Friday, July 19, 2024
Homeರಾಜಕೀಯಕೈ ಕೊಡುವುದರಲ್ಲಿ ಡಿಕೆಶಿ ನಿಸ್ಸೀಮ : ಜೆಡಿಎಸ್

ಕೈ ಕೊಡುವುದರಲ್ಲಿ ಡಿಕೆಶಿ ನಿಸ್ಸೀಮ : ಜೆಡಿಎಸ್

ಬೆಂಗಳೂರು,ಅ.11- ಕೈ ಅಭಯದ ಸಂಕೇತವೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಂಬಿದ್ದರು. ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರದ್ದು ಕೈ ಎತ್ತುವು ದಷ್ಟೇ ಅಲ್ಲ, ಕೈ ಕೊಡುವುದರಲ್ಲೂ ಎತ್ತಿದ ಕೈ ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆರೋಪಿಸಿದೆ.

ವಿಧಾನಸಭೆಯಲ್ಲೂ ಕೈ ಎತ್ತಿದರು, ಮಂಡ್ಯದಲ್ಲೂ ಕೈ ಎತ್ತಿದರು. ಬೆಂಗಳೂರು ಗ್ರಾಮಾಂತರದಲ್ಲಿ ಕುಮಾರಸ್ವಾಮಿಯವರು ಅವರ ಕೈ ಹಿಡಿದರು. ಆದರೆ ಮಂಡ್ಯದಲ್ಲಿ ಅದೇ ಕೈ ಅವರನ್ನು ನಡುರಸ್ತೆಯಲ್ಲಿ ಬಿಟ್ಟು ಜಾರಿಕೊಂಡಿತು.

ಇದೆಂತಾ ಕೈಚಳಕ? ಅವರ ಹಸ್ತವಾಸಿ ವಿಸ್ವಾಶಘಾತುಕಕ್ಕೇ ಹೆಸರುವಾಸಿಯಲ್ಲವೇ? ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಶ್ನಿಸಿದೆ. 4 ವರ್ಷದ ಹಿಂದೆ ಸರ್ಕಾರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಂದಿದ್ದರಾ? ಸುಳ್ಳು ಹೇಳುವುದಕ್ಕೆ ಸಾಧಿಸಿವೆ ಕಾಳಿನಷ್ಟಾದರೂ ಸಂಕೋಚ ಬೇಡವೇ? ಎಂದು ವಾಗ್ದಾಳಿ ನಡೆಸಿದೆ.

135 ಸೀಟು ಗೆದ್ದಿದ್ದೇವೆ ಎನ್ನುವ ಮಾಕಿನಲ್ಲಿ ಏನು ಹೇಳಿದರೂ ಜನ ನಂಬುತ್ತಾರೆಂಬ ಅಹಂಕಾರವೇ? ಆಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಮನೆ ಅಂಗಳದಲ್ಲಿ ಅಂಗಿ ಮಡಚಿ ಮುಖ ಒಣಗಿಸಿಕೊಂಡು ನಿಂತರರು ಯಾರೆಂದು ಗೊತ್ತಿಲ್ಲವೇ? ಎಲ್ಲೋ ಇದ್ದ ಕುಮಾರಸ್ವಾಮಿ ಅವರನ್ನು ಬೆನ್ನು ಹತ್ತಿ, ಆಮೇಲೆ ಕಾಡಿ ಬೇಡಿ ದೇವೇಗೌಡರ ಪದತಲಕ್ಕೆ ಬಿದ್ದವರ ಪುರಾಣ ಬಿಚ್ಚಿಡಬೇಕೆ? ಎಂದು ಪ್ರಶ್ನಿಸಿದೆ.

