Monday, June 17, 2024
Homeರಾಜ್ಯಹೈವೋಲ್ಟೇಜ್ ಕ್ಷೇತ್ರ ಬೆಂಗಳೂರು ಗ್ರಾಮಾಂತರದ ಎಲ್ಲಾ ಮತಗಟ್ಟೆಗಳಲ್ಲೂ ವೆಬ್ ಕಾಸ್ಟಿಂಗ್ ವ್ಯವಸ್ಥೆ

ಹೈವೋಲ್ಟೇಜ್ ಕ್ಷೇತ್ರ ಬೆಂಗಳೂರು ಗ್ರಾಮಾಂತರದ ಎಲ್ಲಾ ಮತಗಟ್ಟೆಗಳಲ್ಲೂ ವೆಬ್ ಕಾಸ್ಟಿಂಗ್ ವ್ಯವಸ್ಥೆ

ಬೆಂಗಳೂರು,ಏ.24- ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಏ.26ರಂದು ಮತದಾನ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಇಡೀ ರಾಷ್ಟ್ರದ ಗಮನಸೆಳೆದಿರುವ ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿತವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತದಾನದಂದು ಎಲ್ಲ ಮತಗಟ್ಟೆಗಳಲ್ಲೂ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 2829 ಮತಗಟ್ಟೆಗಳಿದ್ದು, ಮತದಾನ ದಿನದಂದು ಎಲ್ಲ ಮತಗಟ್ಟೆಗಳಲ್ಲೂ ಶೇ.100ರಷ್ಟು ವೆಬ್ ಕಾಸ್ಟಿಂಗ್ ಮಾಡಲಾಗುವುದು. ಅಲ್ಲದೆ ಇತರೆ ಕ್ಷೇತ್ರಗಳಿಗಿಂತ ಎರಡು ಪಟ್ಟು ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕೇಂದ್ರದ ಅರೆಸೇನಾ ಪಡೆಯ 7 ಕಂಪನಿಗಳು ಹಾಗೂ ರಾಜ್ಯದ ಇತರೆ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ಬಳಸಿಕೊಳ್ಳಲಾಗಿದೆ ಎಂದರು.

ಅಭ್ಯರ್ಥಿಗಳ ಕೋರಿಕೆ ಹಾಗೂ ಪೊಲೀಸ್ ವೀಕ್ಷಕರು ಮತ್ತು ಕ್ಷೇತ್ರದಲ್ಲಿನ ವಾತಾವರಣವನ್ನು ಗಮನಿಸಿ ಭದ್ರತೆ ಒದಗಿಸಲಾಗುತ್ತದೆ ಎಂದು ಹೇಳಿದರು. ಮೊದಲ ಹಂತದ ಚುನಾವಣೆ ನಡೆಯುವ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2,88,19,342 ಮತದಾರರು ಇದ್ದಾರೆ.

ಎರಡು ಹಂತದ 28 ಕ್ಷೇತ್ರಗಳಲ್ಲಿ 5,47,72,300 ಮತದಾರರು ಇದ್ದು , ಒಟ್ಟು 58,821 ಮತಗಟ್ಟೆಗಳಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ, ಶಾಂತಿಯುತ ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಸುರಪುರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಸೇರಿದಂತೆ ರಾಜ್ಯದಲ್ಲಿ ಎಡಗೈ ತೋರುಬೆರಳಿಗೆ ಇಂಕ್ ಹಾಕಲಾಗುವುದು. ಈಗಾಗಲೇ ಶೇ.90ಕ್ಕೂ ಹೆಚ್ಚು ವೋಟರ್ ಸ್ಲಿಪ್‍ನ್ನು ತಲುಪಿಸಲಾಗಿದೆ. ಮತದಾನದ ಸಮಯದಲ್ಲಿ ಆ ಸ್ಲಿಪ್ ಅನ್ನು ಎಪಿಕ್ ಕಾರ್ಡ್ ಅನ್ನು ತೋರಿಸಬೇಕು. ಅದಿಲ್ಲದಿದ್ದರೆ ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಪಾಸ್‍ಪೋರ್ಟ್, ಪ್ಯಾನ್ ಕಾರ್ಡ್ ಸೇರಿದಂತೆ ಭಾವಚಿತ್ರ ಇರುವ ಗುರುತಿನ ಚೀಟಿಯನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ ಎಂದರು.

ಶೂನ್ಯ ಅವಧಿ:
ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುನ್ನ ಶೂನ್ಯ ಅವಧಿ ಘೋಷಣೆಯಾಗಿದ್ದು, ಇಂದು ಸಂಜೆ 6 ಗಂಟೆಯಿಂದ ಯಾವುದೇ ರೀತಿಯ ಸಾರ್ವಜನಿಕ ಸಭೆ, ರ್ಯಾಲಿ ನಡೆಸುವಂತಿಲ್ಲ ಮತದಾರರಲ್ಲದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ನಾಯಕರು ಕ್ಷೇತ್ರ ಬಿಟ್ಟು ತೆರಳಬೇಕು. ಸಂಜೆ 6 ಗಂಟೆಯಿಂದ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಕಲ್ಯಾಣ ಮಂಟಪ, ಹೋಟೆಲ್‍ಗಳನ್ನು ಸಂಜೆ 6 ಗಂಟೆ ನಂತರ ಪರಿಶೀಲನೆ ಮಾಡಲು ಸೂಚಿಸಲಾಗಿದೆ.

