Thursday, June 20, 2024
Homeರಾಜ್ಯಚುನಾವಣಾ ಫಲಿತಾಂಶದಿಂದ ಸಮಾಧಾನವಾಗಿದೆ, ಸಂತೋಷ ಇಲ್ಲ : ಸಚಿವ ಪರಮೇಶ್ವರ್‌

ಚುನಾವಣಾ ಫಲಿತಾಂಶದಿಂದ ಸಮಾಧಾನವಾಗಿದೆ, ಸಂತೋಷ ಇಲ್ಲ : ಸಚಿವ ಪರಮೇಶ್ವರ್‌

ಬೆಂಗಳೂರು,ಜೂ.5- ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‍ಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. 20 ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರ ಈಡೇರಿಲ್ಲ. ಆದರೆ ಒಂದು ಸ್ಥಾನದಲ್ಲಿದ್ದ ಕಾಂಗ್ರೆಸ್‌‍ 09 ಕ್ಕೆ ಏರಿಕೆಯಾಗಿದೆ. ಮತ ಗಳಿಕೆಯಲ್ಲೂ ಗಣನೀಯ ಏರಿಕೆಯಾಗಿದೆ. ಫಲಿತಾಂಶ ಸಮಾಧಾನ ತಂದಿದೆ. ಆದರೆ ಸಂತೋಷ ತಂದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ವಿಶ್ಲೇಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಪಕ್ಷ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕಿತ್ತು. ಆದರೆ ಜನ ನಮಗೂ ಎಚ್ಚರಿಕೆ ನೀಡಿದ್ದಾರೆ. ಒಂದು ವರ್ಷದ ಆಡಳಿತ ಜನಸಾಮಾನ್ಯರಿಗೆ ಸಮಾಧಾನ ತಂದಿಲ್ಲ ಎಂಬುದನ್ನು ತೋರಿಸುತ್ತದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಒಳ್ಳೆಯ ಆಡಳಿತ ನೀಡುವತ್ತ ಮುಖ್ಯಮಂತ್ರಿ, ಅಧ್ಯಕ್ಷರು ಸೇರಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಜನರ ತೀರ್ಪನ್ನು ಸ್ವಾಗತಿಸುತ್ತೇವೆ.

ಸರ್ಕಾರ ಗ್ಯಾರಂಟಿ ನೀಡಿದ ಹೊರತಾಗಿಯೂ ಜನರ ತೀರ್ಪು ಬೇರೆಯದೇ ಆಗಿದೆ ಎಂದು ಹೇಳಿದರು. 2019 ರ ಚುನಾವಣೆಯಲ್ಲಿ ಕಾಂಗ್ರೆಸ್‌‍-ಜೆಡಿಎಸ್‌‍ ಮೈತ್ರಿ ಫಲ ನೀಡಲಿಲ್ಲ. ಈ ಬಾರಿಯ ಜೆಡಿಎಸ್‌‍-ಬಿಜೆಪಿ ಮೈತ್ರಿ ಪರಿಣಾಮ ಬೀರಿದೆ. ಬಹುಶಃ ಅದು ಪರಿಣಾಮ ಬೀರುವುದಿಲ್ಲ ಎಂಬ ಅಂದಾಜಿನಲ್ಲಿ ಕಾಂಗ್ರೆಸಿಗರಿದ್ದೆವು. ಆದರೆ ಅದು ಹುಸಿಯಾಗಿದೆ ಎಂದರು.

ಚುನಾವಣಾ ಫಲಿತಾಂಶದ ಬಗ್ಗೆ ಮಾಧ್ಯಮಗಳ ಸಮೀಕ್ಷೆಯಷ್ಟೇ ಸುಳ್ಳಾಗಿಲ್ಲ. ಕಾಂಗ್ರೆಸ್ಸಿಗರ ಲೆಕ್ಕಾಚಾರವೂ ಹುಸಿಯಾಗಿದೆ. ಹೀಗಾಗಿ ಮಾಧ್ಯಮ ಹಾಗೂ ಕಾಂಗ್ರೆಸ್‌‍ ಎರಡೂ ಒಂದೇ ವೇದಿಕೆಯಲ್ಲಿದ್ದೇವೆ. ಚುನಾವಣೆಯಲ್ಲಿ ಇನ್ನೂ ಸ್ವಲ್ಪ ಶ್ರಮ ಹಾಕಿದ್ದರೆ ಮತ್ತೆ ನಾಲ್ಕೈದು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿತ್ತು. 50 ಸಾವಿರ ಮತಗಳೊಳಗೆ ಸೋಲು ಕಂಡಿರುವ ಕ್ಷೇತ್ರಗಳಲ್ಲಿ ಗೆಲ್ಲಬಹುದಿತ್ತು ಎಂದರು.

ತುಮಕೂರಿನಲ್ಲಿ ನಮ ಕಾಂಗ್ರೆಸ್‌‍ ಅಭ್ಯರ್ಥಿ ಎಸ್‌‍.ಪಿ.ಮುದ್ದಹನುಮೇಗೌಡ 100 ಕ್ಕೆ 100 ಗೆಲ್ಲುತ್ತಾರೆ ಎಂಬ ವಿಶ್ವಾಸವಿತ್ತು. ಫಲಿತಾಂಶ ಏರುಪೇರಾಗಿದೆ. ಹೀಗಾಗಿ ತಾವು ಮತ್ತು ಸಚಿವ ಕೆ.ಎನ್‌.ರಾಜಣ್ಣ ಪಕ್ಷದ ವರಿಷ್ಠರಿಗೆ ವಿವರಣೆ ಕೊಡುತ್ತೇವೆ ಎಂದು ಹೇಳಿದರು.

