ಕ್ಯಾರಕಾಸ್(ವೆನೆಜುವೆಲಾ), ಜೂ.25- ವೆನೆಜುವೆಲಾದ ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ಭೂಕಂಪ ಸಂಭವಿಸಿ 32 ಸಾವು ಸಂಭವಿಸಿ 700 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ. ಒಂದು ಅಂದಾಜಿನ ಪ್ರಕಾರ, ವೆನೆಜುವೆಲಾದಲ್ಲಿ ಅವಳಿ ಭೂಕಂಪಗಳಿಂದ ಸಾವನ್ನಪ್ಪಿದವರ ಸಂಖ್ಯೆ 10,000 ದಿಂದ ಒಂದು ಲಕ್ಷದವರೆಗೆ ಇರಬಹುದು ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಅಂದಾಜಿಸಿದೆ.
ದಕ್ಷಿಣ ಅಮೆರಿಕದ ವೆನೆಜುವೆಲಾದಲ್ಲಿ ಬುಧವಾರ ಸಂಜೆ ಸಂಭವಿಸಿದ ಸತತ ಎರಡು ಪ್ರಬಲ ಭೂಕಂಪಗಳು ಭಾರೀ ಅವಾಂತರವನ್ನೇ ಸೃಷ್ಟಿಸಿವೆ. ಈ ಪ್ರಾಕೃತಿಕ ವಿಕೋಪದಿಂದಾಗಿ ರಾಜಧಾನಿ ಕರಾಕಸ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಕಟ್ಟಡಗಳು ಕುಸಿದು ಬಿದ್ದಿದ್ದು, ಅಪಾರ ಹಾನಿಯಾಗಿದೆ.
ಈ ಘಟನೆಯು ಕಳೆದ ಒಂದು ಶತಮಾನದಲ್ಲೇ ವೆನೆಜುವೆಲಾದಲ್ಲಿ ಸಂಭವಿಸಿದ ಅತೀ ದೊಡ್ಡ ಭೂಕಂಪಗಳಲ್ಲಿ ಒಂದಾಗಿದೆ ಎಂದು ಗುರುತಿಸಲಾಗಿದೆ.ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ವರದಿಯ ಪ್ರಕಾರ, ಒಂದರ ಬೆನ್ನಲ್ಲೇ ಇನ್ನೊಂದು ಎಂಬಂತೆ ಎರಡು ಪ್ರಬಲ ಭೂಕಂಪಗಳು ಸಂಭವಿಸಿವೆ. ಸದ್ಯದ ಪರಿಸ್ಥಿತಿಯಲ್ಲಿ ಭಗ್ನಾವಶೇಷಗಳಡಿ ಸಿಲುಕಿರುವವರ ರಕ್ಷಣೆ ಅತೀ ದೊಡ್ಡ ಸವಾಲಾಗಿದೆ. ನೂರಾರು ಜನರು ಗಾಯಗೊಂಡಿರುವುದರಿಂದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುತ್ತಿದೆ.
ಭೂಕಂಪನದ ನಂತರ ಸುಮಾರು 20 ಕ್ಕೂ ಹೆಚ್ಚು ಆಫ್ಟರ್‌ಶಾಕ್‌ಗಳು ಸಂಭವಿಸಿರುವುದು ಜನರಲ್ಲಿ ಮತ್ತಷ್ಟು ಭೀತಿಯನ್ನು ಮೂಡಿಸಿದೆ. ರಿಕ್ಟರ್ ಮಾಪಕದಲ್ಲಿ ಮೊದಲ ಭೂಕಂಪವು 7.2 ಮತ್ತು ಕೇವಲ ಒಂದು ನಿಮಿಷದ ಅಂತರದಲ್ಲಿ ಸಂಭವಿಸಿದ ಎರಡನೇ ಭೂಕಂಪವು 7.5 ತೀವ್ರತೆಯನ್ನು ದಾಖಲಿಸಿದೆ. ಈ ಭೂಕಂಪಗಳ ಕೇಂದ್ರಬಿಂದು ಮೊರೊನ್‌ನ ನೈಋತ್ಯ ಭಾಗದಲ್ಲಿ, ಸುಮಾರು 10 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ.ಕರಾಕಸ್ ನಗರದಲ್ಲಿ ತೀವ್ರವಾದ ಕಂಪನ ಉಂಟಾಗಿದ್ದು, ಬಹುಮಹಡಿ ಕಟ್ಟಡಗಳು ಮತ್ತು ಮನೆಗಳ ಗೋಡೆಗಳು ಕುಸಿದಿವೆ.
ಸಾರ್ವಜನಿಕರು ಆತಂಕದಿಂದ ರಸ್ತೆಗಳಿಗೆ ಓಡಿಬಂದಿದ್ದಾರೆ. ಭೂಕಂಪದ ನಂತರದ ಕಂಪನಗಳ ಭೀತಿಯಿಂದಾಗಿ ಜನರು ಮನೆಗಳನ್ನು ತೊರೆದು ಹೊರಾಂಗಣದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ವಿಮಾನ ನಿಲ್ದಾಣಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯಗಳ ಮೇಲೆ ಇದು ಪರಿಣಾಮ ಬೀರಿದೆ.
ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿರೊಡ್ರಿಗಸ್ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಇದುವರೆಗೆ 32 ಜನರು ಮೃತಪಟ್ಟಿದ್ದಾರೆ ಮತ್ತು 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಲಾ ಗೈರಾ ರಾಜ್ಯವು ಅತೀ ಹೆಚ್ಚು ಹಾನಿಗೊಳಗಾಗಿದ್ದು, ಇದನ್ನು ದುರಂತ ವಲಯ ಎಂದು ಸರ್ಕಾರ ಘೋಷಿಸಿದೆ. ಇಲ್ಲಿನ ಡಜನ್‌ಗಟ್ಟಲೆ ಕಟ್ಟಡಗಳು ಸಂಪೂರ್ಣವಾಗಿ ನೆಲಸಮವಾಗಿವೆ. ರಾಜಧಾನಿ ಕರಾಕಸ್‌ನ ಪ್ರಮುಖ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.
ಅಲ್ಲದೆ, ನೈಸರ್ಗಿಕ ಅನಿಲ ಪೂರೈಕೆ ಮತ್ತು ಸಬ್‌ವೇ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸರ್ಕಾರವು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ರಕ್ಷಣಾ ಕಾರ್ಯಾಚರಣೆಗೆ ಆದ್ಯತೆ ನೀಡಲಾಗಿದ್ದು, ಶಾಲಾ ಕಟ್ಟಡಗಳನ್ನು ತಾತ್ಕಾಲಿಕ ಆಶ್ರಯ ತಾಣಗಳು ಮತ್ತು ಪರಿಹಾರ ಕೇಂದ್ರಗಳಾಗಿ ಬಳಸಲಾಗುತ್ತಿದೆ. ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ಅಧಿಕಾರಿಗಳು ಸಾರ್ವಜನಿಕರಿಗೆ ಕಟ್ಟಡಗಳ ಒಳಗೆ ಹೋಗದಂತೆ ಮತ್ತು ಮುನ್ನೆಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.ಸಾವುನೋವಿನ ನಿಖರವಾದ ಸಂಖ್ಯೆ ಇನ್ನೂ ಅಧಿಕೃತವಾಗಿ ದೃಢೀಕೃತವಾಗಬೇಕಿದೆ. ಆದರೆ ಹಾನಿಯ ಪ್ರಮಾಣ ಅತ್ಯಂತ ಹೆಚ್ಚಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.
ಈ ಭೂಕಂಪದ ಪ್ರಭಾವವು ಪಕ್ಕದ ದೇಶಗಳಾದ ಬ್ರೆಜಿಲ್ ಮತ್ತು ಕೊಲಂಬಿಯಾದಲ್ಲೂ ಲಘುವಾಗಿ ಅನುಭವಕ್ಕೆ ಬಂದಿದೆ ಎಂದು ವರದಿಯಾಗಿದೆ. ಕಳೆದ ಹಲವು ದಶಕಗಳಲ್ಲಿ ವೆನೆಜುವೆಲಾ ಕಂಡ ಅತಿದೊಡ್ಡ ದುರಂತಗಳಲ್ಲಿ ಇದೂ ಒಂದಾಗಿದೆ.
ಮೋದಿ ಸಂತಾಪ :
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವೆನೆಜುವೆಲಾದಲ್ಲಿನ ಭೂಕಂಪದ ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂಕಷ್ಟದ ಈ ಸಮಯದಲ್ಲಿ ಭಾರತವು ವೆನೆಜುವೆಲಾಗೆ ಅಗತ್ಯವಿರುವ ಎಲ್ಲ ರೀತಿಯ ಸಹಾಯವನ್ನು ನೀಡಲು ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ. ಅಮೆರಿಕ ಸೇರಿದಂತೆ ಹಲವು ದೇಶಗಳು ವೆನೆಜುವೆಲಾಗೆ ನೆರವು ನೀಡಲು ಮುಂದೆ ಬಂದಿದ್ದು, ರಕ್ಷಣಾ ಕಾರ್ಯಗಳಲ್ಲಿ ನೆರವಾಗಲು ವಿದೇಶಿ ತಂಡಗಳು ಆಗಮಿಸುತ್ತಿವೆ.
ಹವಾಮಾನ ಬದಲಾವಣೆ ಮತ್ತು ಪ್ರಕೃತಿ ವಿಕೋಪಗಳ ಆತಂಕ :
ತಜ್ಞರ ಪ್ರಕಾರ ವೆನೆಜುವೆಲಾದಲ್ಲಿ ಇಂತಹ ಪ್ರಬಲ ಭೂಕಂಪಗಳು ಅಪರೂಪ. ದೇಶವು ಭೂಪಟಲದ ದೋಷರೇಖೆಗಳ ಸಮೀಪದಲ್ಲಿದ್ದರೂ, ದಕ್ಷಿಣ ಅಮೆರಿಕ ಮತ್ತು ಕರೀಬಿಯನ್ ಭೂಫಲಕಗಳ ಸ್ಥಾನಮಾನದಿಂದ ಇಲ್ಲಿ ದೊಡ್ಡ ಭೂಕಂಪಗಳು ಕಡಿಮೆ ಸಂಭವಿಸುತ್ತವೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
