Saturday, April 11, 2026
Homeಅಂತಾರಾಷ್ಟ್ರೀಯಹಾರ್ಮುಜ್‌ ಜಲಸಂಧಿ ತೆರೆಯಲು ಇರಾನ್‌ಗೆ 48 ಗಂಟೆಯ ಡೆಡ್ ಲೈನ್ ಕೊಟ್ಟ ಟ್ರಂಪ್

ಹಾರ್ಮುಜ್‌ ಜಲಸಂಧಿ ತೆರೆಯಲು ಇರಾನ್‌ಗೆ 48 ಗಂಟೆಯ ಡೆಡ್ ಲೈನ್ ಕೊಟ್ಟ ಟ್ರಂಪ್

Trump warns Iran of strikes on power plants if Strait of Hormuz is not reopened in 48 hours

ವಾಷಿಂಗ್ಟನ್‌,ಮಾ.22- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದು, ಟೆಹ್ರಾನ್‌ 48 ಗಂಟೆಗಳ ಒಳಗೆ ಹಾರ್ಮುಜ್‌ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯದಿದ್ದರೆ ಇರಾನಿನ ವಿದ್ಯುತ್‌ ಸ್ಥಾವರಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

ಹಾರ್ಮುಜ್‌ ಜಲಸಂಧಿ ತೈಲ ಜಾಗತಿಕ ಮಾರುಕಟ್ಟೆಗಳನ್ನು ತಲುಪುವ ಪ್ರಮುಖ ಮಾರ್ಗವಾಗಿದ್ದು, ತೈಲ ಬೆಲೆಗಳು ಗಗನಕ್ಕೇರುತ್ತಿದ್ದಂತೆ ಜಲಸಂಧಿಯನ್ನು ಭದ್ರಪಡಿಸಿಕೊಳ್ಳಲು ಟ್ರಂಪ್‌ ಹೆಚ್ಚಿನ ಒತ್ತಡ ಎದುರಿಸುತ್ತಿದ್ದಾರೆ. ಹೀಗಾಗಿ ಒತ್ತಡಕ್ಕೆ ಒಳಗಾಗಿರುವ ಅವರು, ಇರಾನ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.

ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ತೈಲವನ್ನು ಸಾಗಿಸುವ ಹಾರ್ಮುಜ್‌ ಜಲಸಂಧಿಯನ್ನು ಹಡಗು ಸಂಚಾರಕ್ಕಾಗಿ ಇರಾನ್‌ ಮತ್ತೆ ತೆರೆಯಬೇಕು. 48 ಗಂಟೆಗಳ ಒಳಗೆ, ಹಾರ್ಮುಜ್‌ ಜಲಸಂಧಿಯನ್ನು ತೆರೆಯದಿದ್ದರೆ, ಅಮೆರಿಕವು ಅದರ ವಿವಿಧ ವಿದ್ಯುತ್‌ ಸ್ಥಾವರಗಳನ್ನು ಹೊಡೆದು ನಾಶಪಡಿಸುತ್ತದೆ, ಮೊದಲು ಅತಿದೊಡ್ಡ ವಿದ್ಯುತ್‌ ಸ್ಥಾವರದಿಂದ ಇದು ಪ್ರಾರಂಭವಾಗುತ್ತದೆ ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್‌ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಇರಾನ್‌ ಸೇನೆಯು, ಈ ಪ್ರದೇಶದಲ್ಲಿ ಅಮೆರಿಕಕ್ಕೆ ಸೇರಿದ ಎಲ್ಲಾ ಇಂಧನ, ತಂತ್ರಜ್ಞಾನ ಮತ್ತು ಉಪ್ಪುನೀರಿನ ನಿರ್ಮೂಲನ ಮೂಲಸೌಕರ್ಯಗಳನ್ನು ಟಾರ್ಗೆಟ್‌ ಮಾಡಿ ಹೊಡೆಯುವುದಾಗಿ ಹೇಳಿದೆ.

ಹಾರ್ಮುಜ್‌ ಜಲಸಂಧಿಯು ಇರಾನ್‌ ಮತ್ತು ಓಮನ್‌ ನಡುವಿನ 55 ಕಿಲೋಮೀಟರ್‌ ಅಗಲದ ಕಿರಿದಾದ ಜಲಸಂಧಿಯಾಗಿದ್ದು, ಪರ್ಷಿಯನ್‌ ಕೊಲ್ಲಿಯನ್ನು ಅರೇಬಿಯನ್‌ ಸಮುದ್ರದಿಂದ ಬೇರ್ಪಡಿಸುತ್ತದೆ. ಇದು ಇಂಧನ ಕ್ಷೇತ್ರದ ವಿಷಯದಲ್ಲಿ ಜಾಗತಿಕ ರಿಯಲ್‌ ಎಸ್ಟೇಟ್‌ನ ಒಂದು ಪ್ರಮುಖ ಭಾಗವಾಗಿದೆ ಮತ್ತು ವಿಶ್ವದ ಅತ್ಯಂತ ಜನನಿಬಿಡ ಮತ್ತು ಅತ್ಯಂತ ಕಾರ್ಯತಂತ್ರದ ಮಹತ್ವದ ಹಡಗು ಮಾರ್ಗಗಳಲ್ಲಿ ಒಂದಾಗಿದೆ.