ಮಾತೆತ್ತಿದರೆ ಜಾತಿಗಳನ್ನು ಎಳೆದು ತರುತ್ತೀರಿ. ಕನಕಪುರ ಸುತ್ತಮುತ್ತ ಅದೇ ಮಹಾನುಭಾವರಿಂದ ಒಕ್ಕಲೆದ್ದವರು ಎಷ್ಟೋ ಜನ. ಅವರೆಲ್ಲ ಯಾವ ಜಾತಿಯವರು? ಅಧಿಕಾರಕ್ಕೊಂದು ಜಾತಿ, ಕೊಳ್ಳೆ ಹೊಡೆಯುವುದಕ್ಕೊಂದು ಜಾತಿಯೇ ಎಂದು ಟೀಕಿಸಿದೆ.

ಜಾತ್ಯತೀತ ಎಂದ ಪೆನ್ನು ಜಾತಿ ಜಾತಿ ಎಂದು ಗೀಚುತ್ತಿದೆ! ಮಿದುಳಿಗೂ ಪೆನ್ನಿಗೂ ಲಿಂಕ್ ತಪ್ಪಿದೆಯಾ ಹೇಗೆ? ಅಥವಾ ಬೇರೆಯವರು ಬೆಪ್ಪರು ಎನ್ನುವ ಮದವೇ? ಅಧಿಕಾರಕ್ಕಾಗಿ ಶಿವಸೇನೆಯ ಜತೆ ಮಹಾ ಶೋ ನಡೆಸಿದಾಗ ಆ ಜಾತ್ಯತೀತತೆಯನ್ನು ಯಾವ ಶೋಕೇಸಿನಲ್ಲಿ ಇಟ್ಟಿದ್ದಿರಿ? ಬಿಜೆಪಿ ಜತೆ ಸುದೀರ್ಘ ಕಾಲ ಅಧಿಕಾರದ ಸುಖ ಅನುಭವಿಸಿದ ನಿತೀಶ್ ಕುಮಾರ್ ಪಕ್ಕದಲ್ಲಿ ಆಸೀನರಾದಾಗ ಜಾತ್ಯತೀತವನ್ನು ಎಲ್ಲಿ ಜೀತಕ್ಕೆ ಇಟ್ಟಿದ್ದಿರಿ? ಐಎನ್ ಡಿಐಎಕೂಟದಲ್ಲಿರುವ ಬಿಜೆಪಿಯ ಎಲ್ಲಾ ನೇರ ಫಲಾನುಭವಿಗಳ ಪದತಲದಲ್ಲಿ ಹಣೆ ಇಟ್ಟಾಗ ಹಸ್ತದ ಜಾತ್ಯತೀತತೆಯನ್ನು ಮಡಚಿ ಯಾರ ಜೇಬಿನಲ್ಲಿ ಇಟ್ಟಿದ್ದಿರಿ? ಎಂದು ತೀವ್ರ ವಾಗ್ದಾಳಿ ನಡೆಸಿದೆ.

ಪಟಾಕಿ ದುರಂತ : ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ

ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಕುಮಾರಸ್ವಾಮಿ ಅವರ ಷಡ್ಯಂತ್ರ ಆರೋಪದ ವಿಚಾರಕ್ಕೆ ತಿರುಗಿಬಿದ್ದಿರುವ ಜೆಡಿಎಸ್ ಕಾಂಗ್ರೆಸ್ಸಿಗೆ ಸದಾ ಕಾಲಮಾನವೂ ಕಾಮಾಲೆ ರೋಗ ಬಡಿದಿರುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ತನ್ನ ತಟ್ಟೆಯಲ್ಲಿ ಸತ್ತ ಹೆಗ್ಗಣವಿದ್ದರೂ, ಪಕ್ಕದ ಎಲೆಯ ಬಗ್ಗೆ ಎಲ್ಲಿಲ್ಲದ ಕಾಳಜಿ, ಚಿಂತೆ, ತೋರಿಕೆ. ಇದು ಆ ಪಕ್ಷದ ಪಾರಂಪರಿಕ ವಾಡಿಕೆ. 75 ವರ್ಷಗಳಿಂದ ಅದನ್ನೇ ಮಾಡಿದೆ ಎಂದು ಟೀಕಿಸಿದೆ.

