ಗಂಗಾವತಿ (ಕೊಪ್ಪಳ), ಸೆ.6- ಪಾದಯಾತ್ರೆ ಆರಂಭಿಸಿದ ಬಳಿಕವೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ತರ ಕರ್ನಾಟಕದತ್ತ ಬರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.
ಬಳ್ಳಾರಿ ಚಲೋ ಪಾದಯಾತ್ರೆ ಆರನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಗಂಗಾವತಿಯ ಜಂಗಮರ ಕಲ್ಗುಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅವರು ತಮ್ಮನ್ನು ‘ನಾಡಿನ ದೊರೆ’ ಎಂದು ಕರೆಯಬೇಡಿ, ‘ಪ್ರಜಾಸೇವಕ’ ಎಂದು ಕರೆಯಿರಿ ಎಂದು ಹೇಳಿದ್ದಾರೆ. ಆದರೆ, ಕಳೆದ ಮೂರು ತಿಂಗಳಿಂದ ಬೆಂಗಳೂರಿನಲ್ಲೇ ಇದ್ದ ಮುಖ್ಯಮಂತ್ರಿ, ಬಿಜೆಪಿ ಪಾದಯಾತ್ರೆ ಆರಂಭಿಸದಿದ್ದರೆ ಉತ್ತರ ಕರ್ನಾಟಕದತ್ತ ಬರುತ್ತಿದ್ದರೇ ಎಂಬುದನ್ನು ಜನರೇ ಪ್ರಶ್ನಿಸುತ್ತಿದ್ದಾರೆ ಎಂದರು.
ಸೂಟು-ಬೂಟು ಧರಿಸಿ ಹೆಲಿಕಾಪ್ಟರ್‌ನಲ್ಲಿ ಓಡಾಡುವುದರಿಂದ ಮಾತ್ರ ಪ್ರಜಾಸೇವಕರಾಗಲು ಸಾಧ್ಯವಿಲ್ಲ ಎಂದು ಟೀಕಿಸಿದರು.ಮುಖ್ಯಮಂತ್ರಿಗಳ ಜೀವನದ ಬಹುದೊಡ್ಡ ಆಸೆಗಳು ಬಿಡದಿ ಟೌನ್‌ಶಿಪ್ ಮತ್ತು ಕನಕಪುರ ವಿಮಾನ ನಿಲ್ದಾಣ ಯೋಜನೆಗಳಾಗಿವೆ ಎಂದು ಕಾಣುತ್ತಿದೆ. ಈ ಎರಡೂ ಯೋಜನೆಗಳು ಪೂರ್ಣಗೊಂಡರೆ ಮುಂದೆ ಮುಖ್ಯಮಂತ್ರಿ ಆಗಿದ್ದರೂ, ಇಲ್ಲದಿದ್ದರೂ ಪರವಾಗಿಲ್ಲ ಎಂಬ ಲೆಕ್ಕಾಚಾರ ಅವರಲ್ಲಿರುವಂತಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ಬಡವರ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತಿದೆ. ಇದರಿಂದ ಲಕ್ಷಾಂತರ ಬಡವರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸರ್ಕಾರಕ್ಕೆ ಮನುಷ್ಯತ್ವ ಇದೆಯೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬರ ಪರಿಹಾರ ನೀಡಿಲ್ಲ. ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳನ್ನು ಪ್ರಜಾಸೇವಕ ಎಂದು ಹೇಗೆ ಕರೆಯಲು ಸಾಧ್ಯ ಎಂದು ಪ್ರಶ್ನಿಸಿದರು. ಕುರಿಗಾರರಿಗೆ ಅಗತ್ಯ ಸೌಕರ್ಯಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು.
ಜಾಹೀರಾತೇ ಬೇರೆ, ಕಾರ್ಯಕ್ರಮವೇ ಬೇರೆ ಎಂಬಂತಾಗಿದೆ. ಜನರಿಗೆ ಹತ್ತಿರವಾಗುವ ಕಾರ್ಯಕ್ರಮಗಳು ಹಾಗೂ ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ನೀಡಿದಾಗ ಮಾತ್ರ ಜನರು ಮುಖ್ಯಮಂತ್ರಿಯನ್ನು ಪ್ರಜಾಸೇವಕ ಎಂದು ಕರೆಯುತ್ತಾರೆ ಎಂದರು.
ಕುರಿ ಕಾಯುವ ಸಮುದಾಯದ ಮಕ್ಕಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ. ಉಚಿತ ಔಷಧವೂ ಸಿಗುತ್ತಿಲ್ಲ. ಬಡವರ ಪರವಾಗಿ ಸರ್ಕಾರ ಏನು ಮಾಡಿದೆ ಎಂಬುದನ್ನು ಜನರು ಪ್ರಶ್ನಿಸುತ್ತಿದ್ದಾರೆ. ಜನರಲ್ಲಿ ಇದು ಉತ್ತಮ ಸರ್ಕಾರ ಎಂಬ ಭಾವನೆ ಮೂಡಿಸಿದಾಗ ಮಾತ್ರ ಮುಖ್ಯಮಂತ್ರಿಯನ್ನು ಪ್ರಜಾಸೇವಕ ಎಂದು ಕರೆಯಲು ಸಾಧ್ಯ ಎಂದು ವಿಜಯೇಂದ್ರ ಹೇಳಿದರು.
