Thursday, June 20, 2024
Homeರಾಜಕೀಯಕೋಲಾರ-ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌‍ ಸೋಲಿಗೆ ಒಳಜಗಳವೇ ಕಾರಣ :ಕೆ.ಎಚ್‌.ಮುನಿಯಪ್ಪ

ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌‍ ಸೋಲಿಗೆ ಒಳಜಗಳವೇ ಕಾರಣ :ಕೆ.ಎಚ್‌.ಮುನಿಯಪ್ಪ

ಬೆಂಗಳೂರು,ಜೂ.5- ಕೋಲಾರ-ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌‍ ಸೋಲಿಗೆ ಒಳಜಗಳವೇ ಕಾರಣ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ವಿಶ್ಲೇಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡೂ ಕ್ಷೇತ್ರಗಳಲ್ಲಿ ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಹಲವಾರು ಬಾರಿ ಕಾಂಗ್ರೆಸ್‌‍ ಗೆದ್ದಿದೆ. ಈ ಬಾರಿ ಬಿಜೆಪಿ-ಜೆಡಿಎಸ್‌‍ ಮೈತ್ರಿಯಿಂದಾಗಿ ನಮಗೆ ಸೋಲಾಯಿತು ಎಂದರು.

ಕಾಂಗ್ರೆಸ್‌‍ನಲ್ಲಿ ಜನರಿಗೆ ಒಗ್ಗಟ್ಟಿನ ಸಂದೇಶ ರವಾನಿಸಲು ವೈಫಲ್ಯಗಳಾದವು. ತಾವು ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಜೊತೆ ಚರ್ಚಿಸಿ ಸಾಕಷ್ಟು ಪ್ರಯತ್ನ ಮಾಡಿದ್ದೆ. ಆದರೆ ಕೆಲವರು ಕಾಂಗ್ರೆಸ್‌‍ ಪಕ್ಷ ಮುಗಿದು ಹೋದರೂ ಸರಿ, ರಾಜಿಯಾಗುವುದು ಬೇಡ ಎಂದು ನಿರ್ಧಾರ ಮಾಡಿಕೊಂಡಂತಿದೆ. ಹಾಗಾಗಿ ಇಂತಹ ಫಲಿತಾಂಶ ಬಂದಿದೆ ಎಂದು ಹೇಳಿದರು.

30 ವರ್ಷ ಕಾಂಗ್ರೆಸ್‌‍ ಪಕ್ಷವನ್ನು ಕಟ್ಟಿ ಬೆಳೆಸಿದವರಿಗೆ ಫಲಿತಾಂಶ ನೋವು ತಂದಿದೆ. ಮುಂದೆ ಇದನ್ನು ಸರಿಪಡಿಸಬೇಕು. ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಗೆಲ್ಲಲೇಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಗುಂಪುಗಾರಿಕೆಯನ್ನು ಸರಿಪಡಿಸಲು ರಾಜ್ಯ ನಾಯಕರು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.

ನಮ್ಮ ಕುಟುಂಬಕ್ಕೆ ಟಿಕೆಟ್‌ ನೀಡಬಾರದು ಎಂದು ಪಟ್ಟು ಹಿಡಿದವರು, ಚುನಾವಣೆಯ ನಾಯಕತ್ವ ವಹಿಸಿದವರು ಕೆ.ಎಚ್‌.ಮುನಿಯಪ್ಪ ಕೋಲಾರ ಚುನಾವಣೆಗೆ ಬರಬಾರದು ಎಂದು ಹಠ ಹಿಡಿದವರು ಚುನಾವಣೆ ಸೋಲಿನ ಹೊಣೆಗಾರಿಕೆಯನ್ನು ಹೊರಬೇಕಿದೆ ಎಂದು ಹೇಳಿದರು.
ಹೈಕಮಾಂಡ್‌ ಸೂಚನೆ ನೀಡಿದ ಕಡೆಗಳಲೆಲ್ಲಾ ಪ್ರಚಾರ ಮಾಡಿದ್ದೇನೆ, ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ಆದರೆ ಜನರಿಗೆ ಕಾಂಗ್ರೆಸ್‌‍ನ ಎರಡೂ ಬಣಗಳು ಒಟ್ಟಾಗಿವೆ ಎಂದು ಸಂದೇಶ ನೀಡುವಲ್ಲಿ ವಿಫಲವಾದೆವು ಎಂದು ಹೇಳಿದರು.

ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್‌‍ಗೆ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದುದು ಜೆಡಿಎಸ್‌‍. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌‍ ಒಂದಾಗಿದ್ದರಿಂದಾಗಿ ಕಾಂಗ್ರೆಸ್‌‍ಗೆ ಹಿನ್ನಡೆಯಾಗಿದೆ. ರಾಜ್ಯಸರ್ಕಾರದ ಗ್ಯಾರಂಟಿಗಳು ಕೈ ಹಿಡಿದಿದ್ದರಿಂದಾಗಿ ಮತ ಗಳಿಕೆಯ ಪ್ರಮಾಣ ಹೆಚ್ಚಾಗಿದೆ ಎಂದು ವ್ಯಾಖ್ಯಾನಿಸಿದರು.

ಲೋಕಸಭಾ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು ಎಂದು ಎಲ್ಲಿಯೂ ಚರ್ಚೆಯಾಗಿಲ್ಲ. ಚುನಾವಣೆಯಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಫಲಿತಾಂಶದಲ್ಲಿ ಗೆಲುವಿನ ಸಂಖ್ಯೆಯಲ್ಲಿ ಹಿನ್ನಡೆಯಾಗಿದ್ದರೂ ಮತಗಳಿಕೆ ಹೆಚ್ಚಾಗಿದೆ. ಹೀಗಾಗಿ ಸಚಿವರ ತಲೆದಂಡದ ಪ್ರಶ್ನೆ ಇಲ್ಲ ಎಂದು ಹೇಳಿದರು.

ಜೆಡಿಎಸ್‌‍-ಬಿಜೆಪಿಯ ಮೈತ್ರಿ ಹಿನ್ನೆಲೆಯಲ್ಲಿ ನಾವು ಹೊಸ ಚಿಂತನೆ ಮಾಡಬೇಕು, ಕಾಂಗ್ರೆಸ್‌‍ನಲ್ಲಿದ್ದು ಕಾಂಗ್ರೆಸ್‌‍ ಪಕ್ಷವನ್ನೇ ಸೋಲಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವೇ ಅವರಿಗೆ ಬುದ್ಧಿ ಹೇಳಬೇಕಿದೆ ಎಂದು ಮುನಿಯಪ್ಪ ಕರೆ ನೀಡಿದರು.

RELATED ARTICLES

Latest News