Homeರಾಜ್ಯಐತಿಹಾಸಿಕ ಭೂತನಾಳ ಕೆರೆಯಲ್ಲಿ 6 ಶವಗಳು ಪತ್ತೆ, ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಶಂಕೆ

ಐತಿಹಾಸಿಕ ಭೂತನಾಳ ಕೆರೆಯಲ್ಲಿ 6 ಶವಗಳು ಪತ್ತೆ, ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಶಂಕೆ

Six, Including Two Boys, Found Dead In Vijayapura's Bhutnal Lake Vijayapura

ಬೆಂಗಳೂರು, ಆ.26- ಮನನೊಂದ ತಾಯಿ ತನ್ನ ಐವರು ಮಕ್ಕಳೊಂದಿಗೆ ವಿಜಯಪುರದ ಐತಿಹಾಸಿಕ ಭೂತನಾಳ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಆದರ್ಶ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಶೋಭಾ ಜಾಲಗೇರಿ (45) ಹಾಗೂ ಅವರ ಮಕ್ಕಳಾದ ವಿದ್ಯಾ (16), ಸುವರ್ಣ (14), ಗೌಡೇಶ್‌ (10), ಸಾನಿಕಾ (7) ಮತ್ತು ವಿಕಾಸ್‌ (5) ಎಂದು ಗುರುತಿಸಲಾಗಿದೆ.

ವಿಜಯಪುರ ನಗರದ ಭೂತನಾಳ ಕೆರೆಯಲ್ಲಿ ಮಹಿಳೆ ಹಾಗೂ ಐವರು ಮಕ್ಕಳ ಮೃತದೇಹಗಳು ಕೆರೆ ಅಂಚಿನಲ್ಲಿ ತೇಲುತ್ತಿರುವುದನ್ನು ವಾಯುವಿಹಾರಕ್ಕೆ ತೆರಳಿದ್ದವರು ಗಮನಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶೋಭಾ ಹಾಗೂ ಅವರ ಪತಿ ಭೀಮರಾಯ ಜಾಲಗೇರಿ ನಡುವೆ ಕೌಟುಂಬಿಕ ವಿಚಾರವಾಗಿ ಜಗಳ ನಡೆದಿತ್ತು ಎನ್ನಲಾಗಿದೆ. ಇದರಿಂದ ಮನನೊಂದಿದ್ದ ಶೋಭಾ, ಆ.24ರಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಐವರು ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರಗೆ ಹೋಗಿದ್ದರು. ಬಳಿಕ ಅವರು ಎಲ್ಲಿಗೆ ತೆರಳಿದ್ದಾರೆ ಎಂಬುದು ತಿಳಿದುಬಂದಿರಲಿಲ್ಲ.

ಪತ್ನಿ ಹಾಗೂ ಮಕ್ಕಳಿಗಾಗಿ ಭೀಮರಾಯ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ವಿಜಯಪುರ ಠಾಣೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.ಇಂದು ಭೂತನಾಳ ಕೆರೆಯಲ್ಲಿ ಆರು ಮಂದಿಯ ಮೃತದೇಹಗಳು ತೇಲುತ್ತಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಡಿವೈಎಸ್‌ಪಿ ನಾಗರಾಜ್‌, ಆದರ್ಶ ನಗರ ಠಾಣೆಯ ಪಿಎಸ್‌ಐ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ತಾಯಿ ಹಾಗೂ ಐವರು ಮಕ್ಕಳ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಹಾಗೂ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಯಿ ಮಕ್ಕಳನ್ನು ಕೆರೆಗೆ ತಳ್ಳಿರಬಹುದೇ ಅಥವಾ ಕೆರೆ ಬಳಿ ತೆರಳಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದೇ ಎಂಬ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.ಘಟನೆಯಿಂದ ಸ್ಥಳೀಯರು ಮಮ್ಮಲ ಮರುಗಿದ್ದಾರೆ. ಏನೂ ಅರಿಯದ ಮಕ್ಕಳು ದುರಂತ ಅಂತ್ಯ ಕಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಸ್ಥಳೀಯರು ಕಣ್ಣೀರಿಟ್ಟಿದ್ದಾರೆ.

RELATED ARTICLES
spot_img

Latest News