ಹಾಸನ, ಏ.1- ಜೆಡಿಎಸ್‍ನಲ್ಲೆ ಬೆಳೆದು ಮತ್ತೆ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಕರೆ ಕೊಡುವ ಸಿಎಂ ಸಿದ್ದರಾಮಯ್ಯ ಅವರ ದುರಹಂಕಾರಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೆ ತಕ್ಕ ಉತ್ತರ ಕೊಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕರೆ ಕೊಟ್ಟಿದ್ದಾರೆ.
ತಾಲೂಕಿನ ಸಾಲಗಾಮೆಯಲ್ಲಿ ನಿನ್ನೆ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಕ್ಕದಲ್ಲೇ ಬೆಳೆದು ಇಂದು ಅಧಿಕಾರದ ಅಹಂನಿಂದಾ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಈ ಬಾರಿ ಮುಖಭಂಗ ಮಾಡುವ ಕೆಲಸವನ್ನು ನನ್ನ ಜಿಲ್ಲೆಯ ಜನರು ಮಾಡಬೇಕಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಸಲುವಾಗಿ ಕೇಂದ್ರ ಹಣ ನೀಡುತ್ತಿಲ್ಲ ಎಂದು ಕೋರ್ಟ್ ನಲ್ಲಿ ರಾಜ್ಯ ಸರ್ಕಾರ ಧಾವೆ ಹೂಡಿದೆ, ಪ್ರಬಲವಾದ ಪ್ರಧಾನಿ ದೇಶಕ್ಕೆ ಇರಬಾರದು ಎಂಬ ಹೇಳಿಕೆ ನೀಡಿದ್ದಾರೆ. ಪ್ರಬಲವಾದ ಪ್ರಧಾನಮಂತ್ರಿ ಇದ್ದರೆ ಇವರು ಕೇಳಿದಂತೆ ಹಣ ನೀಡುವುದಿಲ್ಲ ಎಂದು ಈ ರೀತಿ ಹೇಳಿದ್ದಾರೆ. ಈ ಬಗ್ಗೆ ಜನ ಯೋಚಿಸುವ ಅಗತ್ಯ ಇದೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಈ ಹಿಂದೆ -ಫಲವತ್ತಾದ ಜಮೀನಿನಲ್ಲಿ ಮಾರಕವಾದ ಬೆಳೆಯುತ್ತಿದ್ದ ಕಾಂಗ್ರೆಸ್ ಗಿಡಗಳನ್ನು ಕಿತ್ತು ಹಾಕುತ್ತಿದ್ದೆವು. ಅದೇ ರೀತಿ ಈ ಭಾರಿಯ ಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತು ಹಾಕುವ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದರು.
ಸಾಲಗಾಮೆ ಹೋಬಳಿ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗೆ ಹೆಚ್ಚಿನ ಒತ್ತುಕೊಟ್ಟು ಕೆಲಸ ಮಾಡಲಿದ್ದೇನೆ ಇಲ್ಲಿಯ ಜನರ ಪ್ರಮುಖ ಕೊರತೆಯಾಗಿರುವ ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ಮಾಡಲಿದ್ದೇನೆ. ಈಗಾಗಲೇ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ 150 ಕೋಟಿ ವೆಚ್ಚದಲ್ಲಿ ಕೆಲಸ ಪ್ರಾರಂಭವಾಗಿದೆ. ಇನ್ನು ಕೇವಲ ಒಂದುವರೆ ಕಿಲೋಮೀಟರ್ ಅಷ್ಟು ಕೆಲಸ ಬಾಕಿ ಉಳಿದಿದ್ದು ಚುನಾವಣೆ ಬಳಿಕ ಅದನ್ನು ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ರೈತ ಪರವಾದಂತಹ ಸರ್ಕಾರವನ್ನು ಆಡಳಿತಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಶಾಸಕ ಸ್ವರೂಪ್ ಪ್ರಕಾಶ್, ಮಾಜಿ ಶಾಸಕ, ವೈ.ಎಸ್.ವಿ.ದತ್ತ , ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಮೂರ್ತಿ, ಸತ್ಯನಾರಾಯಣ, ಸೀಗೆ ನಂಜುಂಡಪ್ಪ, ಶಿವನಂಜಪ್ಪ, ಶಿವಣ್ಣ, ಕುಮಾರ್ ಮತ್ತು ಇತರರು ಇದ್ದರು.