Homeಅಂತಾರಾಷ್ಟ್ರೀಯಪ್ರಯಾಣಿಕರ ಹಡಗಿನಲ್ಲಿ ಭೀಕರ ಅಗ್ನಿ ಅವಘಡ : ಐವರು ಸಾವು, 87 ಮಂದಿ ನಾಪತ್ತೆ

ಪ್ರಯಾಣಿಕರ ಹಡಗಿನಲ್ಲಿ ಭೀಕರ ಅಗ್ನಿ ಅವಘಡ : ಐವರು ಸಾವು, 87 ಮಂದಿ ನಾಪತ್ತೆ

ಮನಿಲಾ, ಸೆ.10- ಫಿಲಿಪ್ಪೀನ್ಸ್‌ನ ಕಡಲ ವ್ಯಾಪ್ತಿಯಲ್ಲಿ ಪ್ರಯಾಣಿಕರ ಹಡಗೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಐವರು ಮೃತಪಟ್ಟಿದ್ದಾರೆ. 87ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಮನಿಲಾದಿಂದ ಪಲವಾನ್ ಪ್ರಾಂತ್ಯದತ್ತ ತೆರಳುತ್ತಿದ್ದ ಎಂವಿ ಜೂನ್ ಆಸ್ಟರ್ ಹಡಗಿನಲ್ಲಿ ನಡುಸಮುದ್ರದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯ ಕರಾವಳಿ ಕಾವಲು ಪಡೆ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ 42 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದೆ.

ಅಪಘಾತದ ವೇಳೆ ಹಡಗಿನಲ್ಲಿ 112 ಪ್ರಯಾಣಿಕರು ಹಾಗೂ 17 ಸಿಬ್ಬಂದಿ ಸೇರಿದಂತೆ ಒಟ್ಟು 129 ಮಂದಿ ಇದ್ದರು. ದುರಂತದಲ್ಲಿ ಮೃತಪಟ್ಟ ಐವರ ಮೃತದೇಹಗಳನ್ನು ದಡಕ್ಕೆ ತರಲಾಗಿದೆ. ಉಳಿದಂತೆ 38 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಸೇರಿದಂತೆ 42 ಮಂದಿಯನ್ನು ಸಣ್ಣ ದೋಣಿಗಳು ಮತ್ತು ರಕ್ಷಣಾ ಹಡಗುಗಳ ಮೂಲಕ ರಕ್ಷಿಸಲಾಗಿದೆ.

ಪಲವಾನ್ ಪ್ರಾಂತ್ಯದ ಕೊರೊನ್ ಕಡಲತೀರದಿಂದ ಸುಮಾರು 2.2 ಕಿ.ಮೀ. ದೂರದಲ್ಲಿದ್ದಾಗ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಇಡೀ ನೌಕೆ ಜ್ವಾಲೆಗಾಹುತಿಯಾಗಿದೆ. ಇನ್ನೂ 87 ಮಂದಿಯ ಸುಳಿವು ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದರಿಂದ ನಾಪತ್ತೆಯಾದವರ ಸಂಖ್ಯೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಕೋಸ್ಟ್‌ ಗಾರ್ಡ್‌ ವಕ್ತಾರೆ ಕಮೋಡೋರ್ ನೊಯೆಮಿ ಕಯಾಬ್ಯಾಬ್ ತಿಳಿಸಿದ್ದಾರೆ.

ನಡುರಾತ್ರಿಯಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆ ವೇಳೆ ಸಮುದ್ರದಲ್ಲಿ ಬಲವಾದ ಅಲೆಗಳು ಹಾಗೂ ಪ್ರಬಲ ಪ್ರವಾಹ ಎದುರಾಗಿದ್ದು, ಬೆಂಕಿ ನಂದಿಸುವುದು ಮತ್ತು ನಾಪತ್ತೆಯಾದವರಿಗಾಗಿ ಶೋಧ ನಡೆಸುವುದು ರಕ್ಷಣಾ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.

7,000ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ಫಿಲಿಪ್ಪೀನ್ಸ್‌ನಲ್ಲಿ ದೋಣಿ ಸಂಚಾರ ಪ್ರಮುಖ ಸಾರಿಗೆ ಸಂಪರ್ಕವಾಗಿದೆ. ಆದರೆ ಹಳೆಯ ಹಡಗುಗಳ ಬಳಕೆ, ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವುದು ಹಾಗೂ ಕಳಪೆ ಸುರಕ್ಷತಾ ಮಾನದಂಡಗಳಿಂದಾಗಿ ಇಂತಹ ದುರಂತಗಳು ಪದೇಪದೇ ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

RELATED ARTICLES
spot_img

Latest News