Homeರಾಜ್ಯಹಳೆ ಪಿಂಚಣಿ ಯೋಜನೆ ಜಾರಿ : ಸರ್ಕಾರಕ್ಕೆ ಮತ್ತೊಂದು ಬೃಹತ್‌ ಆರ್ಥಿಕ ಹೊರೆ

ಹಳೆ ಪಿಂಚಣಿ ಯೋಜನೆ ಜಾರಿ : ಸರ್ಕಾರಕ್ಕೆ ಮತ್ತೊಂದು ಬೃಹತ್‌ ಆರ್ಥಿಕ ಹೊರೆ

ಬೆಂಗಳೂರು, ಸೆ.6- ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ಇದರಿಂದ ಸರ್ಕಾರದ ಮೇಲೆ ದೀರ್ಘಕಾಲದ ಬೃಹತ್‌ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಕುರಿತು ಚರ್ಚೆ ಆರಂಭವಾಗಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲು ಶೀಘ್ರದಲ್ಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಮುನ್ಸೂಚನೆ ನೀಡಿದ್ದಾರೆ.

ಆದರೆ, ಒಪಿಎಸ್‌ ಜಾರಿಯ ಸಾಧಕ-ಬಾಧಕಗಳ ಕುರಿತು ಈಗಾಗಲೇ ವ್ಯಾಪಕ ಚರ್ಚೆ ನಡೆಯುತ್ತಿದೆ. ಎಲ್ಲಾ ಎನ್‌ಪಿಎಸ್‌ ನೌಕರರನ್ನು ಒಪಿಎಸ್‌ ವ್ಯಾಪ್ತಿಗೆ ತರುವುದರಿಂದ ರಾಜ್ಯ ಸರ್ಕಾರದ ಮೇಲೆ ದೀರ್ಘಾವಧಿಯ ಹಣಕಾಸಿನ ಹೊಣೆಗಾರಿಕೆ ಹೆಚ್ಚಾಗಲಿದೆ ಎಂಬ 16ನೇ ಹಣಕಾಸು ಆಯೋಗದ ಎಚ್ಚರಿಕೆಯೂ ಈ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದೆ.

ಒಪಿಎಸ್‌ ಮತ್ತು ಎನ್‌ಪಿಎಸ್‌ ನಡುವಿನ ವ್ಯತ್ಯಾಸ

ಹಳೆಯ ಪಿಂಚಣಿ ಯೋಜನೆ (ಒಪಿಎಸ್‌) ಅಡಿಯಲ್ಲಿ ನಿಗದಿತ ನಿಯಮಗಳ ಪ್ರಕಾರ ನಿವೃತ್ತ ನೌಕರರಿಗೆ ಖಾತರಿಯ ಪಿಂಚಣಿ ದೊರೆಯುತ್ತದೆ. ಮತ್ತೊಂದೆಡೆ, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌)ಯಲ್ಲಿ ನೌಕರರು ಮತ್ತು ಸರ್ಕಾರ ಇಬ್ಬರೂ ನಿವೃತ್ತಿ ನಿಧಿಗೆ ವಂತಿಗೆ ನೀಡುತ್ತಾರೆ.

ಎನ್‌ಪಿಎಸ್‌ ಅಡಿಯಲ್ಲಿ ಸಾಮಾನ್ಯವಾಗಿ ನೌಕರರು ತಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ.10ರಷ್ಟು ಕೊಡುಗೆ ನೀಡಿದರೆ, ಸರ್ಕಾರ ಶೇ.14ರಷ್ಟು ಪಾಲು ಭರಿಸುತ್ತದೆ.ಉದಾಹರಣೆಗೆ, ಒಬ್ಬ ನೌಕರನ ಮೂಲ ವೇತನ 50 ಸಾವಿರ ರೂ. ಹಾಗೂ ತುಟ್ಟಿಭತ್ಯೆ 25 ಸಾವಿರ ರೂ. ಇದ್ದರೆ, ಒಟ್ಟು ವೇತನ 75 ಸಾವಿರ ರೂ. ಆಗುತ್ತದೆ. ಇದರ ಶೇ.10ರಂತೆ ನೌಕರರು ತಿಂಗಳಿಗೆ 7,500 ರೂ. ವಂತಿಕೆ ನೀಡುತ್ತಾರೆ. ಸರ್ಕಾರದ ಶೇ.14ರ ಕೊಡುಗೆ 10,500 ರೂ. ಆಗಿರುತ್ತದೆ. ಹೀಗಾಗಿ ತಿಂಗಳಿಗೆ ಒಟ್ಟು 18 ಸಾವಿರ ರೂ. ನಿವೃತ್ತಿ ನಿಧಿಗೆ ಸೇರುತ್ತದೆ.

