Thursday, May 2, 2024
Homeರಾಜ್ಯಬಿಜೆಪಿಗೆ ತಿರುಗೇಟು ನೀಡಲು ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬಿಜೆಪಿಗೆ ತಿರುಗೇಟು ನೀಡಲು ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು,ಫೆ.3- ಕೇಂದ್ರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಸಂಸದ ಡಿ.ಕೆ.ಸುರೇಶ್‍ರವರ ಹೇಳಿಕೆಯನ್ನು ವಿವಾದ ಮಾಡಿ ರಾಷ್ಟ್ರಮಟ್ಟದಲ್ಲಿ ರಾಜಕೀಯಕ್ಕೆ ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿಗೆ ಮರ್ಮಾಘಾತ ನೀಡಲು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಜ್ಜುಗೊಂಡಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಆಕ್ರೋಶಗಳನ್ನು ಹೊರಹಾಕಲಾಗಿದೆ.

ಕಾಂಗ್ರೆಸ್‍ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧ ಕೆಂಡಾಮಂಡಲದ ಟೀಕೆಗಳನ್ನು ನಡೆಸಲಾಗಿದೆ. ಸಂಸ್ಥಾನಗಳನ್ನು ವಿಲೀನಗೊಳಿಸಿ, ರಾಜ್ಯಗಳನ್ನು ಸೇರಿಸಿ ಭಾರತ ಎಂಬ ಒಕ್ಕೂಟವನ್ನು ನಿರ್ಮಿಸಿದ್ದು ಕಾಂಗ್ರೆಸ್, ಪ್ರತ್ಯೇಕತೆಯನ್ನು ಕಾಪಾಡಿಕೊಂಡಿದ್ದ ಸಿಕ್ಕಿಂ ರಾಜ್ಯವನ್ನು ಭಾರತದೊಳಗೆ ಸೇರಿಸಿದ್ದು ಕಾಂಗ್ರೆಸ್, ದೇಶಕ್ಕೆ ರಾಷ್ಟ್ರ ಧ್ವಜ ಕೊಟ್ಟಿದ್ದು ಕಾಂಗ್ರೆಸ್, ಸಂವಿಧಾನವನ್ನು ಭಾರತಕ್ಕೆ ವಿಧಿಸಿಕೊಂಡಿದ್ದು ಕಾಂಗ್ರೆಸ್, ಭಾಷೆ, ಸಂಸ್ಕøತಿಗಳ ವೈವಿಧ್ಯತೆಯನ್ನು ಹೊಂದಿರುವ ರಾಜ್ಯಗಳ ಐಕ್ಯತೆಯನ್ನು ಕಾಪಾಡಿಕೊಂಡು ಬಂದಿದ್ದು ಕಾಂಗ್ರೆಸ್ ಎಂದು ತಿರುಗೇಟು ನೀಡಲಾಗಿದೆ.

ಭಾರತ ರೂಪುಗೊಳ್ಳುವಾಗ ಹುಟ್ಟಿಯೇ ಇರದ ಬಿಜೆಪಿಯಿಂದ ದೇಶ ಕಟ್ಟಿದ ಕಾಂಗ್ರೆಸ್ ಪಕ್ಷವು ದೇಶದ ಐಕ್ಯತೆಯ ಬಗ್ಗೆ ಪಾಠ ಕೇಳುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಲಾಗಿದೆ. ಕಳೆದ ಹತ್ತು ವರ್ಷದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದ್ದರೂ ಕರ್ನಾಟಕದ ಯಾವೊಬ್ಬ ಬಿಜೆಪಿ ಸಂಸದರೂ ಬಾಯಿ ಬಿಡದೆ ಗುಲಾಮಗಿರಿ ಮಾಡಿಕೊಂಡಿರುವಾಗ, ಕಾಂಗ್ರೆಸ್ ಪಕ್ಷದ ಏಕೈಕ ಸಂಸದ ಡಿ.ಕೆ.ಸುರೇಶ್ ದನಿ ಎತ್ತಿದ್ದಾರೆ, ಬಿಜೆಪಿಗೆ ನಿಜಕ್ಕೂ ರಾಜ್ಯದ ಬಗ್ಗೆ ಕಾಳಜಿ ಇದ್ದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎದುರು ಧೈರ್ಯದಿಂದ ನಿಂತು ನ್ಯಾಯ ಕೇಳಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.

