ಶಿಮ್ಲಾ, ಆ.19- ಹಿಮಾಚಲ ಪ್ರದೇಶದ ಚಂಬಾ ಮತ್ತು ಕಾಂಗ್ರಾ ಜಿಲ್ಲೆಗಳಲ್ಲಿ ಇಂದು ಮಧ್ಯಮ ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದ್ದು, ಜನರಲ್ಲಿ ಆತಂಕ ಮೂಡಿದೆ.ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (ಎನ್‌ಸಿಎಸ್) ಪ್ರಕಾರ, ಚಂಬಾ ಜಿಲ್ಲೆಯಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರ ಕೇಂದ್ರಬಿಂದು ಕರೇರಿ ಸಮೀಪದಲ್ಲಿದ್ದು, ಭೂಮಿಯಿಂದ 5 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ.
ಇದಾದ ಸುಮಾರು 45 ನಿಮಿಷಗಳ ಬಳಿಕ ಕಾಂಗ್ರಾ ಜಿಲ್ಲೆಯಲ್ಲಿ ಮತ್ತೊಂದು ಮಧ್ಯಮ ತೀವ್ರತೆಯ ಭೂಕಂಪ ದಾಖಲಾಗಿದೆ. ಇದರ ಕೇಂದ್ರವೂ 5 ಕಿ.ಮೀ. ಆಳದಲ್ಲಿತ್ತು.ಭೂಕಂಪಗಳು ಕಡಿಮೆ ಆಳದಲ್ಲಿ ಸಂಭವಿಸಿದ್ದರಿಂದ ಕಂಪನದ ಅನುಭವ ತೀವ್ರವಾಗಿತ್ತು. ಕೆಲ ಪ್ರದೇಶಗಳಲ್ಲಿ ಆತಂಕಗೊಂಡ ಜನರು ಮನೆಗಳಿಂದ ಹೊರಗೆ ಓಡಿ ಬಂದರು.
ಸದ್ಯ ಯಾವುದೇ ಸಾವು-ನೋವು ಅಥವಾ ಕಟ್ಟಡಗಳು ಸೇರಿದಂತೆ ಇತರ ಆಸ್ತಿಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿವೆ. ಕಾಂಗ್ರಾ ಮತ್ತು ಚಂಬಾ ಜಿಲ್ಲೆಗಳು ಭೂಕಂಪನ ವಲಯ-5ರಲ್ಲಿ ಬರುತ್ತವೆ. ಇದು ಭೂಕಂಪದಿಂದ ಹೆಚ್ಚಿನ ಹಾನಿ ಸಂಭವಿಸುವ ಅಪಾಯವಿರುವ ಪ್ರದೇಶ ಎಂದು ವರ್ಗೀಕರಿಸಲಾಗಿದೆ.