ಒಪಿಎಸ್‌ ಜಾರಿಯಾದರೆ ಹೊರೆ ಹೆಚ್ಚಳ

ಒಪಿಎಸ್‌ ಅಡಿಯಲ್ಲಿ ಪಿಂಚಣಿಯೋಗ್ಯ ವೇತನದ ಸುಮಾರು ಶೇ.50ರಷ್ಟು ಪಿಂಚಣಿ ದೊರೆಯುವ ಮಾದರಿಯಿದೆ. ಇದರೊಂದಿಗೆ ಅನ್ವಯವಾಗುವ ತುಟ್ಟಿಭತ್ಯೆ ಪರಿಹಾರ, ಕುಟುಂಬ ಪಿಂಚಣಿ, ನಿವೃತ್ತಿ ಗ್ರ್ಯಾಚ್ಯುಟಿ, ಕಮ್ಯುಟೇಶನ್‌ ಸೇರಿದಂತೆ ಇತರ ಪಿಂಚಣಿ ಸೌಲಭ್ಯಗಳೂ ದೊರೆಯುತ್ತವೆ.

ಒಬ್ಬ ನಿವೃತ್ತ ನೌಕರರಿಗೆ ತಿಂಗಳಿಗೆ 50 ಸಾವಿರ ರೂ. ಪಿಂಚಣಿ ನೀಡಲಾಗುತ್ತದೆ ಎಂದು ಊಹಿಸಿದರೆ, ವಾರ್ಷಿಕ ಪಿಂಚಣಿ ಮೊತ್ತ 6 ಲಕ್ಷ ರೂ. ಆಗುತ್ತದೆ. 20 ವರ್ಷಗಳ ಕಾಲ ಪಿಂಚಣಿ ನೀಡಬೇಕಾದರೆ ಒಬ್ಬ ನೌಕರನಿಗೆ 1.20 ಕೋಟಿ ರೂ. ವೆಚ್ಚವಾಗಲಿದೆ. ಇತರ ಸೌಲಭ್ಯಗಳು ಹಾಗೂ ಪಿಂಚಣಿ ಪರಿಷ್ಕರಣೆಗಳನ್ನು ಪರಿಗಣಿಸಿದರೆ ಸರ್ಕಾರದ ನಿಜವಾದ ಹೊರೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ರಾಜ್ಯದಲ್ಲಿರುವ ಸುಮಾರು 3.5 ಲಕ್ಷ ಸರ್ಕಾರಿ ನೌಕರರನ್ನು ಒಪಿಎಸ್‌ ವ್ಯಾಪ್ತಿಗೆ ತಂದರೆ, ವರ್ಷಕ್ಕೆ 40 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಆರ್ಥಿಕ ಹೊರೆ ಸರ್ಕಾರದ ಮೇಲೆ ಬೀಳಬಹುದು ಎಂಬ ಅಂದಾಜು ವ್ಯಕ್ತವಾಗಿದೆ. ಎನ್‌ಪಿಎಸ್‌ ವ್ಯವಸ್ಥೆಯಲ್ಲಿ ಪಿಂಚಣಿ ಪ್ರಮಾಣ ಕಡಿಮೆ ಇರುವುದರಿಂದ ಸರ್ಕಾರದ ಮೇಲಿನ ನೇರ ಹಣಕಾಸಿನ ಹೊರೆ ತುಸು ಕಡಿಮೆಯಾಗಲಿದೆ.

