ನವದೆಹಲಿ, ಆ.27- ನಾಸಿಕ್ನಿಂದ ಕಂದಾ ಎಕ್ಸ್ಪ್ರೆಸ್ ವಿಶೇಷ ರೈಲುಗಳ ಮೂಲಕ ಐದು ಪ್ರಮುಖ ನಗರಗಳಿಗೆ 800 ಮೆಟ್ರಿಕ್ ಟನ್ ಈರುಳ್ಳಿ ಪೂರೈಸಲಾಗುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಚೆನ್ನೈ, ಮಧುರೈ, ದೆಹಲಿ, ಎರ್ನಾಕುಲಂ ಹಾಗೂ ಗುವಾಹಟಿ ನಗರಗಳಿಗೆ ಕಂದಾ ಎಕ್ಸ್ಪ್ರೆಸ್ ರೈಲಿನ ಮೂಲಕ ಈರುಳ್ಳಿ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಇತರೆ ನಗರಗಳಿಗೂ ಪೂರೈಕೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಬಫರ್ ದಾಸ್ತಾನಿನ ಈರುಳ್ಳಿಯನ್ನು ಕೆ.ಜಿ.ಗೆ 35 ರೂ. ದರದಲ್ಲಿ ಎನ್ಸಿಸಿಎಫ್, ನಾಫೆಡ್ ಹಾಗೂ ಕೇಂದ್ರೀಯ ಭಂಡಾರ್ ಮೂಲಕ ಶೀಘ್ರದಲ್ಲೇ ಗ್ರಾಹಕರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಕಂದಾ ಎಕ್ಸ್ಪ್ರೆಸ್ ರೈಲು ಸುಮಾರು 40 ಟ್ರಕ್ಗಳಿಗೆ ಸಮನಾದ ಸರಕನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ಬೃಹತ್ ಪ್ರಮಾಣದಲ್ಲಿ ಈರುಳ್ಳಿಯನ್ನು ಪ್ರಮುಖ ನಗರಗಳ ಮಾರುಕಟ್ಟೆಗಳಿಗೆ ತಲುಪಿಸಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಈರುಳ್ಳಿ ಪೂರೈಕೆ ಹಾಗೂ ಲಭ್ಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಬೆಲೆ ಸ್ಥಿರತೆ ಕಾಯ್ದುಕೊಳ್ಳುವುದರ ಜತೆಗೆ ಬೆಂಬಲ ಬೆಲೆ ಮೂಲಕ ರೈತರು ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲಾಗುತ್ತಿದೆ ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
