Friday, May 3, 2024
Homeರಾಜಕೀಯಪಟ್ಟು ಸಡಿಲಿಸದ ಕೆ.ಎಸ್.ಈಶ್ವರಪ್ಪ

ಪಟ್ಟು ಸಡಿಲಿಸದ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಮಾ.17- ಬಂಡಾಯ ಎದ್ದಿರುವ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಮನವೊಲಿಕೆ ಪ್ರಯತ್ನಗಳು ನಡೆಯುತ್ತಿದ್ದು, ಇದಕ್ಕೆ ಯಾವುದೇ ಫಲ ಸಿಕ್ಕಿಲ್ಲ. ಇಂದು ಬೆಳಗ್ಗೆ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ರವಿಕುಮಾರ್ ಮತ್ತಿತರ ನಾಯಕರು ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪ ಅವರ ನಿವಾಸದಲ್ಲಿ ಸುಮಾರು ಒಂದೂವರೆ ಗಂಟೆಕಾಲ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ.

ಸ್ಪರ್ಧೆ ಖಚಿತ ಎಂದು ಪಟ್ಟು ಹಿಡಿದಿರುವ ಈಶ್ವರಪ್ಪ, ಯಾವುದೇ ಕಾರಣಕ್ಕೂ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಈ ನಡುವೆ ಬಿಎಸ್ವೈ ವಿರುದ್ಧವೂ ಕೆಂಡಾಮಂಡಲರಾಗಿದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ಬಂದಿದ್ದ ನಾಯಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸಾಗಿದ್ದಾರೆ. ಇನ್ನೊಂದೆಡೆ ಈಶ್ವರಪ್ಪ ಪುತ್ರ ಕಾಂತೇಶ್ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಶಿವಮೊಗ್ಗದ ಎಂಟು ಕ್ಷೇತ್ರಗಳಲ್ಲೂ ನಮ್ಮ ಅಭಿಮಾನಿಗಳಿದ್ದು, ನಮಗೆ ಬೆಂಬಲಿಸುತ್ತಾರೆ ಎಂಬ ವಿಶ್ವಸವಿದೆ ಎಂದು ಹೇಳುತ್ತಿದ್ದಾರೆ. ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಬಂಡಾಯ ಶಮನ ಮಾಡಲು ಸಾಕಷ್ಟು ಪ್ರಯತ್ನಗಳು ಮುಂದುವರೆದಿವೆ. ಸ್ವತಃ ಸಂಸದ ಬಿ.ವೈ.ರಾಘವೇಂದ್ರ ಅವರು ಕೂಡ ಈಶ್ವರಪ್ಪ ಅವರನ್ನು ಸಮಾಧಾನಪಡಿಸಲು ಪ್ರಯತ್ನ ಮುಂದುವರೆದಿದ್ದು, ಇದಾವುದಕ್ಕೂ ಸೊಪ್ಪು ಹಾಕುತ್ತಿಲ್ಲ.

ಒಂದೊಮ್ಮೆ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ರ್ಪಧಿಸಿದರೆ ಮತ ವಿಭಜನೆಯಾಗಿ ಕಾಂಗ್ರೆಸ್ಗೆ ಲಾಭವಾಗುತ್ತದೆ ಎಂಬ ಆತಂಕ ಬಿಜೆಪಿ ಪಾಳಯದಲ್ಲಿ ಶುರುವಾಗಿದೆ. ಕೊನೆ ಪ್ರಯತ್ನ: ಈಶ್ವರಪ್ಪ ಅವರನ್ನು ಶತಾಯ-ಗತಾಯ ಮನವೊಲಿಸಿಯೇ ತೀರಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಬಿಜೆಪಿ ಹೈಕಮಾಂಡ್ ಹಲವು ಆಶ್ವಾಸನೆಗಳನ್ನು ಮುಂದಿಡಲಿದೆ. ವಿಧಾನ ಪರಿಷತ್ನ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂತರಾಜ್ಗೆ ಬಿಜೆಪಿ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಅದನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ.

ಇನ್ನೊಂದೆಡೆ ಅವರನ್ನು ಬಿಜೆಪಿ ಕೋರ್ ಕಮಿಟಿಗೆ ನೇಮಿಸಿಕೊಳ್ಳುವ ಮತ್ತೊಂದು ಆಶ್ವಾಸನೆ ನೀಡಿ ಅವರನ್ನು ಹೇಗಾದರೂ ಮಾಡಿ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವೊಲಿಸಲು ಪ್ರಯತ್ನ ನಡೆದಿದೆ. ಮೂಲಗಳ ಪ್ರಕಾರ, ಶಿವಮೊಗ್ಗ ಏರ್ ಪೋರ್ಟ್ ನಲ್ಲೇ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

RELATED ARTICLES

Latest News