Friday, December 6, 2024
Homeರಾಜ್ಯಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳ ಪ್ರಯೋಗಕ್ಕೆ ಬಿಜೆಪಿ ಬ್ರೇಕ್

ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳ ಪ್ರಯೋಗಕ್ಕೆ ಬಿಜೆಪಿ ಬ್ರೇಕ್

ಬೆಂಗಳೂರು, ಫೆ.21- ಲೋಕಸಭಾ ಚುನಾವಣೆಗೆ ಕೆಲವೇ ವಾರಗಳು ಉಳಿದಿದ್ದು, ಕರ್ನಾಟಕದಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಇರಾದೆಯಲ್ಲಿ ಬಿಜೆಪಿ ಇದೆ. ಆದರೆ, ಹಲವು ಕ್ಷೇತ್ರಗಳಲ್ಲಿ ಕಮಲ ಪಡೆಗೆ ಅಭ್ಯರ್ಥಿಗಳ ಸಮಸ್ಯೆ ಎದುರಾಗಿದೆ. 10 ರಿಂದ 12 ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಕೊಕ್ ನೀಡಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿ ಸುವ ಚಿಂತನೆಯನ್ನು ಬಿಜೆಪಿ ಮಾಡಿತ್ತು. ಆದರೆ, ಆಂತರಿಕ ಭಿನ್ನಾಭಿಪ್ರಾಯ ಹಾಗೂ ಸಮರ್ಥ ಅಭ್ಯರ್ಥಿಗಳು ದೊರೆಯದಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಬಗ್ಗೆ ಶನಿವಾರ ಮತ್ತು ಭಾನುವಾರ ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ನೇತೃತ್ವದ ಬಿಜೆಪಿ ರಾಜ್ಯ ಘಟಕವು ಸುಮಾರು 10 ರಿಂದ 12 ಕ್ಷೇತ್ರಗಳಲ್ಲಿ ಎದುರಾಗಿರುವ ಸವಾಲುಗಳ ಬಗ್ಗೆ ಪಕ್ಷದ ಹೈಕಮಾಂಡ್‍ಗೆ ವಿವರಿಸಿದ್ದು, ರಾಜ್ಯದ ವಾಸ್ತವ ಅಂಶಗಳನ್ನು ದಿಲ್ಲಿ ನಾಯಕರ ಮುಂದೆ ತೆರೆದಿಟ್ಟಿದ್ದಾರೆ.

ದಾವಣಗೆರೆ, ಬೀದರ್, ದಕ್ಷಿಣಕನ್ನಡ, ಬೆಂಗಳೂರು ಉತ್ತರದಂತಹ ಕ್ಷೇತ್ರಗಳ ಬಗ್ಗೆ ಕೇಂದ್ರದ ನಾಯಕರಿಗೆ ತಿಳಿಸಲಾಗಿದ್ದು, ಅವರ ನಿರ್ಧಾರಕ್ಕೆ ಎದುರು ನೋಡುತ್ತಿದ್ದೇವೆ ಎಂದು ಬಿಜೆಪಿಯ ನಾಯಕರೊಬ್ಬರು ತಿಳಿಸಿದ್ದಾರೆ. ಇನ್ನು, ಪಕ್ಷದ ಬೂತ್ ಮಟ್ಟದೊಂದಿಗೆ ಹಾಗೂ ಮತದಾರರೊಂದಿಗೆ ಸಂಪರ್ಕ ಕಳೆದುಕೊಂಡಿರುವ ಹಾಲಿ ಸಂಸದರನ್ನು ಬದಲಿಸಲು ಬಿಜೆಪಿ ಹೈಕಮಾಂಡ್ ಇಂಗಿತ ವ್ಯಕ್ತಪಡಿಸಿದೆ. ಆದರೆ, ಬಹಳಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ ಲ್ಲ ಎನ್ನಲಾಗಿದೆ. ಕೆಲವೊಂದು ಕ್ಷೇತ್ರಗಳಲ್ಲಿ ಮಾತ್ರ ಬದಲಾವಣೆ ಆಗುವ ಸಾಧ್ಯತೆ ಇದೆ. ಹಲವು ಸವಾಲುಗಳು ಇರುವುದರಿಂದ ಚುನಾವಣೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಳೆದು ತೂಗಿ ಅಭ್ಯರ್ಥಿಗಳನ್ನು ಘೋಷಿಸಬಹುದು ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್.ನಾರಿಮನ್ ನಿಧನ

