Saturday, July 27, 2024
Homeರಾಜ್ಯನಾಳೆ ಜೆಡಿಎಸ್‌‍ ಕೋರ್‌ಕಮಿಟಿ ಸಭೆ

ನಾಳೆ ಜೆಡಿಎಸ್‌‍ ಕೋರ್‌ಕಮಿಟಿ ಸಭೆ

ಬೆಂಗಳೂರು, ಜೂ.2- ಪ್ರಚಲಿತ ರಾಜಕೀಯ ವಿದ್ಯಮಾನಗಳು, ವಿಧಾನಪರಿಷತ್‌ ಚುನಾವಣೆಗಳ ಹಿನ್ನೆಲೆಯಲ್ಲಿ ನಾಳೆ ಮಹತ್ವದ ಜೆಡಿಎಸ್‌‍ ಕೋರ್‌ಕಮಿಟಿ ಸಭೆ ನಡೆಯಲಿದೆ. ಕೋರ್‌ಕಮಿಟಿ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ನಾಳೆ ಸಂಜೆ 4 ಗಂಟೆಗೆ ಜೆಡಿಎಸ್‌‍ ಕಚೇರಿ ಜೆ.ಪಿ.ಭವನದಲ್ಲಿ ಸಭೆ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಕೋರ್‌ಕಮಿಟಿ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿಧಾನಪರಿಷತ್‌ನ ಶಿಕ್ಷಕರ, ಪದವೀಧರ ಹಾಗೂ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ. ಅಲ್ಲದೆ, ಮಂಗಳವಾರ ಹೊರಬೀಳಲಿರುವ ಲೋಕಸಭಾ ಚುನಾವಣಾ ಫಲಿತಾಂಶ ಕುರಿತಂತೆ ಚರ್ಚೆ ನಡೆಸಲಾಗುತ್ತದೆ.

ಲೋಕಸಭಾ ಚುನಾವಣೆಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸುವುದಲ್ಲದೆ, ಲೋಕಸಭಾ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಾಗುವ ಬದಲಾವಣೆ ಬಗ್ಗೆ ಕೂಡ ಗಂಭೀರ ಚರ್ಚೆ ನಡೆಸಲಾಗುತ್ತದೆ ಎಂದು ಜೆಡಿಎಸ್‌‍ ಮೂಲಗಳು ತಿಳಿಸಿವೆ.

ಪಕ್ಷ ಸಂಘಟನೆ, ಹೊಸ ಸದಸ್ಯರ ನೋಂದಣಿ, ಪಕ್ಷ ಕೈಗೊಳ್ಳಲಿರುವ ಹೋರಾಟದ ರೂಪುರೇಷೆಗಳ ಬಗ್ಗೆಯೂ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಅವಲೋಕನ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಶಾಸಕಾಂಗ ಸಭೆ :
ಇದಕ್ಕೂ ಮುನ್ನ ನಾಳೆ ಬೆಳಿಗ್ಗೆ 10.30ಕ್ಕೆ ವಿಧಾನಸೌಧದ ಪಕ್ಷದ ಕಚೇರಿಯಲ್ಲಿ ಜೆಡಿಎಸ್‌‍ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ನಾಳೆ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನ. ಹೀಗಾಗಿ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪಕ್ಷದ ಶಾಸಕರು, ನಾಯಕರು ಹಾಜರಿರಲಿದ್ದಾರೆ.

ಪಕ್ಷದ ಅಭ್ಯರ್ಥಿಗೆ ಸೂಚಕರಾಗಿ ಶಾಸಕರು ಸಹಿ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

RELATED ARTICLES

Latest News