ಬೆಂಗಳೂರು,ಆ.21- ರಾಜ್ಯದಲ್ಲಿ ಇಂದಿನಿಂದ ಒಂದು ವಾರ ಕಾಲ ಮತ್ತೆ ಮಳೆ ಆರಂಭವಾಗಲಿದೆ. ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಶುರುವಾಗಲಿದೆ. ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
ಹೆಚ್ಚು ಕಡಿಮೆ ಆ.25ರವರೆಗೂ ರಾಜ್ಯದ ಹಲವು ಭಾಗಗಳಲ್ಲಿ ಮತ್ತೆ ಮಳೆ ಆರಂಭವಾಗಲಿದೆ. ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ. ವಾತಾವರಣದಲ್ಲಿ ಬದಲಾವಣೆ ಉಂಟಾಗಿದ್ದು, ಆ.26ರಿಂದ 29ರವರೆಗೆ ಸಾಧಾರಣ ಪ್ರಮಾಣದ ಮಳೆಯಾಗಲಿದೆ.
ಈ ಅವಧಿಯಲ್ಲಿ ಭಾರೀ ಮಳೆಯಾಗುವ ಲಕ್ಷಣಗಳು ಇದ್ದವು. ಉತ್ತರ ಭಾರತದಲ್ಲಿ ಕುಂಭದ್ರೋಣ ಮಳೆಯಾಗುತ್ತಿರುವುದರಿಂದ ವಾತಾರಣದಲ್ಲಿ ಬದಲಾವಣೆಯಾಗಿ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳು ವಿರಳ ಎಂದರು.
ರಾಜ್ಯದ ಒಳನಾಡಿನ ಬಹುತೇಕ ಭಾಗಗಳಲ್ಲಿ 10ರಿಂದ 20 ಮಿ.ಮೀನಷ್ಟು ಮಳೆಯಾಗುವ ಮುನ್ಸೂಚನೆಗಳಿವೆ. ಉತ್ತರ ಭಾರತದಲ್ಲಿ ವಾಯುಭಾರ ಕುಸಿತದಿಂದ ಮಳೆ ಅಬ್ಬರಿಸುತ್ತಿದ್ದು, ಅದರ ನೇರ ಪರಿಣಾಮ ರಾಜ್ಯದ ಮೇಲಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.