ಬೆಂಗಳೂರು, ಫೆ.22- ಬಿಜೆಪಿಯಲ್ಲಿರುವ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಇಂದು ಮರಳಿ ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಪಕ್ಷಾಂತರ ಮಾಡಿರುವ ಎಸ್.ಪಿ.ಮುದ್ದ ಹನುಮೇ ಗೌಡರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ.
ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಎಸ್.ಪಿ. ಮುದ್ದಹನುಮೇಗೌಡ ಅವರನ್ನು ಕಾಂಗ್ರೆಸ್‍ಗೆ ಬರ ಮಾಡಿಕೊಳ್ಳಲಿದ್ದಾರೆ.
“ನಷ್ಟ ಸರಿದೂಗಿಸಲು ವಿದ್ಯುತ್ ದರ ಏರಿಕೆ ಪರಿಹಾರವಲ್ಲ”
ಎಸ್.ಪಿ. ಮುದ್ದಹನುಮೇಗೌಡ ಅವರ ಸೇರ್ಪಡೆಗೆ ಸಂಬಂಧಪಟ್ಟಂತೆ ತುಮಕೂರು ಜಿಲ್ಲಾ ರಾಜಕಾರಣದಲ್ಲಿ ಸಾಕಷ್ಟು ವಿರೋಧಗಳು ಕಂಡು ಬಂದಿವೆ. ಎಸ್.ಪಿ. ಮುದ್ದಹನುಮೇಗೌಡ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗುವ ತಯಾರಿಯಲ್ಲಿದ್ದಾರೆ. ಈ ಹಿಂದೆ ಕಾಂಗ್ರೆಸ್‍ನಿಂದಲೇ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ 2019 ರಲ್ಲಿ ಜೆಡಿಎಸ್-ಕಾಂಗ್ರೆಸ್‍ನ ಮೈತ್ರಿ ಕಾರಣಕ್ಕೆ ಟಿಕೆಟ್ ವಂಚಿತರಾಗಿದ್ದರು. ಅನಂತರ ಜೆಡಿಎಸ್-ಬಿಜೆಪಿ ಎರಡೂ ಪಕ್ಷಗಳಿಗೂ ಹಲವು ಬಾರಿ ಪಕ್ಷಾಂತರ ಮಾಡಿದ್ದರು. ಈಗ ಮತ್ತೆ ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದು, ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ರ್ಪಧಿಸಲು ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪಕ್ಷದ ಕಾರ್ಯಕರ್ತರು, ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅದರ ಹೊರತಾಗಿಯೂ ಮೇಲ್ಮಟ್ಟದ ನಾಯಕರು ಎಸ್.ಪಿ. ಮುದ್ದಹನುಮೇಗೌಡ ಅವರನ್ನು ಕರೆ ತಂದಿದ್ದು, ಲೋಕಸಭೆ ಚುನಾವಣೆಯಲ್ಲಿ ಸ್ರ್ಪಧಿಸುವ ಅವಕಾಶ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ಹೊಂದಿಕೊಳ್ಳಲಾಗದೆ ಅಸಹನೆಯಿಂದ ಕುದಿಯುತ್ತಿರುವ ಕೆಲವು ಶಾಸಕರು ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.