ಬಂಗಿ, ಆ.19- ಆಫ್ರಿಕಾದ ಪಶ್ಚಿಮ ಭಾಗದಲ್ಲಿ ಚಿನ್ನದ ಗಣಿಯೊಂದು ಕುಸಿದು ಕನಿಷ್ಠ 30 ಕಾರ್ಮಿಕರು ಮೃತಪಟ್ಟಿದ್ದಾರೆ.ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹಾಗೂ ಸ್ಥಳೀಯರು ತಿಳಿಸಿದ್ದಾರೆ.
ನಾನಾ-ಮಾಂಬರೆ ಪ್ರಿಫೆಕ್ಚರ್ನ ಅಬ್ಬಾ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಅವಶೇಷಗಳಡಿ ಸಿಲುಕಿರುವ ಇತರ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಅವರು ಜೀವಂತವಾಗಿ ಪತ್ತೆಯಾಗುವ ಸಾಧ್ಯತೆ ಕ್ಷೀಣಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಪ-ಪ್ರಿಫೆಕ್ಚರ್ನ ಉಪ ಮೇಯರ್ ಸೌಲೈಮಾನ್ ಅವರ ಪ್ರಕಾರ, ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಕುಸಿದ ಗಣಿಯಿಂದ 30 ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗಾಯಗೊಂಡ ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
“ಪರಿಸ್ಥಿತಿ ಭೀಕರವಾಗಿದೆ. ಅವಶೇಷಗಳಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಸಂಸ್ಥೆಗಳು ಹಾಗೂ ನೆರವು ನೀಡಲು ಮುಂದಾಗುವ ಎಲ್ಲರೂ ಸಹಕರಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ. ಘಟನಾ ಸ್ಥಳದ ದೃಶ್ಯಗಳು ಎನ್ನಲಾದ ವಿಡಿಯೊದಲ್ಲಿ ರಕ್ಷಣಾ ಕಾರ್ಯಾಚರಣೆ ಗೊಂದಲಮಯವಾಗಿ ನಡೆಯುತ್ತಿರುವುದು ಕಂಡುಬಂದಿದೆ.
