Thursday, February 29, 2024
Homeರಾಜ್ಯಹೋರಾಟಗಾರರ ಬಿಡುಗಡೆಗಾಗಿ ಕೆರಳಿದ ಕನ್ನಡಿಗರು

ಹೋರಾಟಗಾರರ ಬಿಡುಗಡೆಗಾಗಿ ಕೆರಳಿದ ಕನ್ನಡಿಗರು

ಬೆಂಗಳೂರು,ಡಿ.29- ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಸೇರಿದಂತೆ 50 ಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರನ್ನು ಬಂಧಿಸಿದ ಬೆನ್ನಲ್ಲೇ ಹೋರಾಟದ ಕಿಚ್ಚು ತೀವ್ರ ಸ್ವರೂಪ ಪಡೆದುಕೊಂಡು ಸಂಘಟನೆಗಳಲ್ಲಿ ಹಿಂದೆಂದೂ ಕಾಣದಂತಹ ಒಗ್ಗಟ್ಟು ಕಂಡುಬಂದಿದೆ. ವಾಣಿಜ್ಯ ಮಳಿಗೆಗಳು, ಉದ್ಯಮಗಳು ಹಾಗೂ ಇತರ ಸಂಸ್ಥೆಗಳ ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂಬ ಒತ್ತಾಯಕ್ಕಾಗಿ ಕರವೇ ಕಾರ್ಯಕರ್ತರು ಕಳೆದ ಒಂದು ವಾರದಿಂದಲೂ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದವು.

ನಿನ್ನೆ ಏಕಕಾಲಕ್ಕೆ ಬೆಂಗಳೂರಿನಾದ್ಯಂತ ನಡೆದ ಪ್ರತಿಭಟನೆಯಲ್ಲಿ ಹಲವು ಕಡೆ ಖಾಸಗಿ ಸಂಸ್ಥೆಗಳ ನಾಮಫಲಕಗಳನ್ನು ಫ್ಲೆಕ್ಸ್, ಹೋರ್ಡಿಂಗ್ ಮತ್ತು ಫಲಕಗಳನ್ನು ಕರವೇ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಪೊಲೀಸರೊಂದಿಗೂ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಟಿ.ಎ.ನಾರಾಯಣಗೌಡ ಅವರ ನೇತೃತ್ವದ ತಂಡವನ್ನು ಪೊಲೀಸರು ಬಂಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕೆಲವು ಕಾರ್ಯಕರ್ತರಿಗೆ ಜಾಮೀನು ಸಿಕ್ಕಿದೆಯಾದರೂ, ಪ್ರಮುಖರಿಗೆ ನ್ಯಾಯಾಂಗ ಬಂಧನ ಮುಂದುವರೆದಿದೆ. ಇದು ಕನ್ನಡ ಸಂಘಟನೆಗಳ ಕಿಚ್ಚಿಗೆ ಕಾರಣವಾಗಿದೆ. ಕರವೇ ಬೆಂಬಲಕ್ಕೆ ಇತರ ಕನ್ನಡ ಪರ ರೈತ ಸಂಘಟನೆಗಳು ನಿಂತಿವೆ. ನಾರಾಯಣಗೌಡ ಅವರ ಬಂಧನವನ್ನು ಖಂಡಿಸಿ ಬೆಂಗಳೂರಿನಾದ್ಯಂತ ಸರಣಿ ಪ್ರತಿಭಟನೆಗಳು ಆಯೋಜನೆಗೊಂಡಿವೆ.

ಕನ್ನಡಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್, ಪ್ರವೀಣ್ ಶೆಟ್ಟಿ, ಎನ್.ಕುಮಾರ್ ಸೇರಿದಂತೆ ಹಲವು ನಾಯಕರು ಬೀದಿಗಿಳಿದಿದ್ದಾರೆ. ಜಲ ಸಂರಕ್ಷಣಾ ಸಮಿತಿಯ ರೈತ ಮುಖಂಡರು, ಅಮ್ ಆದ್ಮಿ ಪಕ್ಷವು ನಾರಾಯಣಗೌಡರಿಗೆ ಬೆಂಬಲ ವ್ಯಕ್ತಪಡಿಸಿ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿದೆ.

ನಿನ್ನೆ ವಾಟಾಳ್ ನಾಗರಾಜ್ ಅವರು ತುರ್ತು ಪತ್ರಿಕಾಗೋಷ್ಠಿ ನಡೆಸಿ ಬಂತ ಹೋರಾಟಗಾರರ ಬಿಡುಗಡೆಗೆ 24 ಗಂಟೆಗಳ ಗಡುವು ನೀಡಿದ್ದರು. ಶುಕ್ರವಾರ ಸಂಜೆಯೊಳಗಾಗಿ ಹೋರಾಟಗಾರರನ್ನು ಬಿಡುಗಡೆಗೊಳಿಸದೇ ಇದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು. ಈ ಮೊದಲು ಕಾವೇರಿ ವಿಷಯವಾಗಿ ಕರ್ನಾಟಕ ಬಂದ್ ಸಂದರ್ಭದಲ್ಲಿ ನಾರಾಯಣಗೌಡ ಮತ್ತು ವಾಟಾಳ್ ನಾಗರಾಜ್ ಅವರ ನಡುವೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ವಾಟಾಳ್ ನಾಗರಾಜ್ ಅವರು ಕರ್ನಾಟಕ ಬಂದ್‍ಗೆ ಕರೆ ನೀಡಿದರೆ, ನಾರಾಯಣಗೌಡರು ನೈತಿಕ ಬೆಂಬಲ ನೀಡುವುದಾಗಿ ತಿಳಿಸಿದರು.

ಹೂಡಿಕೆಯ ನೆಪದಲ್ಲಿ ನಾಡು-ನುಡಿ ಕಡೆಗಣನೆ : ಮುಖ್ಯಮಂತ್ರಿ ಚಂದ್ರು ಆಕ್ರೋಶ

ಆದರೆ ನಿನ್ನೆ ನಾರಾಯಣಗೌಡರ ಬಂಧನದ ಬಳಿಕ ಎಲ್ಲಾ ಸಂಘಟನೆಗಳಲ್ಲೂ ಒಗ್ಗಟ್ಟು ಕಂಡುಬಂದಿದೆ. ಕನ್ನಡ ಹೋರಾಟಗಾರರ ವಿರುದ್ಧ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ನಾರಾಯಣಗೌಡ ಹಾಗೂ ಅವರ ತಂಡ ಭಾಷೆ ಹಾಗೂ ಅದರ ಅಸ್ಮಿತೆಗಾಗಿ ಹೋರಾಟ ನಡೆಸಿದೆ. ಇಂತಹ ಸಂದರ್ಭದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು ಸಹಿಸಲಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ತುರ್ತು ಸಭೆ ನಡೆಸಿ ಕನ್ನಡ ಭಾಷೆಯ ನಾಮಫಲಕಗಳನ್ನು ಕಡ್ಡಾಯಗೊಳಿಸುವುದಾಗಿ ಪ್ರಕಟಿಸಿದ್ದಾರೆ. ಒಂದೆಡೆ ಸರ್ಕಾರ ಕನ್ನಡಾನುಷ್ಠಾನಕ್ಕೆ ಬದ್ಧವಾಗಿರುವುದಾಗಿ ಹೇಳುತ್ತಲೇ, ಮತ್ತೊಂದೆಡೆ ಕನ್ನಡಪರ ಹೋರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗಿವೆ.

RELATED ARTICLES

Latest News