ಬೆಂಗಳೂರು,ಜ.29- ನನಗೆ ಸಿಎಂ ಆಗಬೇಕು ಎಂಬ ಆಸೆಯಿದೆ. ಆದರೆ ಸಚಿವ ಸ್ಥಾನ ಕೊಡಲಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾ ಕುಳಿತುಕೊಳ್ಳಲಾಗುತ್ತಿಲ್ಲ. ಎಲ್ಲದಕ್ಕೂ ಸಹನೆ, ಸಮಯ ಅಗತ್ಯವಿದೆ ಎಂದು ಬಿಡಿಎ ನೂತನ ಅಧ್ಯಕ್ಷ ಎನ್.ಎ.ಹ್ಯಾರಿಸ್ ಹೇಳಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ತೃಪ್ತಿ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇರುತ್ತದೆ, ಸಿಗಬೇಕಲ್ಲ. ಸಚಿವ ಸ್ಥಾನ ಕೊಟ್ಟಿಲ್ಲ ಎಂದು ಹೇಳುತ್ತಾ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ರಾಜಕೀಯದಲ್ಲಿ ಸಹನೆ ಇರಬೇಕು, ಸಮಯ ಮತ್ತು ಅವಕಾಶಗಳು ಬರಬೇಕು. ನಾನು ಸಹನೆಯಿಂದ ಕಾಯುತ್ತೇನೆ ಎಂದು ತಿಳಿಸಿದರು.
ಶಾಂತಿನಗರವನ್ನೇ ಅಭಿವೃದ್ಧಿ ಮಾಡಿಲ್ಲ. ಬಿಡಿಎಯನ್ನು ಇನ್ನೇನು ಅಭಿವೃದ್ಧಿ ಮಾಡುತ್ತಾರೆ ಎಂದು ಕೆಲವರು ಟೀಕೆ ಮಾಡುವುದನ್ನು ಕಂಡಿದ್ದೇನೆ. ನಾನಿಲ್ಲಿ ರಾಜಕೀಯ ಭಾಷಣ ಮಾಡಲು ಬಂದಿಲ್ಲ. ಅಭಿವೃದ್ಧಿ ಎಂದರೆ ಏನು, ಬಿಡಿಎ ಎಂದರೆ ಏನು ಎಂದು ತಿಳಿದುಕೊಳ್ಳದೇ ಇರುವವರ ಟೀಕೆಗಳಿಗೆಲ್ಲಾ ಉತ್ತರ ನೀಡುವುದು ಅನಗತ್ಯ ಎಂದು ಹೇಳಿದರು.
ಬಿಜೆಪಿ ಅಸ್ಥಿತ್ವ ಕಂಡುಕೊಳ್ಳಲು ಜನರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ : ಡಿಕೆಶಿ
ಬೆಂಗಳೂರು ಅತ್ಯಂತ ಸುಂದರ ನಗರ. ಇದನ್ನು ಉಳಿಸಿಕೊಳ್ಳಬೇಕು ಮತ್ತು ಬೆಳೆಸಬೇಕು. ಮತ್ತಷ್ಟು ಬಡಾವಣೆಗಳ ಅಭಿವೃದ್ಧಿಗೆ ಕಾರ್ಯಯೋಜನೆ ಸಿದ್ಧಪಡಿಸಲಾಗುವುದು. ಬೆಂಗಳೂರಿನ ಸುಧಾರಣೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಾನು ಬೆಂಗಳೂರಿನಲ್ಲಿ ನಾಲ್ಕು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಸಮಸ್ಯೆಗಳ ಬಗ್ಗೆ ಅರಿವಿದೆ. ವಿರೋಧ ಪಕ್ಷಗಳು ಕೇವಲ ಟೀಕೆ ಮಾಡುತ್ತಾ ಕುಳಿತುಕೊಂಡರೆ ಅದರಿಂದ ನಷ್ಟವಾಗುವುದು ಜನರಿಗೆ. ಸಮಸ್ಯೆಗಳ ಜೊತೆಗೆ ಪರಿಹಾರದ ಸಲಹೆಯನ್ನು ನೀಡಿ ನಾನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಎಂದರು.
ಮಂಡ್ಯದ ಕೆರಗೋಡಿನಲ್ಲಿ ಧ್ವಜ ವಿವಾದಕ್ಕೆ ಸಂಬಂಧಪಟ್ಟಂತೆ ವಿರೋಧ ಪಕ್ಷಗಳ ಗಲಾಟೆ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ವಿರೋಧಪಕ್ಷವಾಗಿ ಅವರಿಗೆ ಇರುವುದು ಅದೇ ಕೆಲಸ. ಅದನ್ನವರು ಮಾಡುತ್ತಾ ಇರಲಿ, ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತೇವೆ ಎಂದು ಹೇಳಿದರು.