ಯಾವುದೇ ರೀತಿಯ ಸರ್ವೆ, ಸಮೀಕ್ಷೆ, ಅಭಿಪ್ರಾಯ ಸಂಗ್ರಹವನ್ನು ಜೂ.1ರ ಕೊನೆಯ ಹಂತದ ಮತದಾನ ಮುಕ್ತಾಯವಾಗುವವರೆಗೂ ನಿರ್ಬಂಧಿಸಲಾಗಿದೆ. 6 ಗಂಟೆಯ ನಂತರ ಐದು ಜನ ಮೀರದಂತೆ, ಧ್ವನಿ ವರ್ಧಕ ಬಳಸದೆ ಮತಯಾಚನೆ ಮಾಡಬಹುದು ಎಂದರು. ಸಾಮಾನ್ಯ ಜನರು, ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಕ್ಷೇತ್ರ ಬಿಟ್ಟು ತೆರಳುವ ನಿರ್ಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಜೆ ಘೋಷಣೆ:
ಮತದಾನ ನಡೆಯುವ ದಿನದಂದು ಎಲ್ಲಾ ಸರ್ಕಾರಿ ಕಚೇರಿಗಳಿಗೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳಿಗೂ ಸಾರ್ವತ್ರಿಕ ರಜೆ ನೀಡಲಾಗಿದೆ. ವ್ಯಾಪಾರೋದ್ಯಮ, ಕೈಗಾರಿಕೋದ್ಯಮ, ವಾಣಿಜ್ಯ ಸಂಸ್ಥೆಗಳು ಸೇರಿದಂತೆ ಎಲ್ಲಾ ರೀತಿಯ ಸಂಸ್ಥೆಗಳಲ್ಲಿ ವೇತನ ಸಹಿತ ರಜೆ ನೀಡಲು ಸೂಚಿಸಲಾಗಿದೆ.

ನಾಳೆ ಮತ್ತು ಶುಕ್ರವಾರ ಎಂಸಿಎಂಸಿ ಇಲ್ಲವೇ ಪೂರ್ವ ಪ್ರಮಾಣೀಕರಿಸಿದ ಜಾಹೀರಾತುಗಳನ್ನು ಮಾತ್ರ ಪತ್ರಿಕೆಗಳು ಪ್ರಕಟಿಸಬೇಕು. ಮತಗಟ್ಟೆಗಳ ಬಳಿ 200 ಮೀಟರ್ ದೂರದಲ್ಲಿ ರಾಜಕೀಯ ಪಕ್ಷಗಳ ಒಂದು ಟೇಬಲ್, ಎರಡು ಕುರ್ಚಿಗಳನ್ನು ಹಾಕಿಕೊಳ್ಳಬಹುದಾಗಿದೆ.

65 ಕಂಪನಿ ಅರೆಸೇನಾ ಪಡೆ:
ಮೊದಲ ಹಂತದ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ 65 ಕಂಪನಿ ಅರೆಸೇನಾ ಪಡೆ, 50 ಸಾವಿರ ಸಿವಿಲ್ ಪೊಲೀಸ್ ಬಳಕೆ ಮಾಡುತ್ತಿದ್ದು, 1370 ಮತಗಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ, 19,701 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ಮಾಡಲಾಗುವುದು. 5 ಸಾವಿರ ಸೂಕ್ಷ್ಮ ವೀಕ್ಷಕರನ್ನು ಕೂಡ ನಿಯೋಜಿಸಲಾಗಿದೆ.

ಕ್ಯೂಆರ್ ಕೋಡ್ ವೋಟರ್ ಸ್ಲಿಪ್:
ನಗರಪ್ರದೇಶದ ಮತದಾರರ ಅನುಕೂಲಕ್ಕಾಗಿ ವೋಟರ್ ಸ್ಲಿಪ್‍ನ ಹಿಂಬದಿಯಲ್ಲಿ ಕ್ಯೂಆರ್ ಕೋಡ್ ನಮೂದಿಸಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ಮತಗಟ್ಟೆಗೆ ಡೈರೆಕ್ಷನ್ ತೋರಿಸಲಿದೆ. ಮತಗಟ್ಟೆ ಬಳಿ ಇರುವ ಕ್ಯೂ ಪಾರ್ಕಿಂಗ್, ಸ್ಥಳಾವಕಾಶದ ಬಗ್ಗೆಯೂ ಮಾಹಿತಿ ಸಿಗಲಿದೆ. ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ನಗರಪ್ರದೇಶಗಳಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ಮೊದಲ ಬಾರಿಗೆ ಬಳಸಲಾಗುತ್ತಿದೆ ಎಂದು ಎಲ್ಲಾ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ಆರ್.ವೆಂಕಟೇಶ್ ಕುಮಾರ್ ಹಾಗೂ ಕೂರ್ಮರಾವ್.ಎಮ್ ಉಪಸ್ಥಿತರಿದ್ದರು.

RELATED ARTICLES

Latest News