ಪ್ರಾದೇಶಿಕ ಪಕ್ಷಗಳ ಪಟ್ಟುಗಳಿಗೆ ಸೂತ್ರವಿಲ್ಲದ ಪತಂಗದಂತೆ ಪತರಗುಟ್ಟುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೆಸರು ದುಃಸ್ವಪ್ನದಂತೆ ಕಾಡುತ್ತಿದೆ. ರಾಜಕೀಯ ಸ್ವಾರ್ಥಕ್ಕಾಗಿ ಭಯೋತ್ಪಾದಕರನ್ನೂ ಸಮರ್ಥಿಸುತ್ತಾ; ಈಗ ಭಯ, ಒತ್ತಡ, ಷರತ್ತು ಎಂದು ಪಠಿಸುತ್ತಿದೆ ಎಂದು ಆರೋಪಿಸಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಪಮಾನಕರವಾಗಿ ದೆಹಲಿಗೆ ಅಟ್ಟಿದವರು ಯಾರು? ಸಿದ್ದವನದಲ್ಲಿ ಸಿದ್ದಸೂತ್ರ ಹೆಣೆದು ಮೈತ್ರಿ ಸರ್ಕಾರವನ್ನು ತೆಗೆದವರು ಯಾರು? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಕಾಡಿ-ಬೇಡಿ ತಂದ ಸರಕಾರಕ್ಕೆ ಅಂತ್ಯ ಕಾಣಿಸಿದ ಆ ಹ್ಯೂಬ್ಲೆಟ್ ವೀರನ ಬಗ್ಗೆ ಗೊತ್ತಿಲ್ಲವೇ? ಲೋಕಸಭೆ ಚುನಾವಣೆ ಹೊತ್ತಿಗೆ ಮೈತ್ರಿಗೆ ಪಿಂಡ ಪ್ರದಾನ ಮಾಡಿ ಸ್ವಪಕ್ಷವನ್ನೇ ಬೀದಿಯಲ್ಲಿ ನಿಲ್ಲಿಸಿದ ಆ ಲೋಕೋತ್ತರ ಜಾತ್ಯತೀತವಾದಿಯ ಅಸಲಿಮುಖ ಗೋಚರವಾಗಿಲ್ಲವೇ ಎಂದು ಪ್ರಶ್ನಿಸಿದೆ.

ಪಾಕ್‌ನಲ್ಲಿ ಭಾರತದ ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನನ್ನ ಹತ್ಯೆಮಾಡಿದ ‘ಅಪರಿಚಿತರು’

ನಂಬಿಕೆ, ಪ್ರಾಮಾಣಿಕತೆ, ನಿಷ್ಠೆ, ನಿಯತ್ತನ್ನು ಗುಜರಿಗೆ ಹಾಕಿ ಸಂಡೇ ಬಜಾರ್ ನಂತೆ ವಿಧಾನಸೌಧವನ್ನೇ ಗುರುವಾರದ ಬಜಾರ್ ಮಾಡಿಕೊಂಡವರು ನೀವು. ನಿಜಕ್ಕೂ ನಿಮಗೆ ಲಜ್ಜೆ ಇದೆಯಾ? ವಾರಕ್ಕೊಂದು ದಿನ, ಅದೂ ಗುರುವಾರದ ದಿನವಷ್ಟೇ ಸಂಪುಟ ನೆಪದಲ್ಲಿ 3ನೇ ಮಹಡಿಯಲ್ಲಿ ಕೆಲ ಹೊತ್ತಷ್ಟೇ ಠಳಾಯಿಸಿ, 24/7 ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡುತ್ತಿರುವವರು ಲಜ್ಜೆಯಲ್ಲೂ ಕನಿಷ್ಠ-ಗರಿಷ್ಠ ಎಂದು ಅಳತೆ ಮಾಡುತ್ತಿರುವುದು ಅದ್ಭುತ ಎಂದು ತೀವ್ರ ಟೀಕಾ ಪ್ರಹಾರ ನಡೆಸಿದೆ.

RELATED ARTICLES

Latest News