Homeಇದೀಗ ಬಂದ ಸುದ್ದಿಉತ್ತರ ಪ್ರದೇಶದಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಐದು ಕಾಡಾನೆಗಳ ರಕ್ಷಣೆ

ಉತ್ತರ ಪ್ರದೇಶದಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಐದು ಕಾಡಾನೆಗಳ ರಕ್ಷಣೆ

5 elephants stranded in strong river current rescued in Bahraich

ಬಹ್ರೈಚ್‌, ಆ.5- ಉತ್ತರ ಪ್ರದೇಶದ ಬಹ್ರೈಚ್‌ ಜಿಲ್ಲೆಯ ಕತಾರ್ನಿಯಾಘಾಟ್‌ ಅರಣ್ಯ ಪ್ರದೇಶದಲ್ಲಿ ಕೌಡಿಯಾಲಾ ನದಿಯ ಬಿರುಸಿನ ಪ್ರವಾಹದಲ್ಲಿ ಗಿರ್ಜಾಪುರಿ ಬ್ಯಾರೇಜ್‌ನತ್ತ ಕೊಚ್ಚಿಹೋಗುತ್ತಿದ್ದ ಎರಡು ಮರಿಯಾನೆಗಳು ಸೇರಿದಂತೆ ಐದು ಕಾಡಾನೆಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಮೂರು ವಯಸ್ಕ ಆನೆಗಳು ಹಾಗೂ ಎರಡು ಮರಿಯಾನೆಗಳನ್ನು ಒಳಗೊಂಡ ಹಿಂಡು ನದಿಯ ಭಾರಿ ಪ್ರವಾಹಕ್ಕೆ ಸಿಲುಕಿ ಗಿರ್ಜಾಪುರಿ ಬ್ಯಾರೇಜ್‌ನತ್ತ ಕೊಚ್ಚಿಹೋಗುತ್ತಿತ್ತು.

ನಿನ್ನೆ ಬೆಳಿಗ್ಗೆ 10.20ರ ಸುಮಾರಿಗೆ ಕೈಲಾಶ್‌ಪುರಿ ಬ್ಯಾರಿಯರ್‌ ಮೂಲಕ ಕತಾರ್ನಿಯಾಘಾಟ್‌ ರೇಂಜ್‌ ಕಚೇರಿಗೆ ಆನೆಗಳು ಬಿರುಸಿನ ಪ್ರವಾಹದಲ್ಲಿ ಬ್ಯಾರೇಜ್‌ನತ್ತ ಕೊಚ್ಚಿಹೋಗುತ್ತಿರುವ ಮಾಹಿತಿ ಲಭ್ಯವಾಗಿತ್ತು ಎಂದು ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಅಪೂರ್ವ ದೀಕ್ಷಿತ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಿರುಸಿನ ನೀರಿನ ಹರಿವಿನಿಂದ ಎರಡು ಮರಿಯಾನೆಗಳು ನಿಯಂತ್ರಣ ಕಳೆದುಕೊಳ್ಳುತ್ತಿದ್ದವು. ಅವುಗಳನ್ನು ರಕ್ಷಿಸಲು ಮುಂದಾದ ವಯಸ್ಕ ಆನೆಗಳೂ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗುವ ಅಪಾಯ ಎದುರಾಗಿತ್ತು ಎಂದು ಅವರು ಹೇಳಿದರು.

ಮಾಹಿತಿ ಲಭ್ಯವಾದ ಕೂಡಲೇ ಕತಾರ್ನಿಯಾಘಾಟ್‌ ರೇಂಜ್‌ ಅಧಿಕಾರಿ ಹಾಗೂ ಸಿಬ್ಬಂದಿ ಗಿರ್ಜಾಪುರಿ ಬ್ಯಾರೇಜ್‌ಗೆ ಧಾವಿಸಿ ನೀರಾವರಿ ಇಲಾಖೆಯ ನೆರವು ಕೋರಿದರು. ನದಿಯ ನೀರಿನ ಹರಿವಿನ ವೇಗವನ್ನು ಕಡಿಮೆ ಮಾಡುವ ಉದ್ದೇಶದಿಂದ ನೀರಾವರಿ ಇಲಾಖೆ ಬ್ಯಾರೇಜ್‌ನ ಗೇಟ್‌ಗಳನ್ನು ಮುಚ್ಚಿತು. ಇದರಿಂದ ವಯಸ್ಕ ಆನೆಗಳಿಗೆ ಮತ್ತೆ ನೆಲದ ಮೇಲೆ ಕಾಲೂರಲು ಸಾಧ್ಯವಾಯಿತು. ಬಳಿಕ ಅವು ಮರಿಯಾನೆಗಳನ್ನು ಸ್ಥಿರಗೊಳಿಸಿ ಸುರಕ್ಷಿತ ಸ್ಥಳದತ್ತ ಕರೆದೊಯ್ದವು.ನಂತರ ಅರಣ್ಯ ಸಿಬ್ಬಂದಿ ಶಬ್ದ ಮಾಡುತ್ತಾ ಆನೆಗಳನ್ನು ಅರಣ್ಯದತ್ತ ತೆರಳುವಂತೆ ಮಾಡಿದರು. ಅಂತಿಮವಾಗಿ ಐದು ಆನೆಗಳೂ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಮರಳಿದವು.

ಹಿರಿಯ ಐಎಫ್‌ಎಸ್‌ ಅಧಿಕಾರಿ ಹಾಗೂ ವನ್ಯಜೀವಿ ತಜ್ಞ ಡಾ. ರಮೇಶ್‌ ಪಾಂಡೆ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಅರಣ್ಯ ಮತ್ತು ನೀರಾವರಿ ಇಲಾಖೆಗಳ ತ್ವರಿತ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ಎರಡೂ ಇಲಾಖೆಗಳ ನಡುವಿನ ಸಮಯೋಚಿತ ಸಮನ್ವಯ ಹಾಗೂ ರೇಂಜ್‌ ಸಿಬ್ಬಂದಿಯ ತಕ್ಷಣದ ಸ್ಪಂದನೆಯಿಂದ ದೊಡ್ಡ ವನ್ಯಜೀವಿ ದುರಂತವೊಂದು ತಪ್ಪಿದೆ ಎಂದು ಅವರು ಹೇಳಿದ್ದಾರೆ.

RELATED ARTICLES
spot_img

Latest News