ಐತಿಹಾಸಿಕ ಲೋಕಸಭಾ ಚುನಾವಣೆಯನ್ನು ಇಡೀ ವಿಶ್ವವೇ ಗಮನಿಸುತ್ತಿತ್ತು. ಆಧುನಿಕ ಯುಗದಲ್ಲಿ ಪ್ರಜಾಪ್ರಭುತ್ವ ಸಿದ್ಧಾಂತದಡಿ ಜನ ಹೇಗೆ ಮತ ಚಲಾಯಿಸಿದ್ದಾರೆ ಎಂಬ ಕುತೂಹಲವಿತ್ತು. ರಾಜ್ಯ ಸೇರಿದಂತೆ ದೇಶದ ಜನ ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚುನಾವಣೋತ್ತರ ಸಮೀಕ್ಷಾ ವರದಿಯಲ್ಲಿ ಏಕಪಾಳಯದ ಒಲವು ವ್ಯಕ್ತವಾಗಲಿದೆ ಎಂದು ಬಿಂಬಿಸಲಾಗಿತ್ತು. ಇಂಡಿಯಾ ಮೈತ್ರಿಕೂಟ ಧೂಳೀಪಟವಾಗಲಿದೆ. ಮೋದಿ ನೇತೃತ್ವದ ಬಿಜೆಪಿ 400 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ವರದಿಗಳಿದ್ದವು. ಇದನ್ನು ಜನರ ತೀರ್ಪು ತಿರುವು ಮುರುವು ಮಾಡಿರುವುದು ಫಲಿತಾಂಶದಲ್ಲಿ ಕಂಡುಬಂದಿದೆ.

ಕಾಂಗ್ರೆಸ್‌‍ 99 ಸ್ಥಾನಗಳನ್ನು ಗೆದ್ದಿರುವುದಲ್ಲದೆ, ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷ ಗಟ್ಟಿಯಾಗಿ ಉಳಿದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ 10 ವರ್ಷ ಆಡಳಿತಕ್ಕೆ ಎಚ್ಚರಿಕೆಯ ಗಂಟೆ ನೀಡಿದ್ದು, ಸಂಪೂರ್ಣ ಬಹುಮತ ನೀಡಿಲ್ಲ. ಅವರೂ ಕೂಡ ಮೈತ್ರಿಕೂಟದ ಮೇಲೆಯೇ ಅವಲಂಬಿತವಾಗಿರುವ ಪರಿಸ್ಥಿತಿ ಬಂದಿದೆ.

ಮೈತ್ರಿಕೂಟ ಸರ್ಕಾರದ ರಚನೆಗೆ ನಾನಾ ರೀತಿಯ ಕಸರತ್ತುಗಳು ನಡೆಯುತ್ತಿವೆ. ಮೋದಿ ನೇತೃತ್ವದ ಸರ್ಕಾರ ಅಥವಾ ಕಾಂಗ್ರೆಸ್‌‍ ನೇತೃತ್ವದ ಸರ್ಕಾರ ಯಾವುದು ರಚನೆಯಾಗಲಿದೆ ಎಂಬುದು ಕುತೂಹಲ ಇದೆ. ಈಗಲೂ ಇಂಡಿಯಾ ಕೂಟ ಸರ್ಕಾರ ರಚಿಸುವ ಸಾಧ್ಯತೆಯಿದೆ. ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು, ಬಿಹಾರದ ನಿತೀಶ್‌ ಕುಮಾರ್‌ ನಮಗೆ ಬೆಂಬಲ ನೀಡಿದರೆ ಸರ್ಕಾರ ರಚಿಸಬಹುದು ಎಂದರು.

ಈ ಹಿಂದೆ ಬಿಜೆಪಿ ಅವರನ್ನು ಯಾವ ರೀತಿ ನಡೆಸಿಕೊಂಡಿತ್ತು ಎಂಬುದನ್ನು ಸರಿಸಿಕೊಂಡು ಅವರಿಬ್ಬರೂ ಮನಸ್ಸು ಬದಲಾಯಿಸಿದರೆ ಕಾಂಗ್ರೆಸ್‌‍ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಪ್ರಧಾನಿ ಯಾರಾಗಲಿದ್ದಾರೆ ಎಂಬುದನ್ನು ಸದ್ಯಕ್ಕೆ ನಾವು ಹೇಳಲಾಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌‍ನ ರಾಷ್ಟ್ರೀಯ ನಾಯಕರು ದೇಶದಾದ್ಯಂತ ಪಾದಯಾತ್ರೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಮಲ್ಲಿಕಾರ್ಜುನ ಖರ್ಗೆಯವರು ಇಳಿವಯಸ್ಸಿನಲ್ಲೂ ದೇಶದೆಲ್ಲೆಡೆ ಪ್ರಚಾರ ನಡೆಸಿದರು. ಪ್ರಿಯಾಂಕ ಗಾಂಧಿ ಕೂಡ ಪ್ರಚಾರದಲ್ಲಿ ತೊಡಗಿಸಿಕೊಂಡರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಎಲ್ಲೆಡೆ ಪ್ರವಾಸ ನಡೆಸಿದ್ದಲ್ಲದೆ, ಕಾರ್ಯಕರ್ತರೂ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರು ಎಂದರು.

RELATED ARTICLES

Latest News