯನ್ನು ರೂಪಿಸುತ್ತಾರೆ. ಇವರ ಪರಿಶ್ರಮವೇ ಕರ್ನಾಟಕದ ನಿಜವಾದ ಶಕ್ತಿ. ಈ ಎಲ್ಲರ ಕೊಡುಗೆಯನ್ನು ಗೌರವಿಸುವುದೇ ಕನ್ನಡವನ್ನು ಗೌರವಿಸುವುದಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಕನ್ನಡದ ಹಿರಿಮೆ ಕೇವಲ ಭಾಷೆ ಅಥವಾ ಸಾಹಿತ್ಯಕ್ಕೆ ಸೀಮಿತವಾಗಿಲ್ಲ. ಕರ್ನಾಟಕದ ಮಣ್ಣು, ರೈತ, ಕಾರ್ಮಿಕ, ಶಿಕ್ಷಣ, ಕಲೆ, ಸಂಸ್ಕೃತಿ ಹಾಗೂ ಸಮಾಜದ ಪ್ರತಿಯೊಂದು ವರ್ಗದ ಕೊಡುಗೆಯಲ್ಲೂ ಕನ್ನಡದ ಅಸ್ಮಿತೆ ಅಡಗಿದೆ ಎಂಬ ಸಂದೇಶವನ್ನು ಸಮಾವೇಶ ಸಾರುತ್ತಿದೆ.

ಎಲ್ಲೇ ಇರಿ, ಹೇಗೆ ಇರಿ, ಕನ್ನಡ ಉಳಿಸಿ: ಎಚ್‌.ಡಿ.ಕೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ವಿಶ್ವದ ಯಾವುದೇ ಭಾಗದಲ್ಲಿ ನೆಲೆಸಿದ್ದರೂ ಕನ್ನಡಿಗರು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊಂದಿದ್ದಾರೆ ಎಂದರು.

ಅಕ್ಕ ಸಂಸ್ಥೆಯ 25 ವರ್ಷಗಳ ಕನ್ನಡ ಸೇವೆಯನ್ನು ಶ್ಲಾಘಿಸಿದ ಅವರು, ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವಲ್ಲಿ ಅಕ್ಕ ಮಹತ್ವದ ಪಾತ್ರ ವಹಿಸಿದೆ ಎಂದರು.

ಇದೇ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ವಿಶ್ವ ಕನ್ನಡ ಸಮಾವೇಶವನ್ನು ಕರ್ನಾಟಕದಲ್ಲಿಯೇ ನಡೆಸೋಣ ಎಂಬ ಮಹತ್ವದ ಆಶಯವನ್ನು ವ್ಯಕ್ತಪಡಿಸಿದರು.

ಅಕ್ಕ ಸಮಾವೇಶ ಕರ್ನಾಟಕದ ಹಬ್ಬ: ಶಿವರಾಜ ತಂಗಡಗಿ

ಸಚಿವ ಶಿವರಾಜ ತಂಗಡಗಿ ಮಾತನಾಡಿ, ಅಕ್ಕ ವಿಶ್ವ ಕನ್ನಡ ಸಮಾವೇಶವು ವಿದೇಶದ ನೆಲದಲ್ಲಿ ನಡೆಯುತ್ತಿರುವ ಕನ್ನಡದ ಮಹತ್ವದ ಹಬ್ಬವಾಗಿದೆ. ಕನ್ನಡಿಗರು ಎಲ್ಲೇ ನೆಲೆಸಿದ್ದರೂ ತಮ್ಮ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ನಂಟು ಉಳಿಸಿಕೊಳ್ಳಬೇಕು. ಕನ್ನಡವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲೂ ಇದೆ ಎಂದು ಹೇಳಿದರು.

ಆದಿಚುಂಚನಗಿರಿ ಶ್ರೀಗಳ ಸಂದೇಶ

ಸಮಾವೇಶದಲ್ಲಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಮಹಾನ್‌ ಸಂಸ್ಕೃತಿಯ ಜೀವಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಕನ್ನಡಿಗರ ಕಾರ್ಯವನ್ನು ಶ್ಲಾಘಿಸಿದರು.

ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಬೇರುಗಳನ್ನು ಮರೆಯದೆ, ಪಡೆದ ಜ್ಞಾನವನ್ನು ಮಾತೃಭೂಮಿಯ ಉನ್ನತಿಗೆ ಅರ್ಪಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅದೇ ನಮ್ಮ ಸಂಸ್ಕೃತಿಯ ನಿಜವಾದ ಶಕ್ತಿ ಮತ್ತು ಅಕ್ಕ ಸಮಾವೇಶದ ಸಾರ್ಥಕತೆ ಎಂದು ಹೇಳಿದರು.

RELATED ARTICLES
spot_img

Latest News