Sunday, May 5, 2024
Homeರಾಜ್ಯಯುಗಾದಿ, ರಂಜಾನ್ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್‍ಗಳ ವ್ಯವಸ್ಥೆ

ಯುಗಾದಿ, ರಂಜಾನ್ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯಿಂದ 2000ಕ್ಕೂ ಹೆಚ್ಚು ವಿಶೇಷ ಬಸ್‍ಗಳ ವ್ಯವಸ್ಥೆ

ಬೆಂಗಳೂರು,ಏ.5- ಯುಗಾದಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‍ಆರ್‍ಟಿಸಿ) ವಿವಿಧ ಊರುಗಳಿಗೆ 2000ಕ್ಕೂ ಹೆಚ್ಚು ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಿದೆ. ಯುಗಾದಿ, ರಂಜಾನ್ ಹಬ್ಬದ ಸಾಲುಸಾಲು ರಜೆಗಳಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದ್ದು, ಒಟ್ಟು 2275 ವಿಶೇಷ ಬಸ್‍ಗಳನ್ನು ರಸ್ತೆಗಿಳಿಸಲು ನಾಲ್ಕು ನಿಗಮಗಳು ನಿರ್ಧರಿಸಿದ್ದು, ರಜೆ ಹಿನ್ನೆಲೆ ಊರಿಗೆ ಹಾಗೂ ಪ್ರವಾಸಕ್ಕೆ ತೆರಳುವವರಿಗೆ ಅನುಕೂಲವಾಗಲಿದೆ.

ಕೆಎಸ್‍ಆರ್‍ಟಿಸಿಯಿಂದ 1,750ಬಸ್, ಎನ್‍ಡಬ್ಲ್ಯೂಕೆಎಸ್‍ಆರ್‍ಟಿಸಿಯ 145 ಬಸ್, ಕೆಕೆಆರ್‍ಟಿಸಿಯ 200 ಬಸ್ ಹಾಗೂ ಬಿಎಂಟಿಸಿಯ 180 ವಿಶೇಷ ಬಸ್‍ಗಳನ್ನು ರಸ್ತೆಗಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು ನಾಲ್ಕು ನಿಗಮಗಳಿಂದ 2,275 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಸಾಲು ಸಾಲು ರಜೆ
ಏ.7 ಭಾನುವಾರ, 9 ಮಂಗಳವಾರ ಯುಗಾದಿ ಹಬ್ಬ, ಗುರುವಾರ ರಂಜಾನ್ ಇದೆ. ಏ.13 ಎರಡನೇ ಶನಿವಾರ ರಜೆ ಹಾಗೂ 14ರಂದು ಭಾನುವಾರದ ರಜೆ ಇದೆ. ಕೆಲವರು ರಜೆ ಹಾಕಿ ಊರಿಗೆ ತೆರಳಲು ತಯಾರಿ ನಡೆಸಿದ್ದಾರೆ. ಒಟ್ಟು 5 ರಜೆಗಳು ಸಿಗಲಿದೆ.

ವಿದ್ಯಾರ್ಥಿಗಳಿಗೆ ರಜೆ ಶುರುವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ ತೆರಳಲು ತಯಾರಿ ನಡೆಸಿರುವ ಪೋಷಕರಿಗೆ ಇದು ಅನುಕೂಲವಾಗಲಿದೆ. ಈ ಎಲ್ಲ ಕಾರಣಗಳನ್ನು ಮತ್ತು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದೆ.

ಹಬ್ಬಗಳು ಹಾಗೂ ವಾರಾಂತ್ಯದ ಕಾರಣ ಏಪ್ರಿಲ್ 7 ರಿಂದ ಏಪ್ರಿಲ್ 14ರ ವರೆಗೆ ಬರೋಬ್ಬರಿ 5 ರಜೆಗಳು ಸಿಗಲಿವೆ. ವಿದ್ಯಾರ್ಥಿಗಳಿಗೆ ಬೇಸಗೆ ರಜೆಯೂ ಶುರುವಾದ ಕಾರಣ ಮಕ್ಕಳ ಜೊತೆ ಪ್ರವಾಸಕ್ಕೆ ತೆರಳು ಪೋಷಕರು ಯೋಜನೆ ಹಾಕಿಕೊಂಡಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶೇಷ ಬಸ್ ಸೇವೆ ಒದಗಿಸಲಾಗುತ್ತಿದೆ.

ಎಲ್ಲೆಲ್ಲಿ ವಿಶೇಷ ಬಸ್ ವ್ಯವಸ್ಥೆ:
ನಗರದ ಕೆಂಪೇಗೌಡ ನಿಲ್ದಾಣ, ಸ್ಯಾಟಲೈಟ್ ನಿಲ್ದಾಣ, ಶಾಂತಿನಗರದಿಂದ ವಿಶೇಷ ಬಸ್ ಸೇವೆ ದೊರೆಯಲಿದೆ. ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ ಸೇರಿ ಹಲವು ಸ್ಥಳಗಳಿಗೆ ಹೆಚ್ಚುವರಿ ಬಸ್ ಸೇವೆ ದೊರೆಯಲಿದೆ. ನೆರೆರಾಜ್ಯಗಳ ನಗರಗಳಾದ ಹೈದರಾಬಾದ್, ಚೆನ್ನೈ, ಗೋವಾ ಪಣಜಿ, ಶಿರಡಿ, ಎರ್ನಾಕುಲಂಗೆ ವಿಶೇಷ ಬಸ್ ಸೇವೆ ಇರಲಿದೆ.

RELATED ARTICLES

Latest News