ಚಂಡೀಗಢ, ಜು. 20-ಹರಿಯಾಣದ ಝಜ್ಜರ್ ಜಿಲ್ಲೆಯಲ್ಲಿ ಪರಿತ್ಯಕ್ತ ಬಾವಿಗೆ ಬಿದ್ದಿದ್ದ ಕರುವನ್ನು ರಕ್ಷಿಸಲು ಇಳಿದ ನಾಲ್ವರು ವಿಷಕಾರಿ ಅನಿಲ ಉಸಿರಾಡಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮುನಿಂಪುರ ಗ್ರಾಮದಲ್ಲಿ ಈ ಘಟನೆ ಸಂಭವಿದ್ದು,ಸುಮಾರು 40ರಿಂದ 50 ವರ್ಷಗಳಷ್ಟು ಹಳೆಯದಾದ ಬಳಕೆಯಲ್ಲಿಲ್ಲದ ಬಾವಿಗೆ ಕರು ಬಿದ್ದಿತ್ತು. ಅದನ್ನು ರಕ್ಷಿಸಲು ಮೊದಲು ಇಬ್ಬರು ಬಾವಿಗೆ ಇಳಿದಿದ್ದರು. ಅವರು ಹೊರಬರದ ಹಿನ್ನೆಲೆಯಲ್ಲಿ ಮತ್ತಿಬ್ಬರು ಬಾವಿಗೆ ಇಳಿದರೂ ಅವರೂ ಹೊರಬರಲಿಲ್ಲ ಎಂದು ಝಜ್ಜರ್ ಸದರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಪರಂಜೀತ್ ತಿಳಿಸಿದ್ದಾರೆ.
ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಅವರನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಘೋಷಿಸಿದರು.
ಮೃತರನ್ನು ಸ್ಥಳೀಯ ನಿವಾಸಿಗಳಾದ ಮೋನು, ದಲ್ಬೀರ್, ನರೇಂದರ್ ಹಾಗೂ ವಲಸೆ ಕಾರ್ಮಿಕ ರಾಮು ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಬಾವಿಗೆ ಬಿದ್ದಿದ್ದ ಕರು ಕೂಡ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
