ಓಸ್ಲೊ, ಸೆ.10- ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಡ್ರೋನ್ ಡಿಕ್ಕಿ ಹೊಡೆಯುವ ಅಪಾಯ ಕೂದಲೆಳೆ ಅಂತರದಲ್ಲಿ ತಪ್ಪಿದೆ ಎಂದು ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ.
ಮೊಲ್ಡೊವಾದಿಂದ ನಾರ್ವೆಯ ಓಸ್ಲೊಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ರಷ್ಯಾದ ‘ಗೆರಾನ್’ ಮಾದರಿಯ ಡ್ರೋನ್ ಮೊಲ್ಡೊವಾದಲ್ಲಿ ಪತನಗೊಂಡು ಸ್ಫೋಟಗೊಂಡಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ನಾರ್ವೆಯ ದಿವಂಗತ ಕಿಂಗ್ ಹೆರಾಲ್ಡ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಝೆಲೆನ್ಸ್ಕಿ ಮೊಲ್ಡೊವಾದಿಂದ ಓಸ್ಲೊಗೆ ತೆರಳುತ್ತಿದ್ದರು. ಮೊಲ್ಡೊವಾದಿಂದ ವಿಮಾನ ಟೇಕಾಫ್ ಆಗುವ ಸಂದರ್ಭದಲ್ಲಿ ಡ್ರೋನ್ ಅವರ ವಿಮಾನಕ್ಕೆ ಡಿಕ್ಕಿ ಹೊಡೆಯುವ ಗಂಭೀರ ಅಪಾಯವಿತ್ತು. ಯುದ್ಧದ ನಡುವೆ ಝೆಲೆನ್ಸ್ಕಿ ಎದುರಿಸುತ್ತಿರುವ ನಿತ್ಯದ ಭೀಕರ ವಾಸ್ತವ ಇದು ಎಂದು ನಾರ್ವೆ ಪ್ರಧಾನಿ ಸಾರ್ವಜನಿಕ ವಾಹಿನಿ ಎನ್‌ಆರ್‌ಕೆಗೆ ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಸುಮಾರು 4.30ರ ವೇಳೆಗೆ ರಷ್ಯಾದ ಡ್ರೋನ್ ಮೊಲ್ಡೊವಾ ವಾಯುಪ್ರದೇಶ ಪ್ರವೇಶಿಸಿದ ಹಿನ್ನೆಲೆಯಲ್ಲಿ ಸರ್ಕಾರ ತುರ್ತಾಗಿ ವಾಯುಪ್ರದೇಶವನ್ನು ಮುಚ್ಚಿತು. ಇದರಿಂದ ಝೆಲೆನ್ಸ್ಕಿ ಅವರ ವಿಶೇಷ ವಿಮಾನ ಸೇರಿದಂತೆ ಮೂರು ನಿರ್ಗಮನ ಮತ್ತು ನಾಲ್ಕು ಆಗಮನ ವಿಮಾನಗಳ ಹಾರಾಟ ವಿಳಂಬವಾಯಿತು.
ಚಿಸಿನೌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 160 ಕಿ.ಮೀ. ದೂರದಲ್ಲಿ ಡ್ರೋನ್ ನೆಲಕ್ಕೆ ಅಪ್ಪಳಿಸಿ ಭಾರಿ ಸ್ಫೋಟ ಸಂಭವಿಸಿದೆ ಎಂದು ಮೊಲ್ಡೊವಾ ಪೊಲೀಸರು ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಸ್ಫೋಟಕ ತಜ್ಞರಿಗೆ ರಷ್ಯಾ ವ್ಯಾಪಕವಾಗಿ ಬಳಸುವ ಇರಾನ್ ಮೂಲದ ‘ಗೆರಾನ್’ ಕಾಮಿಕೇಜ್ ಮಾದರಿಯ ಡ್ರೋನ್‌ನ ಅವಶೇಷಗಳು ಪತ್ತೆಯಾಗಿವೆ. ಸ್ಫೋಟದ ಪರಿಣಾಮ ನೆಲದಲ್ಲಿ ದೊಡ್ಡ ಕುಳಿಯೂ ನಿರ್ಮಾಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆದರೆ, ಝೆಲೆನ್ಸ್ಕಿ ಅವರ ವಿಮಾನಕ್ಕೆ ನೇರವಾಗಿ ಡಿಕ್ಕಿ ಹೊಡೆಯುವ ಹಂತಕ್ಕೆ ಡ್ರೋನ್ ಬಂದಿತ್ತು ಎಂಬ ನಾರ್ವೆ ಪ್ರಧಾನಿ ಹೇಳಿಕೆಯನ್ನು ಉಕ್ರೇನ್ ಅಧ್ಯಕ್ಷೀಯ ಮೂಲಗಳು ಸ್ವಲ್ಪ ಉತ್ಪ್ರೇಕ್ಷಿತ ಎಂದು ಬಣ್ಣಿಸಿವೆ.
ರಷ್ಯಾದ ಡ್ರೋನ್‌ಗಳು ಮೊಲ್ಡೊವಾ ಹಾಗೂ ರೊಮೇನಿಯಾ ವಾಯುಪ್ರದೇಶಕ್ಕೆ ನುಗ್ಗಿದ್ದರಿಂದ ಭದ್ರತಾ ಕಾರಣಕ್ಕಾಗಿ ವಿಮಾನಗಳ ಹಾರಾಟ ವಿಳಂಬವಾಗಿತ್ತು. ಆದರೆ ಝೆಲೆನ್ಸ್ಕಿ ಅವರ ವಿಮಾನವನ್ನು ನೇರವಾಗಿ ಗುರಿಯಾಗಿಸಲಾಗಿರಲಿಲ್ಲ ಎಂದು ಉಕ್ರೇನ್ ಅಧ್ಯಕ್ಷೀಯ ಮೂಲಗಳು ಸ್ಪಷ್ಟಪಡಿಸಿವೆ.
