ಜೆರುಸಲೆಂ, ಅ.3- ಫ್ಲೈ ದುಬೈ ವಿಮಾನ ಅಪಹರಿಸಿ ಪತನಗೊಳಿಸುವ ಉದ್ದೇಶ ಹೊಂದಿದ್ದವರು ಭವಿಷ್ಯದಲ್ಲಿ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಂತೆ, ಒಮಾನ್ ಮೂಲದ ಕೋ-ಪೈಲಟ್ ಜಿಹಾದಿ ಉಗ್ರವಾದಿ ಆಲೋಚನೆಗೆ ಒಳಗಾಗಿ, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೊಂದಿಗೆ ವಿಮಾನವನ್ನು ಪತನಗೊಳಿಸುವ ಸ್ಪಷ್ಟ ದುರುದ್ದೇಶ ಹೊಂದಿದ್ದ ಎಂಬ ಸತ್ಯ ಬಹಿರಂಗವಾಗುತ್ತಿದೆ ಎಂದು ನೆತನ್ಯಾಹು ತಿಳಿಸಿದ್ದಾರೆ.
ಸಮಯ ಕಳೆದಂತೆ ಘಟನೆಯ ಸಂಪೂರ್ಣ ಚಿತ್ರಣ ಸ್ಪಷ್ಟವಾಗುತ್ತಿದೆ. ದಾಳಿಕೋರ ಸಹ-ಪೈಲಟ್ ಇಸ್ಲಾಮಿಕ್ ಮೂಲಭೂತವಾದಕ್ಕೆ ಒಳಗಾಗಿದ್ದ. ವಿಮಾನದಲ್ಲಿದ್ದ ಎಲ್ಲಾ ಅಮಾಯಕರೊಂದಿಗೆ ವಿಮಾನವನ್ನು ಪತನಗೊಳಿಸುವುದೇ ಆತನ ಗುರಿಯಾಗಿತ್ತುಎಂದು ನೆತನ್ಯಾಹು ತಿಳಿಸಿದ್ದಾರೆ.
ಈ ಕೃತ್ಯವನ್ನು ಕೋ-ಪೈಲಟ್ ಒಬ್ಬನೇ ಎಸಗಿದ್ದಾನೆಯೇ ಅಥವಾ ಆತನ ಹಿಂದೆ ಯಾವುದೇ ವಿದೇಶಿ ಶಕ್ತಿ ಅಥವಾ ಉಗ್ರ ಸಂಘಟನೆಯ ಕೈವಾಡವಿದೆಯೇ ಎಂಬುದನ್ನು ಇಸ್ರೇಲ್ ತನಿಖಾ ಸಂಸ್ಥೆಗಳು ಆಳವಾಗಿ ತನಿಖೆ ನಡೆಸುತ್ತಿವೆ.ಆತನನ್ನು ಯಾರಾದರೂ ಪ್ರಚೋದಿಸಿ ಕಳುಹಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ.
ಆತನನ್ನು ಕಳುಹಿಸಿದವರು ಯಾರೇ ಆಗಿದ್ದರೂ, ಅವರು ಅತ್ಯಂತ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ನೆತನ್ಯಾಹು ತಮ್ಮ ಹೇಳಿಕೆಯಲ್ಲಿ ಯಾವುದೇ ನಿರ್ದಿಷ್ಟ ದೇಶದ ಹೆಸರು ಉಲ್ಲೇಖಿಸದಿದ್ದರೂ, ಇಸ್ರೇಲ್ ವಿರುದ್ಧದ ದಾಳಿಗಳ ಹಿಂದೆ ಇರಾನ್ ಹಸ್ತಕ್ಷೇಪವನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ.