ಕೇಂದ್ರದ ವಿರುದ್ಧ ರಾತ್ರಿಯಿಡೀ ಪ್ರತಿಭಟನೆ ನಡೆಸಿದ ದೀದಿ

ಬಿಜೆಪಿಗೆ ಠಕ್ಕರ್ :
ಕೇಂದ್ರದಿಂದಾಗುತ್ತಿರುವ ತಾರತಮ್ಯಗಳಿಗೆ ರಾಜ್ಯದ ಮಟ್ಟಿಗೆ ಚರ್ಚೆಗಳನ್ನು ಮಾಡುವ ಮೂಲಕ ಕಾಂಗ್ರೆಸ್ ಮೃದು ಧೋರಣೆ ಅನುಸರಿಸುತ್ತಿತ್ತು. ಸಂಸದ ಡಿ.ಕೆ.ಸುರೇಶ್ ಬಜೆಟ್‍ನಲ್ಲಿ ಕೇಂದ್ರದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ಹೊರಹಾಕುವಾಗ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡು ದೇಶಾದ್ಯಂತ ಕಾಂಗ್ರೆಸ್‍ಗೆ ಮುಜುಗರ ಉಂಟುಮಾಡಲು ಮುಂದಾಗಿದೆ. ಇದಕ್ಕೆ ಅಷ್ಟೇ ನಿರ್ದಾಕ್ಷಿಣ್ಯವಾಗಿ ತಿರುಗೇಟು ನೀಡಲು ಕಾಂಗ್ರೆಸ್ ಕೂಡ ರಣತಂತ್ರ ರೂಪಿಸಿದೆ.

ದೆಹಲಿಯಲ್ಲಿ ಫೆ.7 ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಸಚಿವರು, ಶಾಸಕರು, ಸಂಸದರು, ವಿಧಾನಪರಿಷತ್ ಮತ್ತು ರಾಜ್ಯಸಭೆಯ ಸದಸ್ಯರು ಒಟ್ಟಾಗಿ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಲು ಪ್ರತಿತಂತ್ರ ರೂಪಿಸಲಾಗಿದೆ. ಡಿ.ಕೆ.ಸುರೇಶ್‍ರ ಹೇಳಿಕೆಯನ್ನು ಬಿಜೆಪಿ ನಾಯಕರು ನಿನ್ನೆ ಸಂಸತ್‍ನಲ್ಲಿ ಪ್ರಸ್ತಾಪಿಸಿ, ಕಾಂಗ್ರೆಸ್ ಪಕ್ಷ ದೇಶ ವಿಭಜಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಈ ಮೂಲಕ ವಿವಿಧ ರಾಜ್ಯಗಳಿಗೆ ಬಜೆಟ್‍ನಲ್ಲಾಗಿರುವ ಅನ್ಯಾಯವನ್ನು ಮರೆಮಾಚುವ ಪ್ರಯತ್ನಗಳಾಗಿತ್ತು. ಹಲವಾರು ಬಾರಿ ಕೇಂದ್ರದಿಂದ ರಾಜ್ಯಕ್ಕೆ ಆರ್ಥಿಕ ಹಾಗೂ ಇತರ ವಿಚಾರಗಳಲ್ಲಿ ಸಾಕಷ್ಟು ತಾರತಮ್ಯಗಳಾಗಿತ್ತು. ಕಳೆದ ಬಜೆಟ್‍ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ಅನುದಾನವನ್ನೇ ನೀಡದೇ ಮರೆಮಾಚಲಾಗಿದೆ. ಮೇಕೆದಾಟು, ಮಹಾದಾಯಿ ನೀರಾವರಿ ಯೋಜನೆಗಳಿಗೆ ಅಗತ್ಯ ಅನುಮತಿ ನೀಡದೇ ಸತಾಯಿಸಲಾಗುತ್ತಿದೆ.

ತಾಜ್‍ಮಹಲ್‍ನಲ್ಲಿ ಉರುಸ್ ಆಚರಣೆ ಪ್ರಶ್ನಿಸಿದ ಹಿಂದೂ ಮಹಾಸಭಾ

ಬರ ಪರಿಹಾರಕ್ಕೆ ಆರ್ಥಿಕ ನೆರವು ನೀಡುವಂತೆ ಮನವಿ ಸಲ್ಲಿಸಿ 4 ತಿಂಗಳು ಕಳೆದರೂ ರಾಷ್ಟ್ರಮಟ್ಟದಲ್ಲಿ ಉದ್ದೇಶಪೂರ್ವಕವಾಗಿ ಸಭೆಯನ್ನೇ ನಡೆಸದೆ ಜಾರಿಕೊಳ್ಳುವ ಪ್ರಯತ್ನವೂ ನಡೆದಿದೆ. ಈ ಎಲ್ಲಾ ಗಂಭೀರ ವಿಚಾರಗಳನ್ನೂ ಮರೆಮಾಚಿ ಡಿ.ಕೆ.ಸುರೇಶ್‍ರ ಹೇಳಿಕೆಯನ್ನೇ ವಿವಾದ ಮಾಡಲು ಯತ್ನಿಸಿದ ಬಿಜೆಪಿಗೆ ಕಾಂಗ್ರೆಸಿಗರು ದೆಹಲಿ ಪ್ರತಿಪ್ರಭನೆಯ ಮಾಸ್ಟರ್‍ಸ್ಟ್ರೋಕ್ ನೀಡಿದ್ದಾರೆ. ಇದು ಮುಂದಿನ ವಾರಪೂರ್ತಿ ರಾಜಕೀಯ ಆರೋಪ-ಪ್ರತ್ಯಾರೋಪಗಳು, ಹಗ್ಗ-ಜಗ್ಗಾಟಗಳಿಗೆ ಕಾರಣವಾಗಲಿದ್ದು, ಲೋಕಸಭೆ ಚುನಾವಣೆಗೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬ ಕುತೂಹಲ ಹೆಚ್ಚಿಸಿದೆ.

RELATED ARTICLES

Latest News