ಬೆಂಗಳೂರು,ಏ.24– ಮೊದಲ ಹಂತದ ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುವ ಕೇಂದ್ರಗಳಲ್ಲಿ ಮದ್ಯ ಮಾರಾಟಕ್ಕೆ ಇಂದು ಸಂಜೆ ಕಡಿವಾಣ ಬೀಳಲಿದೆ. ಸಂಜೆ 5 ಗಂಟೆ 59 ನಿಮಿಷದಿಂದ 26ರ ಮಧ್ಯರಾತ್ರಿ 12ಗಂಟೆವರೆಗೆ ಎಂಎಸ್‍ಐಎಲ್/ರೆಸ್ಟೋರೆಂಟ್, ಡಾಬಾ ಸೇರಿದಂತೆ ಎಲ್ಲಿಯೂ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿಬಂಧನೆಯನ್ನು ಹಾಕಿದೆ.
ಒಂದು ವೇಳೆ ಆಯೋಗದ ಆದೇಶವನ್ನು ಉಲ್ಲಂಘಿಸಿ ಮದ್ಯ ಮಾರಾಟ ಮಾಡಿದರೆ ಅಂಥ ಮಳಿಗೆಗಳನ್ನು ತತ್‍ಕ್ಷಣವೇ ಜಪ್ತಿ ಮಾಡಿ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದೆ.
ಸಂಜೆ 5 ಗಂಟೆ 59 ನಿಮಿಷದಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಮತದಾನ ನಡೆಯುವ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಹಾಸನ, ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹಾಕಲಾಗಿದೆ.
ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಸಲು ಆಯೋಗ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದೆ. ಮತದಾನ ನಡೆಯುವ 48 ಗಂಟೆಗೂ ಮುನ್ನ ಮದ್ಯ ಮಾರಾಟ ನಿಷೇಧ ಮಾಡುವುದು ಸರ್ವೇ ಸಾಮಾನ್ಯವಾಗಿದೆ.