Homeರಾಷ್ಟ್ರೀಯCEC ಗ್ಯಾನೇಶ್‌ ಕುಮಾರ್‌ ಮನೆ ವಿರೂಪಗೊಳಿಸಿದ 20 ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಕೊಲೆ ಯತ್ನ ಕೇಸ್‌

CEC ಗ್ಯಾನೇಶ್‌ ಕುಮಾರ್‌ ಮನೆ ವಿರೂಪಗೊಳಿಸಿದ 20 ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಕೊಲೆ ಯತ್ನ ಕೇಸ್‌

ಆಗ್ರಾ, ಸೆ. 30 (ಪಿಟಿಐ): ಇಲ್ಲಿನ ವಿಜಯನಗರ ಪ್ರದೇಶದಲ್ಲಿರುವ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರ ನಿವಾಸದ ಮುಂದೆ ನಡೆದ ಪ್ರತಿಭಟನೆಯ ವೇಳೆ ಅವರ ಮನೆಯನ್ನು ವಿರೂಪಗೊಳಿಸಿದ ಆರೋಪದ ಮೇಲೆ ಸುಮಾರು 20 ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಕೊಲೆ ಯತ್ನ, ಗಂಭೀರ ಸ್ವರೂಪದ ಗಾಯವನ್ನುಂಟುಮಾಡುವುದು ಮತ್ತು ಗಲಭೆ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪೈಕಿ ಆರು ಮಂದಿಯನ್ನು ಬಂಧಿಸಲಾಗಿದೆ. ಕುಮಾರ್‌ ಅವರ ನಿವಾಸದ ಹೊರಗೆ ನಡೆದ ಪ್ರತಿಭಟನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಸ್ಥಳದಿಂದ ತೆರಳುವ ಮುನ್ನ ಮನೆಯ ಗೇಟ್‌ ಮತ್ತು ಗೋಡೆಯ ಮೇಲೆ ಕಪ್ಪು ಬಣ್ಣದಿಂದ ಘೋಷಣೆಗಳನ್ನು ಬರೆದಿದ್ದರು ಎಂದು ಆರೋಪಿಸಲಾಗಿದೆ.

ಬಂಧಿತ ಆರು ಆರೋಪಿಗಳಾದ ಕಾಂಗ್ರೆಸ್‌ ಮುಖಂಡರಾದ ಅನಿಲ್‌ ಯಾದವ್‌, ಮುಕೇಶ್‌ ಧಂಗರ್‌, ಮನೋಜ್‌ ಗೌರ್‌, ರಾಜೇಶ್‌ ಕುಮಾರ್‌, ರಾಜಾ ಗೌತಮ್‌ ಮತ್ತು ಪಂಕಜ್‌ ಚೌಧರಿ ಅವರನ್ನು ನಿನ್ನೆ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಸರಿಸಲಾದ ಎಂಟು ಮಂದಿ ಹಾಗೂ ಗುರುತಿಸಲಾಗದ 15-20 ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಸಬ್‌ ಇನ್‌ಸ್ಪೆಕ್ಟರ್‌ ಗೌರವ್‌ ಗುಪ್ತಾ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಹರಿಪರ್ವತ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಅಡಿಯಲ್ಲಿ ಸೆಕ್ಷನ್‌ 109 (ಕೊಲೆ ಯತ್ನ), 121 (ಸಾರ್ವಜನಿಕ ಸೇವಕರು ತಮ್ಮ ಕರ್ತವ್ಯ ನಿರ್ವಹಿಸದಂತೆ ತಡೆಯಲು ಉದ್ದೇಶಪೂರ್ವಕವಾಗಿ ಗಂಭೀರ ಗಾಯವನ್ನುಂಟುಮಾಡುವುದು), 126 (ಅಕ್ರಮ ನಿರ್ಬಂಧ), 132 (ಸಾರ್ವಜನಿಕ ಸೇವಕರ ಮೇಲೆ ಹಲ್ಲೆ ಅಥವಾ ಕ್ರಿಮಿನಲ್‌ ಬಲಪ್ರಯೋಗ), 191 (ಬಲ ಅಥವಾ ಹಿಂಸೆಯನ್ನು ಬಳಸುವ ಕಾನೂನುಬಾಹಿರ ಗುಂಪಿನಿಂದ ಗಲಭೆ), 333 (ಗಾಯ, ಹಲ್ಲೆ ಅಥವಾ ಅಕ್ರಮ ನಿರ್ಬಂಧಕ್ಕೆ ಸಿದ್ಧತೆ ನಡೆಸಿದ ನಂತರ ಮನೆಗೆ ಅಕ್ರಮ ಪ್ರವೇಶ), 351(2) (ಕ್ರಿಮಿನಲ್‌ ಬೆದರಿಕೆ) ಮತ್ತು 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಮಾಡಿದ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣವು ಪ್ರತಿಭಟನೆಗೆ ಸಂಬಂಧಿಸಿದ ನಿಬಂಧನೆಗಳಿಗೆ ಸೀಮಿತವಾಗಿರಬೇಕಿತ್ತು. ಆದರೆ ಪೊಲೀಸರು ಕಾರ್ಯಕರ್ತರ ವಿರುದ್ಧ ಹಲವಾರು ಸುಳ್ಳು ಸೆಕ್ಷನ್‌ಗಳನ್ನು ಹೇರಿದ್ದಾರೆ ಎಂದು ಕಾಂಗ್ರೆಸ್‌ ನಗರ ಅಧ್ಯಕ್ಷ ಅಮಿತ್‌ ಸಿಂಗ್‌ ಹೇಳಿದ್ದಾರೆ. ಕಾಂಗ್ರೆಸ್‌ ನಿಯೋಗವೊಂದು ಬುಧವಾರ ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ, ಆರೋಪಿಸಲಾದ ಸುಳ್ಳು ಪ್ರಕರಣಗಳನ್ನು ಕೈಬಿಡುವಂತೆ ಒತ್ತಾಯಿಸಲಿದೆ ಎಂದು ಅವರು ತಿಳಿಸಿದ್ದಾರೆ. ಈ ಘಟನೆಯು ಕುಮಾರ್‌ ವಿರುದ್ಧ ಕಾಂಗ್ರೆಸ್‌ ನಡೆಸಿದ ರಾಜ್ಯವ್ಯಾಪಿ ಪ್ರತಿಭಟನೆಯ ಭಾಗವಾಗಿತ್ತು.

RELATED ARTICLES
spot_img

Latest News