ಭೋಪಾಲ್, ಸೆ.10 (ಪಿಟಿಐ)- ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ಹಾಗೂ ಭಕ್ತರ ನಂಬಿಕೆಗೆ ಧಕ್ಕೆ ತರುವ ಕೃತ್ಯಗಳನ್ನು ವಿರೋಧಿಸಿ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಅ.20ರಿಂದ ಉಜ್ಜಯಿನಿಯಿಂದ ಅಯೋಧ್ಯೆಯವರೆಗೆ ‘ಸನಾತನ ಸ್ವಾಭಿಮಾನ ಯಾತ್ರೆ’ ನಡೆಸುವುದಾಗಿ ಘೋಷಿಸಿದ್ದಾರೆ.
ವಿಜಯದಶಮಿಯಂದು ಆರಂಭವಾಗಲಿರುವ ಯಾತ್ರೆ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ಅಥವಾ ವಿರೋಧಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ ಪಾರದರ್ಶಕತೆ, ಸತ್ಯ ಮತ್ತು ನಂಬಿಕೆಯನ್ನು ರಕ್ಷಿಸುವುದು ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವುದು ಯಾತ್ರೆಯ ಉದ್ದೇಶ ಎಂದು ಅವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಯಾತ್ರೆಯಲ್ಲಿ ಭಾಗವಹಿಸಲು ಆಸಕ್ತರು ನೋಂದಾಯಿಸಿಕೊಳ್ಳಲು ಗೂಗಲ್ ಫಾರ್ಮ್ ಕೂಡ ಬಿಡುಗಡೆ ಮಾಡಲಾಗಿದೆ. ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳ ದೇವಸ್ಥಾನದಿಂದ ಉತ್ತರ ಪ್ರದೇಶದ ಅಯೋಧ್ಯೆಯವರೆಗೆ ಯಾತ್ರೆ ನಡೆಯಲಿದೆ. ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ದಿಗ್ವಿಜಯ ಸಿಂಗ್ ಈ ಯಾತ್ರೆಯನ್ನು ಘೋಷಿಸಿರುವುದು ಗಮನಾರ್ಹವಾಗಿದೆ.
ಅಯೋಧ್ಯೆಯ ರಾಮಮಂದಿರಕ್ಕೆ ಸಂಬಂಧಿಸಿದ ದೇಣಿಗೆ ಹಣದ ದುರುಪಯೋಗದ ಆರೋಪಗಳಿವೆ. ಈ ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಅವರು ಜೈಲಿನಲ್ಲಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ. ಶ್ರೀರಾಮ ಲಕ್ಷಾಂತರ ಸನಾತನಿಗಳ ನಂಬಿಕೆ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದು, ದೇಣಿಗೆ ಹಾಗೂ ಕಾಣಿಕೆಗಳ ದುರುಪಯೋಗದ ಮೂಲಕ ಕೋಟ್ಯಂತರ ರೂಪಾಯಿ ವಂಚನೆ ನಡೆದಿರುವ ಆರೋಪಗಳು ಕೇಳಿಬಂದಿವೆ ಎಂದರು.
ದೇಣಿಗೆ ಹಣವನ್ನು ಬಳಸಿ ವೈಯಕ್ತಿಕ ಆಸ್ತಿ ಹಾಗೂ ವಾಹನಗಳನ್ನು ಖರೀದಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ನಮ್ಮ ನಂಬಿಕೆ ಮತ್ತು ಕಾಣಿಕೆಗಳ ಲೂಟಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಿಂಗ್ ಹೇಳಿದರು.
ರಾಮಮಂದಿರಕ್ಕಾಗಿ ರಚಿಸಲಾದ ಟ್ರಸ್ಟ್‌ಗೆ ಸಂಬಂಧಿಸಿದ ಕೆಲವರು ಕಾಣಿಕೆಗಳ ದುರುಪಯೋಗದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ದೇಣಿಗೆ ಕಳ್ಳತನದ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಚಂಪತ್ ರಾಯ್ ಅವರನ್ನು ಸರ್ಕಾರ ರಕ್ಷಿಸುತ್ತಿದೆ ಎಂದು ದೂರಿದರು.
ರಾಮ ಜನ್ಮಭೂಮಿ ಚಳುವಳಿಯನ್ನು ಸ್ಮರಿಸಿದ ಸಿಂಗ್, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ 1988-89ರಲ್ಲಿ ವಿಶ್ವ ಹಿಂದೂ ಪರಿಷತ್ ಆರಂಭಿಸಿದ್ದ ‘ರಾಮ ಶಿಲಾ ಪೂಜನ್’ ಅಭಿಯಾನದಲ್ಲಿ ತಾವು ಭಾಗವಹಿಸಿ ಸಾಧ್ಯವಾದಷ್ಟು ದೇಣಿಗೆ ನೀಡಿದ್ದಾಗಿ ಹೇಳಿದರು.
ವಿಎಚ್‌ಪಿ, ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಸಂಬಂಧಿಸಿದ ಕೆಲವರು ನಂತರದ ಅವಧಿಯಲ್ಲಿ ದೇಣಿಗೆ ಹಾಗೂ ಕಾಣಿಕೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಭಕ್ತರ ನಂಬಿಕೆಗೆ ಸಂಬಂಧಿಸಿದ ನಿಧಿಯ ದುರುಪಯೋಗವನ್ನು ಯಾವುದೇ ಸಂದರ್ಭದಲ್ಲೂ ಸಹಿಸಲು ಸಾಧ್ಯವಿಲ್ಲ ಎಂದರು.
ವಿಜಯದಶಮಿ ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಂಕೇತಿಸುತ್ತದೆ. ಇದೇ ಆಶಯದಲ್ಲಿ ‘ಶಿವಧಾಮ’ ಉಜ್ಜಯಿನಿಯಿಂದ ‘ರಾಮಧಾಮ’ ಅಯೋಧ್ಯೆಯವರೆಗೆ ಸನಾತನ ಸ್ವಾಭಿಮಾನ ಯಾತ್ರೆ ಆಯೋಜಿಸಲು ನಿರ್ಧರಿಸಿದ್ದೇನೆ ಎಂದು ಸಿಂಗ್ ಹೇಳಿದರು. ಯಾತ್ರೆಯ ಧ್ಯೇಯವಾಕ್ಯ ‘ಯತೋ ಧರ್ಮಸ್ತತೋ ಜಯಃ’ (ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ) ಎಂದು ಅವರು ತಿಳಿಸಿದರು.
