ಚಾಮರಾಜನಗರ, ಆ.19- ಅಕ್ರಮವಾಗಿ ವನ್ಯಪ್ರಾಣಿಗಳ ಬೇಟೆ ನಡೆಸುತ್ತಿದ್ದ ತಂಡದ ಸದಸ್ಯನೆಂದು ಆರೋಪಿಸಲಾಗಿರುವ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ನಡೆದ ಗುಂಡಿನ ಚಕಮಕಿಯ ವೇಳೆ ಸ್ಥಳದಿಂದ ಪರಾರಿಯಾಗಿದ್ದ ವ್ಯಕ್ತಿಯೊಬ್ಬರು, ತಾವು ಇರುವ ಸ್ಥಳವನ್ನು ಬಹಿರಂಗಪಡಿಸದೆ ವಿಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿದ್ದರು. ಪ್ರಕರಣದ ನಾಲ್ಕನೇ ಆರೋಪಿ ಎನ್ನಲಾಗಿರುವ ಮಹಿಮದಾಸ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಗುಂಡಿನ ದಾಳಿ ಬೆಳಗ್ಗೆ ಸುಮಾರು 5.30ರ ವೇಳೆಗೆ ನಡೆದಿದೆ ಎಂದು ಹೇಳಿಕೊಂಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದರು. ಇದರಿಂದ ಭಯಗೊಂಡು ತಾವು ಸ್ಥಳದಿಂದ ಪರಾರಿಯಾದೆ ಎಂದು ಅವರು ತಿಳಿಸಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಮನೆಗೆ ತೆರಳಿ, ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗಿ ಮಹಿಮದಾಸ್ ಹೇಳಿದ್ದಾರೆ. “ನನಗೆ ತುಂಬಾ ಅನಾರೋಗ್ಯವಾಗಿತ್ತು. ಭಯದಿಂದ ಗಾಬರಿಗೊಂಡು ಓಡಾಡುತ್ತಿದ್ದೆ. ಹೇಗೋ ನಿಧಾನವಾಗಿ ಮನೆಗೆ ತಲುಪಿ, ಬಳಿಕ ಆಸ್ಪತ್ರೆಗೆ ಬಂದೆ” ಎಂದು ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಅವರು ಹೇಳಿದ್ದಾರೆ.
ಗುಂಡಿನ ಚಕಮಕಿ ಪ್ರಕರಣದಲ್ಲಿ ತಮ್ಮನ್ನು ಸಾಕ್ಷಿಯನ್ನಾಗಿ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಮಹಿಮದಾಸ್ ಆರೋಪಿಸಿದ್ದಾರೆ. ಇದರಿಂದ ತಾವು ಆತಂಕಗೊಂಡಿದ್ದು, ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಅರಣ್ಯ ಇಲಾಖೆಯಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಆ.15ರಂದು ಮುಂಜಾನೆ ಕಾವೇರಿ ವನ್ಯಜೀವಿ ಧಾಮದ ವ್ಯಾಪ್ತಿಯ ಶಾಗ್ಯ ಅರಣ್ಯ ವಲಯದ ದಟ್ಟ ಕಾಡಿನಲ್ಲಿ ಈ ಘಟನೆ ನಡೆದಿತ್ತು. ಅಕ್ರಮ ಬೇಟೆ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಶಂಕಿತ ಬೇಟೆಗಾರರೊಂದಿಗೆ ಗುಂಡಿನ ಚಕಮಕಿಯಲ್ಲಿ ತೊಡಗಿದ್ದರು. ಘಟನೆಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿದ್ದರು.