ಲೋಕಸಭೆ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಚರ್ಚಿಸಲು ಫೆಬ್ರವರಿ ಅಂತ್ಯದಲ್ಲಿ ರಾಜ್ಯ ನಾಯಕರ ಸಭೆ ಕರೆಯಲಾಗಿದ್ದು, ಅಲ್ಲಿ ಅಭ್ಯರ್ಥಿಗಳ ಬಗ್ಗೆ ಅಂತಿಮ ಚಿತ್ರಣ ಸಿಗುವ ಸಾಧ್ಯತೆಯಿದೆ. ಅಲ್ಲಿ ಸಿದ್ಧಗೊಂಡ ಪಟ್ಟಿಯನ್ನು ಅಂತಿಮ ಅಭ್ಯರ್ಥಿಗಳ ಪಟ್ಟಿ ಘೋಷಣೆಯ ನಿರೀಕ್ಷೆಯೊಂದಿಗೆ ಹೈಕಮಾಂಡ್‍ಗೆ ರವಾನಿಸಲಾಗುತ್ತದೆ. ಹೈಕಮಾಂಡ್ ನಾಯಕರು ಕೊನೆ ಕ್ಷಣದ ಬದಲಾವಣೆ ಮಾಡದಿದ್ದರೆ, ರಾಜ್ಯದ ನಾಯಕರೇ ಕಳುಹಿಸಿದ ಪಟ್ಟಿ ಅಂತಿಮವಾಗಲಿದೆ. ಮಾರ್ಚ್ ಎರಡನೇ ವಾರದಲ್ಲಿ ಅಭ್ಯರ್ಥಿಗಳ ಘೋಷಣೆಯಾಗುವ ಸಾಧ್ಯತೆ ಇದೆ.

ಜೊತೆಗೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಪದವೀಧರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಗೆ ಆದ್ಯತೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೈಕಮಾಂಡ್‍ಗೆ ಸಲ್ಲಿಸಲಿದ್ದಾರೆ.

ಯಾವ್ಯಾವ ಕ್ಷೇತ್ರಗಳಲ್ಲಿ ಸವಾಲು? :
ಪ್ರಮುಖವಾಗಿ ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ವಿಜಯಪುರ, ತುಮಕೂರು, ಕೊಪ್ಪಳ, ದಾವಣಗೆರೆ, ಹಾವೇರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೀದರ್ ಕ್ಷೇತ್ರಗಳಲ್ಲಿ ಬಿಜೆಪಿಗೆ ಸಮಸ್ಯೆ ಎದುರಾಗಿದೆ. ಹಲವು ಕ್ಷೇತ್ರಗಳಲ್ಲಿ ಹಾಲಿ ಸಂಸದರು ತಾವೇ ನಿವೃತ್ತಿ ಘೋಷಿಸಿದ್ದು, ಅವರ ಜಾಗಕ್ಕೆ ಸಮರ್ಥ ಅಭ್ಯರ್ಥಿ ಬಿಜೆಪಿಗೆ ಸಿಗುತ್ತಿಲ್ಲ. ಒಂದಿಷ್ಟು ಕಡೆ ಆಂತರಿಕ ಭಿನ್ನಾಭಿಪ್ರಾಯಗಳು ಕೂಡ ಕಂಡುಬಂದಿದ್ದು, ಅಭ್ಯರ್ಥಿಗಳ ಘೋಷಣೆಯಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ.

RELATED ARTICLES

Latest News