ಬೆಂಗಳೂರು, ಆ.27- ಜಾಗತಿಕ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರದಲ್ಲಿ ನಟಿಸಿರುವ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ನಿರೀಕ್ಷೆಯಂತೆ ಮೊದಲ ದಿನವೇ 100 ಕೋಟಿ ರೂ. ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ.
ಮಲಯಾಳಂ ಚಿತ್ರ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ಮೊದಲ ದಿನವೇ 100 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿರುವ ಸಿನಿಮಾ, ವಿದೇಶಿ ಮಾರುಕಟ್ಟೆಯಲ್ಲೂ ಉತ್ತಮ ಪ್ರದರ್ಶನ ಕಾಣುವ ಮೂಲಕ ಒಟ್ಟಾರೆ 140 ಕೋಟಿ ರೂ. ಗಡಿ ತಲುಪಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ನರ್ತಕಿ, ಸಂತೋಷ್, ತ್ರಿವೇಣಿ ಸೇರಿದಂತೆ ಹಲವು ಪ್ರಮುಖ ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಅಬ್ಬರ ಜೋರಾಗಿದೆ. ಮೊದಲ ದಿನವೇ ದೇಶಾದ್ಯಂತ ಒಟ್ಟು 24,579 ಶೋಗಳು ನಡೆದಿವೆ.
ಭಾಷಾವಾರು ಕಲೆಕ್ಷನ್
ಕನ್ನಡಕ್ಕಿಂತ ಹಿಂದಿ ಆವೃತ್ತಿಯಲ್ಲಿ ‘ಟಾಕ್ಸಿಕ್’ ಹೆಚ್ಚಿನ ಗಳಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ. ಹಿಂದಿ ಆವೃತ್ತಿಯ 16,670 ಶೋಗಳಿಂದ 55 ಕೋಟಿ ರೂ. ಸಂಗ್ರಹವಾಗಿದ್ದರೆ, ಕನ್ನಡ ಆವೃತ್ತಿಯ 2,031 ಶೋಗಳಿಂದ 23.30 ಕೋಟಿ ರೂ. ಗಳಿಸಿದೆ.
ತೆಲುಗು ಆವೃತ್ತಿಯ 3,258 ಶೋಗಳಿಂದ 16 ಕೋಟಿ ರೂ., ತಮಿಳು ಆವೃತ್ತಿಯ 2,140 ಶೋಗಳಿಂದ 5.50 ಕೋಟಿ ರೂ. ಹಾಗೂ ಮಲಯಾಳಂ ಆವೃತ್ತಿಯ 480 ಶೋಗಳಿಂದ 1.30 ಕೋಟಿ ರೂ. ಗಳಿಕೆ ಕಂಡಿದೆ ಎಂದು ವರದಿಯಾಗಿದೆ.
‘ಟಾಕ್ಸಿಕ್’ ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವಿದ್ದು, ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ವೆಂಕಟ್ ನಾರಾಯಣ್ ಹಾಗೂ ಯಶ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಎಲ್‌ಎಲ್‌ಪಿ ಅಡಿ ಚಿತ್ರವನ್ನು ನಿರ್ಮಿಸಿದ್ದಾರೆ. ರಾಜೀವ್ ರವಿ ಛಾಯಾಗ್ರಹಣ, ರವಿ ಬಸ್ರೂರು, ವಿಶಾಲ್ ಮಿಶ್ರಾ ಹಾಗೂ ತನಿಷ್ಕ್ ಬಾಗ್ಚಿ ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