ಕೇಂದ್ರದಿಂದ ಎನ್‌ಪಿಎಸ್‌ ಹಣ ವಾಪಸ್‌ ಕಷ್ಟ

ಬಹುಮುಖ್ಯವಾಗಿ, ಎನ್‌ಪಿಎಸ್‌ ಅಡಿಯಲ್ಲಿ ಸಂಗ್ರಹವಾಗಿರುವ ನೌಕರರ ವಂತಿಕೆಯ ಹಣ ಕೇಂದ್ರ ಸರ್ಕಾರದ ಬಳಿಯಿದೆ. ಈ ಹಣವನ್ನು ರಾಜ್ಯಗಳಿಗೆ ಮರಳಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ ರಾಜ್ಯ ಸರ್ಕಾರವೇ ಭಾರಿ ಪ್ರಮಾಣದ ಹಣಕಾಸು ಸಂಪನ್ಮೂಲ ಕ್ರೋಡೀಕರಿಸಿ ಒಪಿಎಸ್‌ ಜಾರಿಗೊಳಿಸುವುದು ಸವಾಲಿನ ಸಂಗತಿಯಾಗಲಿದೆ ಎಂದು ಆರ್ಥಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಚುನಾವಣಾ ವರ್ಷದಲ್ಲಿ ಮಹತ್ವದ ನಿರ್ಧಾರ?

ಆದರೂ, ಮುಂದಿನ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಒಪಿಎಸ್‌ ಜಾರಿಗೆ ಆದೇಶ ಹೊರಡಿಸಿ ಕಾಂಗ್ರೆಸ್‌ ಸರ್ಕಾರ ನಿರ್ಗಮಿಸಲಿದೆ ಎಂಬ ರಾಜಕೀಯ ಚರ್ಚೆಯೂ ನಡೆಯುತ್ತಿದೆ. ಕರ್ನಾಟಕದ 2026-27ನೇ ಸಾಲಿನ ಬಜೆಟ್‌ನಲ್ಲಿ ವೇತನಕ್ಕೆ 90,557 ಕೋಟಿ ರೂ., ಪಿಂಚಣಿಗೆ 41,136 ಕೋಟಿ ರೂ. ಹಾಗೂ ಬಡ್ಡಿ ಪಾವತಿಗಳಿಗೆ 53,332 ಕೋಟಿ ರೂ. ಮೀಸಲಿಡಲಾಗಿದೆ. ಒಟ್ಟಾರೆ ಬದ್ಧ ವೆಚ್ಚ ಸುಮಾರು 1.85 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ರಾಜ್ಯದ ಒಟ್ಟು ಆದಾಯ ಸ್ವೀಕೃತಿಗಳಲ್ಲಿ ಬದ್ಧ ವೆಚ್ಚದ ಪ್ರಮಾಣವೂ ಗಮನಾರ್ಹವಾಗಿರುವ ಹಿನ್ನೆಲೆಯಲ್ಲಿ, ಎಲ್ಲಾ ಸರ್ಕಾರಿ ನೌಕರರನ್ನು ಒಪಿಎಸ್‌ಗೆ ವರ್ಗಾಯಿಸುವ ನಿರ್ಧಾರವು ರಾಜ್ಯದ ಭವಿಷ್ಯದ ಹಣಕಾಸು ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಸರ್ಕಾರಿ ನೌಕರರಿಗೆ ನಿವೃತ್ತಿ ಭದ್ರತೆ ಒದಗಿಸುವುದರ ಜತೆಗೆ ರಾಜ್ಯದ ಹಣಕಾಸಿನ ಸುಸ್ಥಿರತೆಯನ್ನೂ ಕಾಪಾಡಿಕೊಳ್ಳುವುದು ಸರ್ಕಾರದ ಮುಂದಿರುವ ಪ್ರಮುಖ ಸವಾಲಾಗಿದೆ.

RELATED ARTICLES
spot_img

Latest News