ವಿಶ್ವದ ಒಟ್ಟು ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹರ್ಮುಜ್‌ ಜಲಸಂದಿಯನ್ನು ಇರಾನ್‌ ಮುಚ್ಚಿರುವುದು ಜಾಗತಿಕ ಮಟ್ಟದಲ್ಲಿ ತೈಲ ಮತ್ತು ಎಲ್‌ಪಿಜಿ ಅಭಾವಕ್ಕೆ ಕಾರಣವಾಗಿದೆ. ಈ ಒಂದು ನಿರ್ಧಾರದಿಂದಾಗಿ ವಿಶ್ವಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಗಗನಕ್ಕೇರುತ್ತಿವೆ. ಕೈಗಾರಿಕೆಗಳು ಮತ್ತು ಸಾರಿಗೆ ವ್ಯವಸ್ಥೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಈ ಆರ್ಥಿಕ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿರುವ ಟ್ರಂಪ್‌, ಇರಾನ್‌ ವಿರುದ್ಧ ನೇರ ಸಮರ ಸಾರಿದ್ದಾರೆ.

ಹರ್ಮುಜ್‌ ಜಲಸಂದಿಯನ್ನು ಮುಕ್ತಗೊಳಿಸದಿದ್ದರೆ, ವಿಶ್ವ ಭೂಪಟದಿಂದ ಇರಾನ್‌ ದೇಶವನ್ನೇ ಅಳಿಸಿ ಹಾಕುತ್ತೇನೆ ಎಂದು ಟ್ರಂಪ್‌ ಎಚ್ಚರಿಕೆ ನೀಡಿರುವುದು, ಇರಾನ್‌ನ ಪ್ರಮುಖ ತೈಲ ಕೇಂದ್ರವಾದ ಖರ್ಗ್‌ ದ್ವೀಪವನ್ನು ಅಮೆರಿಕ ಮತ್ತು ಇಸ್ರೇಲ್‌ ಪಡೆಗಳು ಜಂಟಿಯಾಗಿ ಕೈವಶ ಮಾಡಿಕೊಳ್ಳಲಿವೆಯೇ ಎಂಬ ಪ್ರಶ್ನೆ ಈಗ ಕಾಡುತ್ತಿದೆ.

ಇರಾನ್‌ನ ಆರ್ಥಿಕತೆಯ ಬೆನ್ನೆಲುಬಾಗಿರುವ ಅದರ ತೈಲ ಸಂಸ್ಕರಣಾ ಘಟಕಗಳು ಮತ್ತು ಗಣಿಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವುದು ಅಮೆರಿಕದ ಉದ್ದೇಶವಾಗಿದೆ. ಟ್ರಂಪ್‌ ಅವರ ಈ ಹೇಳಿಕೆಯು ಇರಾನ್‌ನ ಅಣು ವಿದ್ಯುತ್‌ ಸ್ಥಾವರಗಳ ಮೇಲೆಯೂ ದಾಳಿ ನಡೆಯಬಹುದು ಎಂಬ ಮುನ್ಸೂಚನೆ ನೀಡಿದೆ. ಇಸ್ರೇಲ್‌ ಸಹ ಅಮೆರಿಕದ ಈ ನಿರ್ಧಾರಕ್ಕೆ ಬೆಂಬಲ ನೀಡುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಯುದ್ಧದ ಕಾರ್ಮೋಡ ಕವಿದಿದೆ.

ತೈಲ ಬೆಲೆ ಏರಿಕೆಯಿಂದಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಟ್ರಂಪ್‌ ಅವರ ಈ ಕಠಿಣ ನಿಲುವು ಜಾಗತಿಕ ಮಾರುಕಟ್ಟೆಯನ್ನು ಸರಿಪಡಿಸುವ ಉದ್ದೇಶ ಹೊಂದಿದೆ ಎನ್ನಲಾಗುತ್ತಿದ್ದರೂ, ಯುದ್ಧ ನಡೆದರೆ ಅದು ಜಗತ್ತನ್ನು ವಿನಾಶದತ್ತ ಕೊಂಡೊಯ್ಯಬಹುದು ಎಂಬ ಆತಂಕ ಮನೆ ಮಾಡಿದೆ.

RELATED ARTICLES

Latest News